ಇಂದಿನಿಂದ ಮಹಿಳಾ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲಿಂದು ಭಾರತ-ಶ್ರೀಲಂಕಾ ಫೈಟ್!

Published : Sep 30, 2025, 10:02 AM IST
India Women's ODI World Cup 2025

ಸಾರಾಂಶ

13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿವೆ. ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, 47 ವರ್ಷಗಳ ಟ್ರೋಫಿ ಬರ ನೀಗಿಸಲು ಭಾರತ ತಂಡ ತವರಿನಲ್ಲಿ ಸೆಣಸಾಡಲಿದೆ.

ಗುವಾಹಟಿ: 13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಮಂಗಳವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯದಲ್ಲಿಂದು ಪರಸ್ಪರ ಸೆಣಸಾಡಲಿವೆ. ಭಾರತವನ್ನು ಹರ್ಮನ್‌ಪ್ರೀತ್ ಮುನ್ನಡೆಸಲಿದ್ದು, ಶ್ರೀಲಂಕಾ ತಂಡಕ್ಕೆ ಚಾಮರಿ ಅಟ್ಟಪಟ್ಟು ನಾಯಕತ್ವ ವಹಿಸಲಿದ್ದಾರೆ.

ಟೂರ್ನಿ ನ.2ರ ವರೆಗೂ ನಡೆಯಲಿದ್ದು, ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ, ಲಂಕಾ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಭಾರತದ 4 ನಗರಗಳಾದ ನವಿ ಮುಂಬೈ, ಗುವಾಹಟಿ, ವಿಶಾಖಪಟ್ಟಣಂ, ಇಂದೋರ್‌ ಹಾಗೂ ಶ್ರೀಲಂಕಾದ ಕೊಲಂಬೊ ಆತಿಥ್ಯ ವಹಿಸಲಿವೆ. 28 ರೌಂಡ್ ರಾಬಿನ್ ಹಂತದ ಪಂದ್ಯಗಳ ಪೈಕಿ 11 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ನವಿ ಮುಂಬೈ, ಗುವಾಹಟಿ/ಕೊಲಂಬೊದಲ್ಲಿ, ಫೈನಲ್ ಪಂದ್ಯ ನವಿ ಮುಂಬೈ ಅಥವಾ ಕೊಲಂಬೊದಲ್ಲಿ ನಿಗದಿಯಾಗಿದೆ.

ಟೂರ್ನಿ ಮಾದರಿ ಹೇಗೆ?: 

ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ, ಗುಂಪುಗಳನ್ನಾಗಿ ವಿಂಗಡಿಸದೆ ಎಲ್ಲಾ 8 ತಂಡಗಳನ್ನು ಒಂದೇ ಗುಂಪಿನಲ್ಲಿಡಲಾಗಿದೆ. ಈ ಹಂತದಲ್ಲಿ ಪ್ರತಿ ತಂಡ ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಎಲ್ಲಾ ತಂಡಕ್ಕೂ ತಲಾ 1 ಪಂದ್ಯ. ಅಗ್ರ-4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

47 ವರ್ಷದ ಕಪ್ ಬರ ನೀಗಿಸುತ್ತಾ ಭಾರತ?

1973ರಿಂದ ಐಸಿಸಿ ಮಹಿಳಾ ಏಕದಿನ ವಿಶಕಪ್ ನಡೆಯುತ್ತಿದೆ. ಭಾರತ 1978ರಿಂದ ವಿಶ್ವಕಪ್‌ನಲ್ಲಿ ಆಡುತ್ತಿದೆ. ಆದರೆ ಒಮ್ಮೆಯೂ ತಂಡ ಚಾಂಪಿಯನ್ ಆಗಿಲ್ಲ. 2 ಬಾರಿ(2005, 2017) ರನ್ನರ್-ಅಪ್ ಆಗಿದ್ದೇ ತಂಡದ ಸಾಧನೆ. ಆದರೆ ಈ ಬಾರಿ ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಭಾರತ ತನ್ನ 47 ವರ್ಷಗಳ ಟ್ರೋಫಿ ಬರ ನೀಗಿಸಲು ಎದುರು ನೋಡುತ್ತಿದೆ. ತಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಚಾಂಪಿಯನ್ ಆಗಿಲ್ಲ. 2020ರಲ್ಲಿ ರನ್ನರ್-ಅಪ್ ಆಗಿತ್ತು.

ಗೆದ್ದ ತಂಡಕ್ಕೆ ₹40 ಕೋಟಿ!

ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಗೆಲ್ಲುವ ತಂಡಕ್ಕೆ ಬರೋಬ್ಬರಿ ₹39.55 ಕೋಟಿ ರು. ನಗದು ಬಹುಮಾನ ಲಭಿಸಲಿದೆ. ಟೂರ್ನಿ ಒಟ್ಟು ₹122.5 ಕೋಟಿ ರು. ಬಹುಮಾನ ಮೊತ್ತ ಹೊಂದಿದೆ. ಇದು 2022ರ ವಿಶ್ವಕಪ್‌ಗೆ ಹೋಲಿಸಿದರೆ ಶೇಕಡಾ 297ರಷ್ಟು ಹೆಚ್ಚು. ಅಂದು ಒಟ್ಟು 31 ಕೋಟಿ ನಗದು ಬಹುಮಾನವಿತ್ತು. ವಿಜೇತ ಆಸ್ಟ್ರೇಲಿಯಾ ತಂಡಕ್ಕೆ *11.65 ಕೋಟಿ ಲಭಿಸಿದ್ದರೆ, ರನ್ನರ್- ಇಂಗ್ಲೆಂಡ್ ಕ5.30 ಕೋಟಿ ಪಡೆದಿತ್ತು.

ಭಾರತ ಪಂದ್ಯಗಳ ವೇಳಾಪಟ್ಟಿ

ಸೆಪ್ಟೆಂಬರ್ 30 - ಭಾರತ-ಶ್ರೀಲಂಕಾ, ಗುವಾಹಟಿ

ಅಕ್ಟೋಬರ್ 05 - ಭಾರತ-ಪಾಕಿಸ್ತಾನ, ಕೊಲಂಬೊ

ಅಕ್ಟೋಬರ್ 09 - ಭಾರತ-ದಕ್ಷಿಣ ಆಫ್ರಿಕಾ, ವಿಶಾಖಪಟ್ಟಣಂ

ಅಕ್ಟೋಬರ್ 12 - ಭಾರತ-ಆಸ್ಟ್ರೇಲಿಯಾ, ವಿಶಾಖಪಟ್ಟಣಂ

ಅಕ್ಟೋಬರ್ 19 - ಭಾರತ-ಇಂಗ್ಲೆಂಡ್, ಇಂದೋರ್

ಅಕ್ಟೋಬರ್ 23 - ಭಾರತ-ನ್ಯೂಜಿಲೆಂಡ್, ನವಿ ಮುಂಬೈ

ಅಕ್ಟೋಬರ್ 26 - ಭಾರತ-ಬಾಂಗ್ಲಾದೇಶ, ನವಿ ಮುಂಬೈ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?
ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!