
ನವದೆಹಲಿ: ಸ್ಮೃತಿ ಮಂಧನಾ ಶನಿವಾರ ಆಸ್ಟ್ರೇಲಿಯಾ ವಿರುದ್ದ ಕೇವಲ 50 ಎಸೆತಗಳಲ್ಲೇ ಶತಕ ಪೂರೈಸಿದ್ದು, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 2ನೇ ವೇಗದಶತಕ ಎನಿಸಿಕೊಂಡಿದೆ. ಪಂದ್ಯದಲ್ಲಿ ಅವರು 63 ಎಸೆತಕ್ಕೆ 125 ರನ್ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಮಂಧನಾ ಯಶಸ್ವಿಯಾಗಿದ್ದಾರೆ.
ಹೌದು, ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ್ದು ಮಹಿಳಾ ಏಕದಿನದಲ್ಲಿ ಈಗಲೂ ದಾಖಲೆ. ಇನ್ನು, ಸ್ಮೃತಿ ಭಾರತೀಯರ(ಪುರುಷ, ಮಹಿಳಾ ಏಕದಿನ ಸೇರಿ) ಪೈಕಿ ಅತಿ ವೇಗದ ಶತಕ ಗಳಿಸಿದರು. 2013ರಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ಅದನ್ನು ಸ್ಮೃತಿ ಮುರಿದಿದ್ದಾರೆ. ಅಲ್ಲದೆ, ಮಹಿಳಾ ಏಕದಿನದಲ್ಲಿ ಗರಿಷ್ಠ ಶತಕ ಬಾರಿಸಿದವರ ಪಟ್ಟಿಯಲ್ಲಿ ಸ್ಮೃತಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಅವರು 13 ಶತಕ ಬಾರಿಸಿದ್ದಾರೆ. ಮೆಗ್ ಲ್ಯಾನಿಂಗ್ 15, ನ್ಯೂಜಿಲೆಂಡ್‌ನ ಸುಜೀ ಬೇಟ್ಸ್ 13 ಶತಕ ಬಾರಿಸಿದ್ದಾರೆ. ಮೆಗ್ ಲ್ಯಾನಿಂಗ್ ಗರಿಷ್ಠ ಶತಕ ದಾಖಲೆ ಅಳಿಸಿ ಹಾಕಲು ಇನ್ನು ಕೇವಲ ಮೂರು ಶತಕಗಳ ಅಗತ್ಯವಿದೆ. ಸದ್ಯದ ಫಾರ್ಮ್ ಗಮನಿಸಿದರೆ, ಮುಂಬರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಂಧನಾ ಹೊಸ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
ನವದೆಹಲಿ: ಸ್ಮೃತಿ ಮಂಧನಾ ಹಾಗೂ ಇತರ ಬ್ಯಾಟರ್‌ಗಳ ತೀವ್ರ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 43 ರನ್‌ಗಳಲ್ಲಿ ಸೋಲನುಭವಿಸಿದೆ. ಇದರೊಂದಿಗೆ ಐತಿಹಾಸಿಕ ಸರಣಿ ಗೆಲುವಿನ ಕನಸು ಭಗ್ನಗೊಂಡಿತು. ಆಸೀಸ್ 2-1ರಲ್ಲಿ ಸರಣಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸೀಸ್ 47.5 ಓವರ್‌ಗಳಲ್ಲಿ 412ಕ್ಕೆ ಆಲೌಟಾಯಿತು. ಬೆಥ್ ಮೂನಿ 138, ಜಾರ್ಜಿಯಾ ವೊಲ್ 81, ಎಲೈಸಿ ಪೆರಿ 68 ರನ್ ಸಿಡಿಸಿದರು. ಬೃಹತ್ ಗುರಿ ಬೆನ್ನತ್ತಿದ ಭಾರತ, 47 ಓವರ್‌ಗಳಲ್ಲಿ 369ಕ್ಕೆ ಆಲೌಟಾಯಿತು. ಸ್ಮೃತಿ 63 ಎಸೆತಕ್ಕೆ 125 ರನ್ ಸಿಡಿಸಿದರೆ, ಹರ್ಮನ್‌ಪ್ರೀತ್ 52, ದೀಪ್ತಿ ಶರ್ಮಾ 72 ರನ್ ಕೊಡುಗೆ ನೀಡಿದರು. 8ನೇ ವಿಕೆಟ್ ರೂಪದಲ್ಲಿ ದೀಪ್ತಿ ಔಟಾಗುವುದರೊಂದಿಗೆ ಭಾರತದ ಗೆಲುವಿನ ಕನಸು ಭಗ್ನಗೊಂಡಿತು.
ಕಠಿಣ ಗುರಿಯ ಹೊರತಾಗಿಯೂ ಭಾರತ ಮಹಿಳಾ ಕ್ರಿಕೆಟ್ ತಂಡದ ದಿಟ್ಟ ಹೋರಾಟ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬಿಸಿಸಿಐ ಚುನಾವಣೆ: ಅಧ್ಯಕ್ಷ ರೇಸಿಗೆ ಕನ್ನಡಿಗ ರಘುರಾಮ್ ಎಂಟ್ರಿ
ನವದೆಹಲಿ: ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ಅಧ್ಯಕ್ಷರಾಗಿರುವ ರಘುರಾಮ್ ಭಟ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿ ದ್ದಾರೆ ಎಂದು ತಿಳಿದುಬಂದಿದೆ. ಸೆ.28ಕ್ಕೆ ಚುನಾವಣೆ ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಶನಿವಾರ ಇಲ್ಲಿ ಕೆಲ ಅನುಭವಿ ಬಿಸಿಸಿಐ ಆಡಳಿತಗಾರರು, ಪ್ರಮುಖರು ಅನೌಪಚಾರಿಕ ಸಭೆ ನಡೆಸಿದರು.
ಸಭೆಯಲ್ಲಿ ರಘುರಾಮ್‌ರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆ ಹೆಚ್ಚಿನವರು ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಚುನಾವಣೆಗೆ ಒಮ್ಮ ತದ ಅಭ್ಯರ್ಥಿಯಾಗಿ ನಿಲ್ಲಿಸಿ, ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಕಿರಣ್ ಮೋರೆ, ಹರ್ಭಜನ್, ಗಂಗೂಲಿ ಹೆಸರು ಕೂಡಾ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.