ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. 267 ರನ್ ಟಾರ್ಗೆಟ್ ಚೇಸ್ ಮಾಡಲು ಮಳೆ ಅನುವು ಮಾಡಿಕೊಡಲೇ ಇಲ್ಲ. ಹೀಗಾಗಿ ಪಂದ್ಯ ರದ್ದು ಮಾಡಲಾಗಿದೆ. ಉಭಯ ತಂಡ ಒಂದೊಂದು ಅಂಕ ಹಂಚಿಕೊಂಡಿದೆ.
ಪಲ್ಲಕೆಲೆ(ಸೆ.02) ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಸವಿ ಅನುಭವಿಸಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮಹತ್ವದ ಇಂಡೋ ಪಾಕ್ ಪಂದ್ಯ ಮಳೆಯಿಂದ ರದ್ದಾಗಿದೆ. ಭಾರತ 266 ರನ್ ಸಿಡಿಸಿ ಆಲೌಟ್ ಆಗಿತ್ತು. ಆದರೆ ಈ ಟಾರ್ಗೆಟ್ ಚೇಸ್ ಮಾಡಲು ಪಾಕಿಸ್ತಾನಕ್ಕೆ ಮಳೆ ಅವಕಾಶ ನೀಡಲಿಲ್ಲ. ಹಲವು ಹೊತ್ತು ಕಾದ ಬಳಿಕ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ಹಾಗೂ ಪಾಕಿಸ್ತಾನ ತಲಾ ಒಂದೊಂದು ಅಂಕ ಹಂಚಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 266 ರನ್‌ಗೆ ಆಲೌಟ್ ಆಗಿತ್ತು. ಇತ್ತ ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಲು ಮಳೆ ಅಡ್ಡಿಯಾಯಿತು. ಕೆಲ ಹೊತ್ತುಸುರಿದ ಮಳೆ ನಿಂತಿತ್ತು. ತಕ್ಷಣವೇ ಕ್ರೀಡಾಂಗಣ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸಲು ಆರಂಭಿಸಿದ್ದರು. ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನಕ್ಕಿಳಿದ ವಾರ್ಮ್ ಅಪ್ ಆರಂಭಿಸಿದ್ದರು. ಆದರೆ ಮತ್ತೆ ಮಳೆ ವಕ್ಕರಿಸಿತ್ತು. ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಯಿತು. ನೇಪಾಳ ವಿರುದ್ಧ ಭರ್ಜರಿ ಗೆಲುವು ಹಾಗೂ ಭಾರತ ವಿರುದ್ಧದ ಪಂದ್ಯ ರದ್ದಾದ ಕಾರಣ ಪಾಕಿಸ್ತಾನ 3 ಅಂಕ ಪಡೆಯಿತು. ಇಷ್ಟೇ ಅಲ್ಲ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿತು. ಭಾರತ ಏಷ್ಯಾಕಪ್ 2023 ಟೂರ್ನಿಯ ಮೊದಲ ಪಂದ್ಯದಲ್ಲಿ ಫಲಿತಾಂಶ ಕಾಣದಾಯಿತು. ಹೀಗಾಗಿ 1 ಅಂಕ ಪಡೆದು ಎ ಗಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆರಂಭಿಕ 4 ವಿಕೆಟ್ ಕಣ್ಣು ಮುಚ್ಚಿ ತೆರೆಯುವುದರೊಳಗೆ ಪತನಗೊಂಡಿತ್ತು. ಶಾಹೀನ್ ಆಫ್ರಿದಿ ಮಾರಕ ದಾಳಿಗೆ ಭಾರತ ತತ್ತರಿಸಿತ್ತು. ನಾಯಕ ರೋಹಿತ್ ಶರ್ಮಾ 11 ರನ್ ಸಿಡಿಸಿ ಔಟಾಗಿದ್ದರು. ವಿರಾಟ್ ಕೊಹ್ಲಿ4, ಶುಭಮನ್ ಗಿಲ್ 10, ಶ್ರೇಯಸ್ ಅಯ್ಯರ್ 14 ರನ್ ಸಿಡಿಸಿ ಔಟಾಗಿದ್ದರು.
ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಕಿಶನ್ 82 ರನ್ ಹಾಗೂ ಪಾಂಡ್ಯ87 ರನ್ ಸಿಡಿಸಿದರು. ಭಾರತ 266 ರನ್ ಸಿಡಿಸಿ ಆಲೌಟ್ ಆಗಿತ್ತು. ಮತ್ತೆ ಸುರಿದ ಮಳೆ ನಿಲ್ಲಲೇ ಇಲ್ಲ. ಹೀಗಾಗಿ ಪಂದ್ಯ ಸ್ಥಗಿತಗೊಂಡಿತು.