ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ಮತ್ತೊಮ್ಮೆ ರಣಜಿ ಟ್ರೋಫಿ ತಾರೆ ಸರ್ಫರಾಜ್ ಖಾನ್‌ಗೆ ನಿರಾಸೆ
ಆಯ್ಕೆ ಸಮಿತಿಯ ನಡೆಯ ಬಗ್ಗೆ ಆಕಾಶ್ ಚೋಪ್ರಾ ಕಿಡಿ
ನವದೆಹಲಿ(ಜೂ.24): ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಶುಕ್ರವಾರ(ಜೂ.23) ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಅಜಿಂಕ್ಯ ರಹಾನೆಗೆ ಟೆಸ್ಟ್ ಉಪನಾಯಕ ಪಟ್ಟ ಕಟ್ಟಲಾಗಿದೆ. ಇನ್ನು ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಚೇತೇಶ್ವರ್ ಪೂಜಾರ, ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅಚ್ಚರಿ ಎನ್ನುವಂತೆ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸತತ ಮೂರು ಆವೃತ್ತಿಯಲ್ಲಿ ರನ್ ಗುಡ್ಡೆ ಹಾಕಿರುವ ಸರ್ಫರಾಜ್ ಖಾನ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮತ್ತೊಮ್ಮೆ ಕಡೆಗಣಿಸಿದೆ.
ಹೌದು, ರಣಜಿ ಟ್ರೋಫಿ ಟೂರ್ನಿಯಲ್ಲಿ ಕಳೆದ ಮೂರು ಆವೃತ್ತಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಿರುವುದರ ಹೊರತಾಗಿಯೂ ಸರ್ಫರಾಜ್ ಖಾನ್ ಅವರೀಗ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಸರ್ಫರಾಜ್ ಖಾನ್ ವಿಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಈ ಕುರಿತಂತೆ ಸುನಿಲ್ ಗವಾಸ್ಕರ್ ಆಯ್ಕೆ ಸಮಿತಿಯ ಮೇಲೆ ಕಿಡಿಕಾರಿದ್ದರು. ಇದೀಗ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡಾ ಬಿಸಿಸಿಐ ಆಯ್ಕೆ ಸಮಿತಿಯ ನಡೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.
IPL ಮಾನದಂಡವಾದರೇ, ಯುವಕರು ರಣಜಿ ಯಾಕೆ ಆಡಬೇಕು? ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಸನ್ನಿ ಸಿಡಿಮಿಡಿ
"ಸರ್ಫರಾಜ್ ಖಾನ್ ಇನ್ನೇನು ಮಾಡಬೇಕು ಹೇಳಿ? ಕಳೆದ ಮೂರು ವರ್ಷಗಳಿಂದ ಅವರು ಗಳಿಸಿರುವ ರನ್‌ಗಳನ್ನಾದರೂ ನೋಡಿ. ಅವರ ತಲೆ ಹಾಗೂ ಭುಜ ಸ್ವಲ್ಪವೂ ವಿಶ್ರಾಂತಿ ಪಡೆದಿಲ್ಲ. ಅವರು ಎಲ್ಲಾ ಕಡೆ ರನ್ ಗಳಿಸಿದ್ದಾರೆ. ಇಷ್ಟಾಗಿಯೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ. ನೀವು ಯಾವ ಸಂದೇಶವನ್ನು ರವಾನಿಸುತ್ತಿದ್ದೀರಾ? ಎಂದು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರಾ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.
ಸರ್ಫರಾಜ್ ಖಾನ್ 2022-23ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 92.66ರ ಸರಾಸರಿಯಲ್ಲಿ 556 ರನ್ ಬಾರಿಸಿದ್ದರು. ಇನ್ನು ಇಲ್ಲಿಯವರೆಗೆ 37 ಪ್ರಥಮದರ್ಜೆ ಪಂದ್ಯಗಳನ್ನಾಡಿ 3505 ರನ್ ಬಾರಿಸಿದ್ದಾರೆ. ಇನ್ನು 2021-22ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 122-75ರ ಸರಾಸರಿಯಲ್ಲಿ 982 ರನ್ ಸಿಡಿಸಿದ್ದರು. ಇನ್ನು ಇದಕ್ಕೂ ಮುನ್ನ 2019-20ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಸರ್ಫರಾಜ್ ಖಾನ್ 154.67ರ ಸರಾಸರಿಯಲ್ಲಿ 928 ರನ್ ಬಾರಿಸಿದ್ದರು.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್
ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದಿರಲು ನಮಗೆ ಗೊತ್ತಿರದ ಹಾಗೂ ನಿಮಗೆ ಗೊತ್ತಿರುವ ಅಂತಹದ್ದೇನಾದರೂ ವಿಚಾರವಿದ್ದರೇ ದಯವಿಟ್ಟು ಅದನ್ನು ಸಾರ್ವಜನಿಕವಾಗಿ ತಿಳಿಸಿ ಎಂದು ಕೇಳುವ ಪ್ರಶ್ನೆಯಲ್ಲಿ ಅರ್ಥವಿದೆ. ಸರ್ಫರಾಜ್ ಅವರ ಈ ಒಂದು ನಿರ್ದಿಷ್ಟ ಗುಣ ನಮಗೆ ಇಷ್ಟವಾಗುತ್ತಿಲ್ಲ ಎನ್ನುವುದಾದರೆ ಅದನ್ನಾದರೂ ತಿಳಿಸಿ ಎಂದು ಆಕಾಶ್ ಚೋಪ್ರಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಒಂದು ವೇಳೆ ಪ್ರಥಮ ದರ್ಜೆ ಕ್ರಿಕೆಟ್ ರನ್‌ಗೆ ಮಹತ್ವ ನೀಡುವುದಿಲ್ಲ ಎನ್ನುವುದಾದರೇ, ಬಾಯಿಗೆ ತುಪ್ಪ ಸವರುವುದೇಕೆ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ. ಸರ್ಫರಾಜ್ ರಾಜ್ ಅವರಂತೆ ಅಭಿಮನ್ಯು ಈಶ್ವರನ್ ಅವರನ್ನು ಸಹಾ ಕಡೆಗಣಿಸಲಾಗಿದೆ. ಅಭಿಮನ್ಯು ಈಶ್ವರನ್ ಕೂಡಾ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ.