Asia Cup 2023: ಉದ್ಘಾಟನಾ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದ ಪಾಕಿಸ್ತಾನ!

By Naveen Kodase  |  First Published Aug 31, 2023, 7:37 AM IST

ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡಿದ ಪಾಕಿಸ್ತಾನ
ನೇಪಾಳ ಎದುರು 238 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಬಾಬರ್ ಅಜಂ ಪಡೆ
ಆಕರ್ಷಕ ಶತಕ ಚಚ್ಚಿದ ಬಾಬರ್ ಅಜಂ, ಇಫ್ತಿಕಾರ್ ಅಹಮ್ಮದ್ ಜೋಡಿ


ಮುಲ್ತಾನ್‌(ಆ.31): 15 ವರ್ಷಗಳ ಬಳಿಕ ತವರಿನಲ್ಲಿ ಏಷ್ಯಾಕಪ್‌ ಪಂದ್ಯವನ್ನಾಡಿದ ಪಾಕಿಸ್ತಾನ, ನೇಪಾಳ ವಿರುದ್ಧ 238 ರನ್‌ ಗೆಲುವು ಸಾಧಿಸುವ ಮೂಲಕ ಈ ಸಲದ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ನಾಯಕ ಬಾಬರ್‌ ಆಜಂ ಹಾಗೂ ಇಫ್ತಿಕಾರ್ ಅಹ್ಮದ್‌ರ ಶತಕ, ಬೌಲರ್‌ಗಳ ಸಂಘಟಿತ ಪ್ರದರ್ಶನ ಪಾಕಿಸ್ತಾನಕ್ಕೆ 2 ಅಂಕ ತಂದುಕೊಟ್ಟಿದ್ದು, ಉತ್ತಮ ನೆಟ್‌ ರನ್‌ರೇಟ್‌ ಸಹ ಸಂಪಾದಿಸಿದೆ.

ನಿರೀಕ್ಷೆಯಂತೆ ಪಂದ್ಯ ಏಕಪಕ್ಷೀಯವಾಗಿ ನಡೆಯಿತು. ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತ ಕಂಡರೂ, ಬಾಬರ್‌ ಹಾಗೂ ಇಫ್ತಿಕಾರ್‌ರ 214 ರನ್‌ ಜೊತೆಯಾಟ ತಂಡ 6 ವಿಕೆಟ್‌ಗೆ 342 ರನ್‌ಗಳ ಬೃಹತ್‌ ಮೊತ್ತ ಪೇರಿಸಲು ನೆರವಾಯಿತು.

Tap to resize

Latest Videos

ನೇಪಾಳದ ಇನ್ನಿಂಗ್ಸ್‌ ಮೊದಲ 2 ಓವರ್‌ಗಳಲ್ಲೇ ಹಳಿ ತಪ್ಪಿತು. ಮೊದಲ ಓವರ್‌ನಲ್ಲೇ ಶಾಹಿನ್‌ ಶಾ ಅಫ್ರಿದಿ 2 ವಿಕೆಟ್‌ ಉರುಳಿಸಿದರೆ, 2ನೇ ಓವರಲ್ಲಿ ನಸೀಂ ಶಾ ಮತ್ತೊಂದು ವಿಕೆಟ್‌ ಕಿತ್ತರು. 14 ರನ್‌ಗೆ ನೇಪಾಳ 3 ವಿಕೆಟ್‌ ಕಳೆದುಕೊಂಡಿತು.

ವಿಶ್ವಕಪ್‌ ಸಿದ್ದತೆಗೆ ಇಂದಿನಿಂದ ಏಷ್ಯಾಕಪ್..!

ಆರಿಫ್‌ ಶೇಕ್‌(26) ಹಾಗೂ ಸೋಮ್ಪಾಲ್‌ ಕಮಿ(28) ನಡುವೆ 4ನೇ ವಿಕೆಟ್‌ಗೆ 59 ರನ್‌ ಜೊತೆಯಾಟ ಮೂಡಿಬಂದಿದ್ದು ನೇಪಾಳಕ್ಕೆ ಸಮಾಧಾನ ತಂದಿತು. ಮಧ್ಯ ಓವರ್‌ಗಳಲ್ಲಿ ಹ್ಯಾರಿಸ್‌ ರೌಫ್‌ ಮಾರಕ ದಾಳಿ ನಡೆಸಿದರೆ, ಸ್ಪಿನ್ನರ್‌ ಶದಾಬ್‌ ಖಾನ್‌ 4 ವಿಕೆಟ್‌ ಕಬಳಿಸಿದರು. ನೇಪಾಳ 23.4 ಓವರಲ್ಲಿ 104 ರನ್‌ಗೆ ಆಲೌಟ್‌ ಆಯಿತು.

