* 1994ರಲ್ಲಿ ತಮಗೆ ಬಂದ ಮ್ಯಾಚ್ ಫಿಕ್ಸಿಂಗ್ ಆಫರ್ ಬಗ್ಗೆ ತುಟಿ ಬಿಚ್ಚಿದ ಶೇನ್ ವಾರ್ನ್
* ಪಾಕಿಸ್ತಾನದ ನಾಯಕರಾಗಿದ್ದ ಸಲೀಂ ಮಲಿಕ್ ಕೋಟಿಯ ಆಫರ್ ನೀಡಿದ್ರು ಎಂದ ಸ್ಪಿನ್ ಲೆಜೆಂಡ್
* 2000ನೇ ಇಸವಿಯಲ್ಲಿ ಐಸಿಸಿಯಿಂದ ಆಜೀವ ನಿಷೇಧಕ್ಕೊಳಗಾದ ಸಲೀಂ ಮಲಿಕ್
ಕ್ಯಾನ್‌ಬೆರ್ರಾ(ಜ.08): 1994ರ ಪಾಕಿಸ್ತಾನ ಪ್ರವಾಸದ ವೇಳೆ ಮ್ಯಾಚ್ ಫಿಕ್ಸಿಂಗ್ (Match Fixing) ಮಾಡುವಂತೆ ತಮಗೆ ಸಲೀಂ ಮಲಿಕ್ (Saleem Malik) 2,67,000 ಅಮೆರಿಕನ್ ಡಾಲರ್ (ಈಗಿನ ಮೌಲ್ಯದಲ್ಲಿ ಅಂದಾಜು 2 ಕೋಟಿ ರು.) ಆಫರ್ ನೀಡಿದ್ದರು ಎಂದು ಆಸ್ಪ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ (Shane Warne) ಬಹಿರಂಗಪಡಿಸಿದ್ದಾರೆ. ಆಗಿನ ಕಾಲದಲ್ಲೇ ಅಷ್ಟೊಂದು ದುಬಾರಿ ಮೊತ್ತ ಆಫರ್ ಮಾಡಿದ್ದರ ಬಗ್ಗೆ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟುಹಾಕಿದೆ.
‘ಕರಾಚಿ ಟೆಸ್ಟ್ (Karachi Test) ಪಂದ್ಯದ ವೇಳೆ ಕೆಟ್ಟದಾಗಿ ಬೌಲಿಂಗ್ ಮಾಡಲು ನನಗೆ ಪಾಕಿಸ್ತಾನ ತಂಡದ ನಾಯಕ ಸಲೀಂ ಮಲಿಕ್ ಬೇಡಿಕೆ ಇಟ್ಟಿದ್ದರು. ಅವರ ಕೋಣೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗ ಪಂದ್ಯದಲ್ಲಿ ಸೋಲುವಂತೆ ನನ್ನಲ್ಲಿ ಮನವಿ ಮಾಡಿದ್ದರು. ಅವರು ಸೋತರೆ ಮನೆಗಳನ್ನು ಅಭಿಮಾನಿಗಳು ಸುಟ್ಟು ಹಾಕುತ್ತಾರೆ ಎಂದಿದ್ದರು. ಆದರೆ ನೇರವಾಗಿಯೇ ಅವರ ಬೇಡಿಕೆಯನ್ನು ತಿರಸ್ಕರಿಸಿದ್ದೆ’ ಎಂದು ವಾರ್ನ್ ಹೇಳಿದ್ದಾರೆ.
