ಮಧ್ಯಮವೇಗಿ ಪ್ರಮೋದ್ ಮದುಶಾನ್ ಹಾಗೂ ವಾನಿಂದು ಹಸರಂಗ ದಾಳಿಗೆ ಬೆಂಡಾದ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶರಣಾಗಿದೆ. ಅದರೊಂದಿಗೆ ಶ್ರೀಲಂಕಾ ಟಿ20 ಮಾದರಿಯಲ್ಲಿ ಮೊಟ್ಟಮೊದಲ ಏಷ್ಯಾಕಪ್ ಗೆಲುವು ಕಂಡಿದ್ದು, ಒಟ್ಟಾರೆಯಾಗಿ ಶ್ರೀಲಂಕಾದ 6ನೇ ಏಷ್ಯಾಕಪ್ ಗೆಲುವು ಎನಿಸಿದೆ.
ದುಬೈ (ಸೆ. 11): ಕಳೆದ ಕೆಲವು ತಿಂಗಳುಗಳಿಂದ ದೇಶದ ಹದಗೆಟ್ಟ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ಸುದ್ದಿಯಾಗಿದ್ದ ಶ್ರೀಲಂಕಾಕ್ಕೆ ಸಂಭ್ರಮ ಸುದ್ದಿ ತಲುಪಿದೆ. ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ದಸನ್ ಶನಕ ನೇತೃತ್ವದ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟವೇರಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಮಣಿಸಿದ ಶ್ರೀಲಂಕಾ ತಂಡ ಮೊಟ್ಟಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿದೆ. ಒಟ್ಟಾರೆಯಾಗಿ ಶ್ರೀಲಂಕಾ ತಂಡದ 6ನೇ ಏಷ್ಯಾಕಪ್ ಗೆಲುವು ಇದಾಗಿದ್ದು, 2014ರ ನಂತರ ಮೊದಲ ಏಷ್ಯಾಕಪ್ ಗೆಲುವು ಎನಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ 1986, 1997, 2004, 2008 ಹಾಗೂ 2014ರಲ್ಲಿ ಚಾಂಪಿಯನ್ ಪಟ್ಟವೇರಿತ್ತು. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭಾನುಕ ರಾಜಪಕ್ಸ ಗಮನಸೆಳೆದು ಶ್ರೀಲಂಕಾ ತಂಡ 170 ರನ್ ಪೇರಿಸಲು ನೆರವಾಗಿದ್ದರು. ಬಳಿಕ ಬೌಲಿಂಗ್‌ನಲ್ಲಿ ಪ್ರಮೋದ್ ಮದುಶಾನ್ ಹಾಗೂ ವಾನಿಂದು ಹಸರಂಗ ತಮ್ಮ ನಡುವೆ ಏಳು ವಿಕೆಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಶ್ರೀಲಂಕಾ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದರು. ಉಳಿದಂತೆ ಸ್ಪಿನ್ನರ್ ಮಹೇಶ್ ತೀಕ್ಷಣ ಹಾಗೂ ವೇಗಿ ಚಾಮಿಕ ಕರುಣರತ್ನೆ ವಿಕೆಟ್ ಉರುಳಿಸಿದರು.
ಪಂದ್ಯದ ನಿಟ್ಟಿನಲ್ಲಿ ಪ್ರಮುಖವಾಗಿದ್ದ ಟಾಸ್ ಸೋಲು ಕಂಡರೂ, ತಮ್ಮ ಉತ್ಸಾಹಿ ಆಟದ ಮೂಲಕ ಶ್ರೀಲಂಕಾ ತಂಡ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಭಾನುಕ ರಾಜಪಕ್ಸ (bhanuka Rajapaksa) ಬಾರಿಸಿ 45 ಎಸೆತಗಳ ಅಜೇಯ 71 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 170 ರನ್ ಸಿಡಿಸಿತ್ತು. 58 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಲಂಕಾ ತಂಡವನ್ನು 170ರ ಗಡಿಗೆ ಮುಟ್ಟಿಸುವಲ್ಲಿ ಭಾನುಕ ಪಾತ್ರ ಮಹತ್ವದ್ದಾಗಿತ್ತು, ಪ್ರತಿಯಾಗಿ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 147 ರನ್‌ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
Asia Cup 2022: ಫೈನಲ್‌ನಲ್ಲಿ ಶ್ರೀಲಂಕಾಕ್ಕೆ ಆಸರೆಯಾದ ಭಾನುಕ!
