
ನವದೆಹಲಿ/ಢಾಕಾ: ರದ್ದುಗೊಳ್ಳಲಿದೆ ಎಂದೇ ಹೇಳಲಾಗುತ್ತಿದ್ದ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಬಗ್ಗೆ ಈಗ ಋಣಾತ್ಮಕ ವರದಿಗಳು ಹೊರಬರುತ್ತಿವೆ. ಟೂರ್ನಿ ಸೆಪ್ಟೆಂಬರ್‌ನಲ್ಲಿ ಆಯೋಜನೆಗೊಳ್ಳಲಿದ್ದು, ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೂ ಇರಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಖ್ಯಸ್ಥರಾಗಿರುವ ಎಸಿಸಿ ಸಭೆ ಗುರುವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಿತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಏಷ್ಯಾಕಪ್ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಘೋಷಣೆಯಾಗುವ ನಿರೀಕ್ಷೆಯಿದೆ.
‘ಬಿಸಿಸಿಐ ಆತಿಥ್ಯ ಹೊಂದಿರುವ ಏಷ್ಯಾಕಪ್ ಈ ಬಾರಿ ಯುಎಇಯಲ್ಲಿ ನಡೆಯಲಿದೆ. ಭಾರತ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಬಹುದು. ವೇಳಾಪಟ್ಟಿ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ’ ಎಂದು ಎಸಿಸಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಭಾರತ, ಪಾಕ್ ತಂಡಗಳು ಒಂದೇ ಗುಂಪಿನಲ್ಲಿರಲಿವೆ. ದುಬೈ, ಅಬುಧಾಬಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಒಮಾನ್ ಹಾಗೂ ಹಾಂಕಾಂಗ್ ಕೂಡಾ ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಷ್ಯಾ ಕಪ್ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಪಾಕಿಸ್ತಾನದ ಜೊತೆ ಆಟ ಆಡಬಾರದು ಎಂಬ ಬೇಡಿಕೆ ಮತ್ತು ಭಾರತದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಹೇಳಿದ್ದರಿಂದ ಟೂರ್ನಿ ನಡೆಯುವುದೇ ಅನುಮಾನವಾಗಿತ್ತು. ಏಷ್ಯಾ ಕಪ್‌ನ ಭವಿಷ್ಯ ನಿರ್ಧರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ಎಸಿಸಿ) ವಾರ್ಷಿಕ ಸಭೆ ಧಾಕಾದಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಭಾರತ ಕೇಳಿಕೊಂಡಿತ್ತು. ಆದರೆ ಎಸಿಸಿ ಅಧ್ಯಕ್ಷ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೆಹ್ಸಿನ್ ನಖ್ವಿ ಒಪ್ಪದೇ ಇದ್ದುದರಿಂದ ಸಮಸ್ಯೆ ಉಲ್ಬಣಿಸಿತ್ತು. ಸೆಪ್ಟೆಂಬರ್ 5 ರಂದು ಆರಂಭವಾಗುವ ಟೂರ್ನಿಯಲ್ಲಿ 7 ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ನಿರೀಕ್ಷೆಯಿದೆ.
ದುಬೈ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಮುಂದಿನ ವರ್ಷ ಟಿ20 ವಿಶ್ವಕಪ್ ಇರುವುದರಿಂದ ಈ ಬಾರಿ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಏಕದಿನ ವಿಶ್ವಕಪ್ ಇದ್ದುದರಿಂದ ಏಕದಿನ ಮಾದರಿಯಲ್ಲಿ ನಡೆದಿತ್ತು. ಏಷ್ಯಾ ಕಪ್‌ನ ಹಾಲಿ ಚಾಂಪಿಯನ್ ಭಾರತ. ಕಳೆದ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಭಾರತ ಪ್ರಶಸ್ತಿ ಗೆದ್ದಿತ್ತು.
2026ಕ್ಕೆ ಇಂಗ್ಲೆಂಡ್‌ನಲ್ಲಿ ಭಾರತ ಪುರುಷರಿಗೆ 5 ಟಿ20, 3 ಏಕದಿನ
ಮ್ಯಾಂಚೆಸ್ಟರ್: ಸದ್ಯ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಭಾರತ ಪುರುಷರ ಕ್ರಿಕೆಟ್ ತಂಡ 2026ರಲ್ಲೂ ಆಂಗ್ಲರ ನಾಡಿಗೆ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳು 5 ಟಿ20, 3 ಏಕದಿನ ಸರಣಿಗಳಲ್ಲಿ ಪಾಲ್ಗೊಳ್ಳಲಿವೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಘೋಷಿಸಿವೆ.
2026ರ ಜು.1ರಿಂದ ಸರಣಿ ಆರಂಭಗೊಳ್ಳಲಿದೆ. 5 ಟಿ20 ಪಂದ್ಯಗಳು ಜು.1(ಡರ್ಹಮ್), ಜು.4(ಮ್ಯಾಂಚೆಸ್ಟರ್), ಜು.7(ನಾಟಿಂಗ್‌ಹ್ಯಾಮ್), ಜು.9(ಬ್ರಿಸ್ಟೋಲ್) ಹಾಗೂ ಜು.11(ಸೌಥಾಂಪ್ಟನ್)ರಂದು ನಡೆಯಲಿವೆ. ಬಳಿಕ ಜು.14ಕ್ಕೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಏಕದಿನ ಪಂದ್ಯ ನಿಗದಿಯಾಗಿದ್ದು, ಇನ್ನೆರಡು ಪಂದ್ಯಗಳು ಜು.16 ಹಾಗೂ 19ರಂದು ಕ್ರಮವಾಗಿ ಕಾರ್ಡಿಫ್ ಹಾಗೂ ಲಾರ್ಡ್ಸ್‌ನಲ್ಲಿ ನಡೆಯಲಿವೆ.
ಭಾರತ ಮಹಿಳಾ ತಂಡ ಕೂಡಾ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಸರಣಿ ಆಡಲಿದೆ. ಮೇ 28, ಮೇ 30 ಹಾಗೂ ಜೂ.2ರಂದು ಏಕದಿನ ಪಂದ್ಯಗಳು ನಡೆಯಲಿವೆ. ಏಕೈಕ ಟೆಸ್ಟ್ ಪಂದ್ಯ ಜು.10ರಂದು ಲಾರ್ಡ್ಸ್‌ನಲ್ಲಿ ಆರಂಭಗೊಳ್ಳಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.