ನಾವು ಆಗ ಪಾಕಿಸ್ತಾನ ಪ್ರವಾಸ ಮಾಡಿದ್ದಾಗ, ಅವರನ್ನು ಮಣಿಸುವ ಸಂಪೂರ್ಣ ವಿಶ್ವಾಸ ನಮಗಿತ್ತು. ಕರಾಚಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾಗೆ ಇನ್ನೂ 7 ವಿಕೆಟ್‌ಗಳ ಅಗತ್ಯವಿತ್ತು. ಅ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರ ವಾರ್ಷಿಕ ಒಪ್ಪಂದವೇ 25,000- 30,000 ಆಸ್ಟ್ರೇಲಿಯನ್ ಡಾಲರ್ ಇತ್ತು. ಇಂತಹ ಸಂದರ್ಭದಲ್ಲಿ ವಿಕೆಟ್ ಆಚೆಗೆ ಬೌಲಿಂಗ್ ಮಾಡಿದರೆ ನಾವು ನಿಮಗೆ 2,67,000 ಅಮೆರಿಕನ್ ಡಾಲರ್ ನೀಡುವುದಾಗಿ ಆಫರ್ ಮಾಡಿದ್ದರು. ಆದರೆ ನಾನದನ್ನು ಕಟುವಾಗಿಯೇ ತಿರಸ್ಕರಿಸಿದೆ ಎಂದು ವಾರ್ನ್ ಹೇಳಿದ್ದಾರೆ.
2000ರಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಮಲಿಕ್‌ರನ್ನು ಐಸಿಸಿ ಆಜೀವ ನಿಷೇಧಕ್ಕೊಳಪಡಿಸಿತು. ಸಲೀಂ ಮಲಿಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 15 ಶತಕ ಸಹಿತ 5,768 ರನ್ ಬಾರಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮಲಿಕ್ 7,170 ರನ್ ಬಾರಿಸಿದ್ದರು.
ICC New T20I Rules: ನಿಧಾನಗತಿ ಬೌಲಿಂಗ್ ತಡೆಗೆ ಐಸಿಸಿ ಹೊಸ ಮಾಸ್ಟರ್ ಪ್ಲಾನ್..!
ಶೇನ್ ವಾರ್ನ್ ಹಾಗೂ ಟಿಮ್ ಮೇ ತಮ್ಮ ನಾಯಕರಾಗಿದ್ದ ಮಾರ್ಕ್ ಟೇಲರ್ ಹಾಗೂ ಕೋಚ್ ಬಾಬ್ ಸಿಮ್ಸನ್ ಅವರಿಗೆ ಈ ವಿಚಾರವನ್ನು ಮುಟ್ಟಿಸಿದ್ದರು. ಇದಾದ ಬಳಿಕ ಈ ವಿಚಾರವನ್ನು ಮ್ಯಾಚ್ ರೆಫ್ರಿ ಜಾನ್ ರಿಡ್‌ಗೂ ತಿಳಿಸಲಾಗಿತ್ತು ಎಂದು ವಾರ್ನ್ ವಿವರಿಸಿದ್ದಾರೆ. ನನಗೆ ಸಲೀಂ ಆಫರ್ ಮಾಡಿದಾಗ, ಬೌಲಿಂಗ್ ಮಾಡಲು ಬೇರೆ ಹಣ ಬೇಕಾಗಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದೆ ಎಂದು ವಾರ್ನ್ ತಿಳಿಸಿದ್ದಾರೆ.
ಶೇನ್ ವಾರ್ನ್ ಕರಾಚಿ ಟೆಸ್ಟ್ ಪಂದ್ಯದಲ್ಲಿ 150 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದರ ಹೊರತಾಗಿಯೂ 11 ವಿಕೆಟ್‌ಗೆ ಇಂಜಮಾಮ್ ಉಲ್ ಹಕ್ ಹಾಗೂ ಮುಷ್ತಾಕ್ ಅಹಮ್ಮದ್ 57 ರನ್‌ಗಳ ಜತೆಯಾಟವಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ 1 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟಿದ್ದರು.
ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳನ್ನಾಡಿ 708 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರುಳೀಧರನ್ ಬಳಿಕ ಅತಿಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ಈ ಲೆಗ್‌ಸ್ಪಿನ್ನರ್ ಪಾತ್ರರಾಗಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ 293 ವಿಕೆಟ್ ಪಡೆದಿದ್ದಾರೆ.