ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ದೊಡ್ಡ ಶಾಕ್; ಲಖನೌ ಎದುರಿನ ಇಂದಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುರುವಾಯ್ತು ಹೊಸ ತಲೆನೋವು!

Published : Apr 15, 2026, 10:12 AM IST
Virat Kohli

ಸಾರಾಂಶ

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಇಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಅಭ್ಯಾಸದ ವೇಳೆ ಕಾಲಿಗೆ ಪಟ್ಟಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದು, ಅವರು ಸಂಪೂರ್ಣ ಫಿಟ್ ಆಗದಿದ್ದರೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬೆಂಗಳೂರು: ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡಲು ಇಳಿದಿರಲಿಲ್ಲ. ಇದೀಗ ವಿರಾಟ್ ಕೊಹ್ಲಿಯ ಗಾಯದ ಸಮಸ್ಯೆಯೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲು ರೆಡಿಯಾಗಿದೆ. ಇಂದು ಸಂಜೆ 7.30ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ-ಆರ್‌ಸಿಬಿ ಹೈವೋಲ್ಟೇಜ್ ಮ್ಯಾಚ್ ಆರಂಭವಾಗಲಿದೆ. ಆದರೆ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ರನ್ ವಿರಾಟ್ ಕೊಹ್ಲಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಂಪೂರ್ಣವಾಗಿ ಫಿಟ್ ಆಗಿಲ್ಲ ವಿರಾಟ್ ಕೊಹ್ಲಿ!

ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ನಿನ್ನೆ ಅಭ್ಯಾಸ ನಡೆಸಲು ಮೈದಾನಕ್ಕೆ ಬಂದಿದ್ದರು. ಇದನ್ನು ನೋಡಿದ ಫ್ಯಾನ್ಸ್, ಮುಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಭ್ಯಾಸದ ವೇಳೆಯಲ್ಲಿಯೂ ಕೊಹ್ಲಿ ಎಡಗಾಲಿಗೆ ಪಟ್ಟಿ ಕಟ್ಟಿಕೊಂಡೇ ಮೈದಾನಕ್ಕಿಳಿದಿರುವುದು ಕಂಡು ಬಂದಿದೆ. ಕೊಹ್ಲಿ ಅಭ್ಯಾಸ ನಡೆಸಿದ ರೀತಿಯನ್ನು ಗಮನಿಸಿದರೆ, ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದರಲ್ಲೂ ತಂಡದ ಅತ್ಯಂತ ಮಹತ್ವದ ಆಟಗಾರರಾಗಿರುವ ಕೊಹ್ಲಿ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ತಯಾರಿಲ್ಲ. ನಾಯಕ ರಜತ್ ಪಾಟೀದಾರ್ ಕೂಡಾ, ಕೊಹ್ಲಿ ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಮೈದಾನಕ್ಕಿಳಿಯಲಿ ಎಂದು ಬಯಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

 

ಆರ್‌ಸಿಬಿ-ಲಖನೌ ನಡುವಿನ ಹೈವೋಲ್ಟೇಜ್ ಮ್ಯಾಚ್‌ಗೆ ಕ್ಷಣಗಣನೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಇಂದು ಸಂಜೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾದಾಡಲಿವೆ. ಒಂದು ವೇಳೆ ಈ ಮ್ಯಾಚ್‌ಗೂ ಮುನ್ನ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆಗಿಲ್ಲವಾದರೇ, ಅವರ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವೆಂಕಟೇಶ್ ಅಯ್ಯರ್ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು ಗಮನ ಸೆಳೆದಿದ್ದರು. ಇಂದು ವಿರಾಟ್ ಕೊಹ್ಲಿ ಮೈದಾನಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಇಂದು ಸಂಜೆ ನಡೆಯುವ ಟಾಸ್ ವರೆಗೂ ಕಾಯಲೇಬೇಕಾಗುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತಕ್ಕೆ ಆಯ್ಕೆಯಾಗಿ ಸಚಿನ್‌ ದಾಖಲೆ ಮುರೀತಾರ ವೈಭವ್‌ ಸೂರ್ಯವಂಶಿ? ಟೀಂ ಇಂಡಿಯಾ ಶಾರ್ಟ್‌ಲಿಸ್ಟ್‌ನಲ್ಲಿ ವೈಭವ್ ಹೆಸರು?
ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್‌ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?