* ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿಂದು ಕೊನೆಯ ಪಂದ್ಯದಲ್ಲಿ
* ಕೊಲಂಬೊದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ
* 2 ಪಂದ್ಯ ಸೋತಿರುವ ಬಾಂಗ್ಲಾದೇಶ ಎದುರು 2 ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಸವಾಲು
ಕೊಲಂಬೊ(ಸೆ.15): ಏಷ್ಯಾಕಪ್ ಸೂಪರ್-4ನಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ, ಪ್ರಶಸ್ತಿ ಫೈಟ್‌ಗೆ ರಿಹರ್ಸಲ್ ಎಂಬಂತೆ ಶುಕ್ರವಾರ ಸೂಪರ್-4ನ ಕೊನೆ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ರೋಹಿತ್ ನಾಯಕತ್ವದ ಭಾರತ ಮತ್ತೊಂದು ಜಯದೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಲು ಕಾಯುತ್ತಿದ್ದರೆ, ಬಾಂಗ್ಲಾ ತಂಡ ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾತರಿಸುತ್ತಿದೆ.
ಈ ಪಂದ್ಯ ಭಾರತದ ಪಾಲಿಗೆ ಅಷ್ಟೇನೂ ಮಹತ್ವವಲ್ಲದ ಕಾರಣ ತಂಡದಲ್ಲಿ ಕೆಲ ಬದಲಾವಣೆ ಬಹುತೇಕ ಖಚಿತ. ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮದ್ ಸಿರಾಜ್ ಪೈಕಿ ಒಬ್ಬರಿಗೆ ಬಾಂಗ್ಲಾ ವಿರುದ್ಧ ವಿಶ್ರಾಂತಿ ಸಿಗುವ ಸಾಧ್ಯತೆಯಿದ್ದು, ಅನುಭವಿ ವೇಗಿ ಮೊಹಮದ್ ಶಮಿ ಆಡುವ ಬಳಗದಲ್ಲಿ ಕಾಣಸಿಕೊಳ್ಳಬಹುದು. ಬ್ಯಾಟಿಂಗ್ ವಿಭಾಗದಲ್ಲೂ ಟೀಂ ಇಂಡಿಯಾ ಕೆಲ ಪ್ರಯೋಗಗಳನ್ನು ನಡೆಸಿದರೂ ಅಚ್ಚರಿಯಿಲ್ಲ. ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಸೂರ್ಯಕುಮಾರ್ ಯಾದವ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಅವರಿಗೆ ಇಶಾನ್ ಕಿಶನ್ ಜಾಗ ಬಿಟ್ಟು ಕೊಡಬೇಕಾಗಬಹುದು.
undefined
ಇಂದಿನಿಂದ ಏಕದಿನ ವಿಶ್ವಕಪ್ ಸೆಮಿ, ಫೈನಲ್ ಟಿಕೆಟ್ ಮಾರಾಟ..!
ಮತ್ತೊಂದೆಡೆ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಶ್ರೇಯಸ್ ಅಯ್ಯರ್ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರುವ ಸಾಧ್ಯತೆಯಿದೆ. ಆದರೆ ಅವರನ್ನು ಆಡಿಸಲು ಆಯ್ಕೆ ಸಮಿತಿ ತಯಾರಿದೆಯೇ ಅಥವಾ ಮುನ್ನೆಚ್ಚರಿಕೆ ಕ್ರಮವಾಗಿ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಿದೆಯೇ ಎಂಬ ಪ್ರಶ್ನೆಗೆ ಟಾಸ್ ಆದ ಮೇಲಷ್ಟೇ ಉತ್ತರ ಸಿಗಲಿದೆ.
ಬಾಂಗ್ಲಾಕ್ಕೆ ಜಯದ ತುಡಿತ: ಸೂಪರ್-4ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋತಿರುವ ಬಾಂಗ್ಲಾ ಇನ್ನಷ್ಟೇ ಜಯದ ಖಾತೆ ತೆರೆಯಬೇಕಿದೆ. ಹೀಗಾಗಿ ತಂಡ ಈ ಪಂದ್ಯದಲ್ಲಿ ಗೆದ್ದರೂ ಯಾವುದೇ ಉಪಯೋಗವಿಲ್ಲ. ತಂಡದ ತಾರಾ ಬ್ಯಾಟರ್ ಮುಷ್ಫಿಕುರ್ ರಹೀಂ ಈ ಪಂದ್ಯಕ್ಕೆ ಗೈರಾಗಲಿದ್ದು, ಲಿಟನ್ ದಾಸ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಕಂಡ ಟಾಪ್ 6 ಕ್ರಿಕೆಟಿಗರಿವರು..! ಎಲೈಟ್ ಕ್ಲಬ್ ಸೇರಿದ ಕೊಹ್ಲಿ
ಒಟ್ಟು ಮುಖಾಮುಖಿ: 39
ಭಾರತ: 31
ಬಾಂಗ್ಲಾ: 07
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಇಶಾನ್ ಕಿಶನ್/ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ/ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ನೈಮ್, ಮೆಹಿದಿ ಹಸನ್, ಲಿಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ನಜ್ಮುಲ್ ಹೊಸೈನ್ ಶಾಂಟೋ, ತೌಹೀದ್, ಶಮೀಮ್, ತಸ್ಕಿನ್ ಅಹಮ್ಮದ್, ಶೊರೀಫುಲ್ ಹಸನ್, ಮಹ್ಮೂದ್, ನಸುಮ್ ಅಹ್ಮದ್.
ಪಂದ್ಯ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಕೊಲಂಬೊ ಕ್ರೀಡಾಂಗಣದ ಪಿಚ್‌ನಲ್ಲಿ ಈವರೆಗೆ ಸ್ಪಿನ್ನರ್‌ಗಳೇ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಇಲ್ಲಿನ ಇತಿಹಾಸ ಗಮನಿಸಿದರೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟರ್‌ಗಳಿಗೆ ಅಲ್ಪ ನೆರವು ನೀಡುವ ಸಾಧ್ಯತೆಯಿದೆ. ಗುರಿ ಬೆನ್ನತ್ತುವ ತಂಡಕ್ಕೆ ರನ್ ಗಳಿಸುವುದು ಕಷ್ಟವಾಗಬಹುದು. ಹೀಗಾಗಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಅಧಿಕ.
ಪಂದ್ಯಕ್ಕೆ ಮಳೆ ಭೀತಿ
ಕೊಲಂಬೊದಲ್ಲಿ ಇನ್ನೂ ಮಳೆ ಸಂಪೂರ್ಣ ನಿಂತಿಲ್ಲ. ಶುಕ್ರವಾರವೂ ನಗರದಲ್ಲಿ ಮಳೆ ಭೀತಿ ಇದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಮಳೆಯಿಂದ ಪಂದ್ಯ ರದ್ದಾರೆ ಇತ್ತಂಡಗಳು ಅಂಕ ಹಂಚಿಕೊಳ್ಳಲಿವೆ.