2012ರ ಬಳಿಕ ಮೊದಲ ಬಾರಿಗೆ ಏಷ್ಯಾಕಪ್ ಗೆಲ್ಲುವ ಇರಾದೆಯಲ್ಲಿದ್ದ ಪಾಕಿಸ್ತಾನ ತಂಡದ ಪರವಾಗಿ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರವೇ ಎರಡಂಕಿ ಮೊತ್ತ ದಾಖಲಿಸಿದರು. ಅದ್ಭುತ ಫಾರ್ಮ್‌ನಲ್ಲಿರುವ ವಿಕೆಟ್‌ಕೀಪರ್ ಮೊಹಮದ್ ರಿಜ್ವಾನ್ (55ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್) ಏಕದಿನ ಶೈಲಿಯಲ್ಲಿ (Mohammad Rizwan) ಅರ್ಧತಕ ಬಾರಿಸಿದ್ದರಿಂದ ಇದು ತಂಡಕ್ಕೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇಫ್ತಿಕಾರ್ ಅಹ್ಮದ್ (Iftikar Ahmad) ಕೂಡ 31 ಎಸೆತಗಳಲ್ಲಿ 32 ರನ್ ಸಿಡಿಸಿದರು. ಕೊನೆಯಲ್ಲಿ ಹ್ಯಾರಿಸ್ ರೌಫ್ 9 ಎಸೆತಗಳಲ್ಲಿ 13 ರನ್ ಸಿಡಿಸಿದರು. ಉಳಿದಂತೆ ನಾಯಕ ಬಾಬರ್ ಅಜಮ್, ಫಕರ್ ಜಮಾನ್, ಮೊಹಮದ್ ನವಾಜ್‌ನಂಥ ಆಟಗಾರರು ಒಂದಂಕಿ ಮೊತ್ತಕ್ಕೆ ಔಟಾಗಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ಟಿ20 ವಿಶ್ವಕಪ್‌ಗೆ ಈ ವಾರ ತಂಡ ಆಯ್ಕೆ, ಫಿಟ್ನೆಸ್ ಟೆಸ್ಟ್ ಕ್ಲಿಯರ್ ಮಾಡಿದ ಬುಮ್ರಾ, ಹರ್ಷಲ್!
ಭಾರತದ ದಾಖಲೆಯ ಸನಿಹ ಬಂದ ಲಂಕಾ: ಇದು ಶ್ರೀಲಂಕಾ (Sri Lanka) ತಂಡದ 6ನೇ ಏಷ್ಯಾಕಪ್ (Asia Cup) ಗೆಲುವು. ಆ ಮೂಲಕ ಭಾರತದ (India) ದಾಖಲೆಯ ಸನಿಹ ಬಂದಿದೆ. ಭಾರತ ಈವರೆಗೂ 7 ಏಷ್ಯಾಕಪ್‌ಗಳಲ್ಲಿ ಗೆಲುವು ಕಂಡಿದೆ. ಪಾಕಿಸ್ತಾನ (Pakistan) 2 ಬಾರಿ ಜಯ ಸಾಧಿಸಿದೆ. ಇನ್ನು 2014ರ ಏಪ್ರಿಲ್ ಬಳಿಕ ಶ್ರೀಲಂಕಾ ತಂಡ ಸತತ ಐದು ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇದೇ ಮೊದಲು. ಕಳೆದ ಬಾರಿ ಈ ಸಾಧನೆ ಮಾಡಿದ್ದಾಗ ಲಂಕಾ 2014ರ ಟಿ20 ವಿಶ್ವಕಪ್‌ನಲ್ಲಿ ಜಯ ಸಾಧಿಸಿತ್ತು.