Pakistan register a massive victory to start off their Asia Cup campaign 💪 | 📝: https://t.co/1gff7IhTyI pic.twitter.com/Q5RMdNchlB

— ICC (@ICC)

ಬಾಬರ್‌-ಇಫ್ತಿಕಾರ್‌ ಮಿಂಚು: ಪಾಕಿಸ್ತಾನ 25 ರನ್‌ ಗಳಿಸುವಷ್ಟರಲ್ಲಿ ಫಖರ್‌ ಜಮಾನ್‌(14) ಹಾಗೂ ಇಮಾಮ್‌-ಉಲ್‌-ಹಕ್‌(05)ರ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಯಶಸ್ಸಿನ ಲಾಭವೆತ್ತಲು ನೇಪಾಳ ವಿಫಲವಾಯಿತು. 3ನೇ ವಿಕೆಟ್‌ಗೆ ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ 86 ರನ್‌ ಸೇರಿಸಿ ತಂಡವನ್ನು ಮೇಲೇತ್ತಿದರು. 44 ರನ್‌ ಗಳಿಸಿದ್ದಾಗ ರಿಜ್ವಾನ್‌ ಅನಗತ್ಯವಾಗಿ ರನೌಟ್‌ ಬಲೆಗೆ ಬಿದ್ದರು. ಬಳಿಕ ಶುರುವಾಗಿದ್ದು, ಬಾಬರ್‌ ಹಾಗೂ ಇಫ್ತಿಕಾರ್‌ರ ಸ್ಫೋಟಕ ಆಟ.

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಇಸ್ರೋ, ಚಂದ್ರಯಾನ-3ಗೆ ಸಿಕ್ಕಿತು ಮತ್ತೊಂದು ಹಿರಿಮೆ!

ಈ ಜೋಡಿಯು ನೇಪಾಳ ಬೌಲರ್‌ಗಳನ್ನು ಚೆಂಡಾಡಿತು. ಬಾಬರ್‌ ಏಕದಿನದಲ್ಲಿ 19ನೇ ಶತಕ ಪೂರೈಸಿದರೆ, ಇಫ್ತಿಕಾರ್‌ ಚೊಚ್ಚಲ ಶತಕ ಸಿಡಿಸಿದರು. 131 ಎಸೆತದಲ್ಲಿ 14 ಬೌಂಡರಿ, 4 ಸಿಕ್ಸರ್‌ನೊಂದಿಗೆ 151 ರನ್‌ ಗಳಿಸಿ ಬಾಬರ್‌ ಔಟಾದರೆ, 71 ಎಸೆತದಲ್ಲಿ 11 ಬೌಂಡರಿ, 4 ಸಿಕ್ಸರ್‌ನೊಂದಿಗೆ 109 ರನ್‌ ಸಿಡಿಸಿ ಇಫ್ತಿಕಾರ್‌ ಔಟಾಗದೆ ಉಳಿದರು. ಕೊನೆಯ 10 ಓವರಲ್ಲಿ ಪಾಕಿಸ್ತಾನ 129 ರನ್‌ ಚಚ್ಚಿತು.

ಸ್ಕೋರ್‌: 
ಪಾಕಿಸ್ತಾನ 50 ಓವರಲ್ಲಿ 342/6 (ಬಾಬರ್‌ 151, ಇಫ್ತಿಕಾರ್‌ 109*, ಸೋಮ್ಪಾಲ್‌ 2-85) 
ನೇಪಾಳ 23.4 ಓವರಲ್ಲಿ 104/10 (ಸೋಮ್ಪಾಲ್‌ 28, ಆರಿಫ್‌ 26, ಶದಾಬ್‌ 4-27, ರೌಫ್‌ 2-16, ಶಾಹೀನ್‌ 2-27) 
ಪಂದ್ಯಶ್ರೇಷ್ಠ: ಬಾಬರ್‌ ಆಜಂ

ಟರ್ನಿಂಗ್‌ ಪಾಯಿಂಟ್‌

ಪಾಕಿಸ್ತಾನ 28ನೇ ಓವರಲ್ಲಿ 124 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದಾಗ ಬಾಬರ್‌ ಹಾಗೂ ಇಫ್ತಿಕಾರ್‌ ನಡುವೆ 5ನೇ ವಿಕೆಟ್‌ಗೆ ಮೂಡಿಬಂದ ದ್ವಿಶತಕದ ಜೊತೆಯಾಟ ಪಾಕಿಸ್ತಾನವನ್ನು ಗೆಲುವಿನ ಹೊಸ್ತಿಲಿಗೆ ತಲುಪಿಸಿತು. ಬೃಹತ್‌ ಗುರಿ ನೋಡಿಯೇ ನಡುಗಿದ ನೇಪಾಳ ಬ್ಯಾಟಿಂಗ್‌ನಲ್ಲಿ ಹೋರಾಟ ತೋರದೆ ಸೋಲೊಪ್ಪಿಕೊಂಡಿತು.

ಬಾಬರ್‌ ವೇಗದ 19 ಏಕದಿನ ಶತಕ!

ಬಾಬರ್‌ ಆಜಂ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 19 ಶತಕ ದಾಖಲಿಸಿದ ಆಟಗಾರ ಎನಿಸಿದ್ದಾರೆ. ಅವರು 102 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ದ.ಆಫ್ರಿಕಾದ ಹಾಶೀಂ ಆಮ್ಲಾ(104 ಇನ್ನಿಂಗ್ಸ್‌)ರ ದಾಖಲೆ ಮುರಿದಿದ್ದಾರೆ. 19 ಶತಕಗಳಿಗೆ ವಿರಾಟ್‌ ಕೊಹ್ಲಿ 124, ಡೇವಿಡ್‌ ವಾರ್ನರ್‌ 139, ಎಬಿ ಡಿ ವಿಲಿಯರ್ಸ್‌ 171 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

click me!