
ಚೆನ್ನೈ: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಪರದಾಡುತ್ತಿದೆ. ಆಡಿದ ಐದು ಪಂದ್ಯಗಳ ಪೈಕಿ ರಹಾನೆ ನೇತೃತ್ವದ ಕೆಕೆಆರ್ ತಂಡವು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲೂ ಕೆಕೆಆರ್ ತಂಡ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ, ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಬರೋಬ್ಬರಿ 12 ಲಕ್ಷ ರುಪಾಯಿ ದಂಡ ವಿಧಿಸಿದೆ.
ಮಂಗಳವಾರ ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು ನಿಧಾನಗತಿಯ ಬೌಲಿಂಗ್ ನಡೆಸುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಹೀಗಾಗಿ ಬಿಸಿಸಿಐ ಕೆಕೆಆರ್ ತಂಡದ ನಾಯಕನಿಗೆ ದಂಡದ ಶಿಕ್ಷೆ ವಿಧಿಸಿದೆ.
ಮೂರು ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಕೋಲ್ಕತಾ ನೈಟ್ ರೈಡರ್ಸ್, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ನಿಯಮ ಉಲ್ಲಂಘನೆ ಮಾಡಿದೆ. ಇದು 19ನೇ ಸೀಸನ್‌ನಲ್ಲಿ ಕೆಕೆಆರ್ ತಂಡವು ಮಾಡುತ್ತಿರುವ ಮೊದಲ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ನಾಯಕನಿಗೆ ಮಾತ್ರ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
19ನೇ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೂ ಯಶಸ್ವಿಯಾಗಿ 22 ಪಂದ್ಯಗಳು ಮುಕ್ತಾಯವಾಗಿವೆ. ಈ ಪೈಕಿ ನಿಧಾನಗತಿಯ ಬೌಲಿಂಗ್ ನಡೆಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ನಾಲ್ಕನೇ ತಂಡ ಎನ್ನುವ ಕುಖ್ಯಾತಿಗೆ ಇದೀಗ ಕೆಕೆಆರ್ ತಂಡ ಪಾತ್ರವಾಗಿದೆ. ಈಗಾಗಲೇ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಎರಡು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿ ದಂಡ ತೆತ್ತಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿದ ತಪ್ಪಿಗೆ ದಂಡ ತೆತ್ತಿದ್ದಾರೆ.
ಅಂದಹಾಗೆ ಈ ಮೊದಲು ಮೂರು ಬಾರಿ ತಂಡವೊಂದು ಮಂಧಗತಿಯಲ್ಲಿ ಬೌಲಿಂಗ್ ನಡೆಸುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದರೆ ಮುಂದಿನ ಒಂದು ಪಂದ್ಯದ ಮಟ್ಟಿಗೆ ನಾಯಕ ಆ ಪಂದ್ಯದಿಂದ ಹೊರಗುಳಿಯಬೇಕಾಗುತ್ತಿತ್ತು. ಆದರೆ ಹೊಸದಾಗಿ ಐಪಿಎಲ್ ನಿಯಮಾವಳಿಗಳನ್ನು ಪರಿಷ್ಕರಿಸಲಾಗಿದ್ದು, ನಾಯಕ ಬ್ಯಾನ್ ಆಗುವ ನಿಯಮವನ್ನು ತೆಗೆದು ಹಾಕಲಾಗಿದೆ.
ಇನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಅನುಚಿತ ವರ್ತನೆ ಮಾಡಿದ ತಪ್ಪಿಗೆ ಪಂದ್ಯದ ಸಂಭಾವನೆಯ 25% ದಂಡವನ್ನು ಬಿಸಿಸಿಐ ವಿಧಿಸಿದೆ. ಆದರೆ ಯಾವ ಪ್ರಕರಣಕ್ಕೆ ದಂಡ ವಿಧಿಸಿದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
2024ರ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾತಾಳಕ್ಕೆ ಕುಸಿದಿದ್ದು, ಸಿಎಸ್‌ಕೆ ಎದುರು ಗೆಲುವಿನ ಖಾತೆ ತೆರೆಯಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ಕೆಕೆಆರ್ ಎದುರು ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು 32 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ತಂಡವು 5 ವಿಕೆಟ್ ಕಳೆದುಕೊಂಡು 192 ರನ್ ಕಲೆ ಹಾಕಿತು. ಇನ್ನು ಗುರಿ ಬೆನ್ನತ್ತಿದ ಕೆಕೆಆರ್ ತಂಡವು 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.