Ashes Test: ಸಿಡ್ನಿ ಟೆಸ್ಟ್‌ನಲ್ಲಿ ಮತ್ತೊಂದು ಶತಕ ಚಚ್ಚಿದ ಉಸ್ಮಾನ್ ಖವಾಜ..!

By Suvarna NewsFirst Published Jan 8, 2022, 7:39 PM IST
Highlights

* ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಮತ್ತೊಮ್ಮೆ ಶತಕ ಬಾರಿಸಿದ ಉಸ್ಮಾನ್ ಖವಾಜ

* ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್‌ಗೆ 388 ರನ್‌ಗಳ ಗುರಿ ನೀಡಿದ ಅಸ್ಟ್ರೇಲಿಯಾ

* ನಾಲ್ಕನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 30 ರನ್‌ಗಳಿಸಿದ ಇಂಗ್ಲೆಂಡ್

ಸಿಡ್ನಿ(ಜ.08): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಉಸ್ಮಾನ್ ಖವಾಜ (Usman Khawaja) ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಅಂತಿಮವಾಗಿ ಅಸ್ಟ್ರೇಲಿಯಾ ತಂಡವು (Australia Cricket Team) ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 265 ರನ್‌ ಬಾರಿಸಿ ಡಿಕ್ಲೇರ್‌ ಮಾಡಿಕೊಂಡಿದ್ದು, ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ (England Cricket Team) ಗೆಲ್ಲಲು 388 ರನ್‌ಗಳ ಗುರಿ ನೀಡಿದೆ. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 30 ರನ್‌ ಗಳಿಸಿದ್ದು, ಇನ್ನೂ 357 ರನ್‌ಗಳ ಹಿನ್ನೆಡೆಯಲ್ಲಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಮಯೋಚಿತ 137 ರನ್ ಚಚ್ಚಿದ್ದ ಉಸ್ಮಾನ್ ಖವಾಜ ಇದೀಗ ಎರಡನೇ ಇನಿಂಗ್ಸ್‌ನಲ್ಲೂ ಅಜೇಯ 101 ರನ್ ಸಿಡಿಸುವ ಮೂಲಕ ಸಿಡ್ನಿ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು 84 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಐದನೇ ವಿಕೆಟ್‌ಗೆ ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್ ಜೋಡಿ 179 ರನ್‌ಗಳ ಶತಕದ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮುನ್ನಡೆ ಸಾಧಿಸಲು ನೆರವಾದರು.

ಅದರಲ್ಲೂ ಬರೋಬ್ಬರಿ ಎರಡು ವರ್ಷಗಳ ಬಳಿಕ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡ ಉಸ್ಮಾನ್ ಖವಾಜ ಎರಡೂ ಇನಿಂಗ್ಸ್‌ನಲ್ಲೂ ಶತಕ ಚಚ್ಚಿ ತಾವೆಷ್ಟು ಉಪಯುಕ್ತ ಆಟಗಾರ ಎಂದು ಸಾರಿ ಹೇಳಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಚುರುಕಾಗಿ ರನ್‌ಗಳಿದ ಖವಾಜ 138 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 101 ರನ್ ಬಾರಿಸಿ ಅಜೇಯರಾಗುಳಿದರು. 140 ವರ್ಷಗಳ ಸುದೀರ್ಘ ಕ್ರಿಕೆಟ್ ಇತಿಹಾಸವಿರುವ ಆ್ಯಷಸ್‌ ಟೆಸ್ಟ್‌ ಸರಣಿಯ ಪಂದ್ಯವೊಂದರ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಮೂರನೇ ಆಸ್ಟ್ರೇಲಿಯಾದ ಬ್ಯಾಟರ್ ಎನ್ನುವ ಕೀರ್ತಿಗೆ ಖವಾಜ ಪಾತ್ರರಾಗಿದ್ದಾರೆ. 

Ashes Test: ಶತಕ ಚಚ್ಚಿ ಇಂಗ್ಲೆಂಡ್ ತಂಡವನ್ನು ಬಚಾಚ್ ಮಾಡಿದ ಬೇರ್‌ಸ್ಟೋವ್‌..!

ಮತ್ತೊಂದು ತುದಿಯಲ್ಲಿ ಕ್ಯಾಮರೋನ್ ಗ್ರೀನ್‌ 122 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 74 ರನ್‌ ಬಾರಿಸಿ ಜಾಕ್ ಲೀಚ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಅಲೆಕ್ಸ್ ಕ್ಯಾರಿ ಕೂಡಾ ಶೂನ್ಯ ಸುತ್ತಿ ಜಾಕ್ ಲೀಚ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಸ್ಟ್ರೇಲಿಯಾ ತಂಡವು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

England openers safely battle through to stumps to set up an exhilarating final day 💥 | | pic.twitter.com/bBencIFP4n

— ICC (@ICC)

ಇನ್ನು ಗೆಲ್ಲಲು ಬೃಹತ್ ಗುರಿ ಬೆನ್ನತ್ತಿರುವ ಪ್ರವಾಸಿ ಇಂಗ್ಲೆಂಡ್ ತಂಡವು ಎಚ್ಚರಿಕೆಯ ಆರಂಭವನ್ನು ಪಡೆದಿದೆ. ಮೊದಲ 11 ಓವರ್‌ಗಳನ್ನು ಎದುರಿಸಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 30 ರನ್‌ಗಳಿಸಿದೆ. ಆರಂಭಿಕ ಬ್ಯಾಟರ್‌ ಜಾಕ್ ಕ್ರಾವ್ಲಿ 22 ರನ್‌ ಹಾಗೂ ಹಸೀಬ್ ಹಮೀದ್ 8 ರನ್‌ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 416/8 ಡಿಕ್ಲೇರ್(ಮೊದಲ ಇನಿಂಗ್ಸ್)
ಉಸ್ಮಾನ್ ಖವಾಜ: 137
ಸ್ಟುವರ್ಟ್‌ ಬ್ರಾಡ್‌: 101/5

ಇಂಗ್ಲೆಂಡ್‌: 294/10
ಜಾನಿ ಬೇರ್‌ಸ್ಟೋವ್: 113*
ಸ್ಕಾಟ್ ಬೊಲ್ಯಾಂಡ್‌: 36/4

ಅಸ್ಟ್ರೇಲಿಯಾ: 265/6 ಡಿಕ್ಲೇರ್(ಎರಡನೇ ಇನಿಂಗ್ಸ್‌)
ಉಸ್ಮಾನ್ ಖವಾಜ: 101*
ಜಾಕ್ ಲೀಚ್‌: 84/4

ಇಂಗ್ಲೆಂಡ್: 30/0(ಎರಡನೇ ಇನಿಂಗ್ಸ್)
ಜಾಕ್ ಕ್ರಾವ್ಲಿ: 22
(* ನಾಲ್ಕನೇ ದಿನದಾಟದಂತ್ಯದ ವೇಳೆಗೆ)
 

click me!