Ajaz Patel: ಅಜಾಜ್ ಪಟೇಲ್ ಟ್ವಿಟರ್ ಖಾತೆಗೆ ಬ್ಲ್ಯೂ ಟಿಕ್, ಅದಕ್ಕೆ ಕಾರಣ ಅಶ್ವಿನ್!

By Suvarna NewsFirst Published Dec 7, 2021, 6:37 PM IST
Highlights

ಸೋಶಿಯಲ್ ಮೀಡಿಯಾದಲ್ಲೂ ಅಶ್ವಿನ್ ಕಮಾಲ್
ಅಜಾಜ್ ಪಟೇಲ್ ಖಾತೆಗೆ ಬ್ಲ್ಯೂ ಟಿಕ್ ವೆರಿಫೈ ಮಾಡಿಸಿದ ಆಫ್ ಸ್ಪಿನ್ನರ್
ಅಶ್ವಿನ್ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಜಾಜ್ ಖಾತೆ ಬ್ಲ್ಯೂ ಟಿಕ್

ಬೆಂಗಳೂರು (ಡಿ.07): ಟೀಮ್ ಇಂಡಿಯಾದ ಯಶಸ್ವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಬೌಲಿಂಗ್ ಮೂಲಕ ಗಮನಸೆಳೆದಿದ್ದರು. ಆದರೆ, ಪಂದ್ಯದ ಗೆಲುವಿನ ಬಳಿಕ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಅವರ ಟ್ವಿಟರ್ (Twitter) ಖಾತೆಗೆ ಬ್ಲ್ಯೂ ಟಿಕ್ ವೆರಿಫೈ ಬ್ಯಾಡ್ಜ್ ಬರಲೂ ಕಾರಣರಾಗಿದ್ದಾರೆ. ಮುಂಬೈ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ಬೌಲಿಂಗ್ ವೇಳೆ ಸ್ಪಿನ್ ಜಾಲ ಎಸೆದಿದ್ದ ಅಶ್ವಿನ್, ಭಾರತ ತಂಡದ 372 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಳ್ಳಲು ನೆರವಾಗಿದ್ದರು. ಆದರೆ, ಈ ಪಂದ್ಯದಲ್ಲಿ ಭಾರತ ತಂಡದ ನಿರ್ವಹಣೆಯೊಂದಿಗೆ ಗಮನಸೆಳೆದ ಇನ್ನೊಂದು ವಿಚಾರವೆಂದರೆ ಅದು ಅಜಾಜ್ ಪಟೇಲ್ (Ajaz Patel) ಅವರ 10 ವಿಕೆಟ್ ಸಾಧನೆ. ಭಾರತ ತಂಡದ ಮೊದಲ ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಗಳನ್ನು ಉರುಳಿಸಿದ ಅಜಾಜ್ ಈಗಾಗಲೇ ವಿಶ್ವ ಕ್ರಿಕೆಟ್ ನ ಮನೆಮಾತಾಗಿದ್ದಾರೆ. ಟೆಸ್ಟ್  ಕ್ರಿಕೆಟ್ (Test Cricket) ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೇವಲ ಮೂರನೇ ಬೌಲರ್ ಅಜಾಜ್ ಪಟೇಲ್.

ಅಜಾಜ್ ಪಟೇಲ್ ಸಾಹಸಿಕ ನಿರ್ವಹಣೆಯ ಬಳಿಕ ಟ್ವಿಟರ್ ನಲ್ಲಿ ಅವರ ಅಕೌಂಟ್ ಹುಡುಕಾಟ ನಡೆಸಿದವರಿಗೆ ಅಚ್ಚರಿ ಎನಿಸಿದ್ದೆಂದರೆ ಅವರ ಅಕೌಂಟ್ ಗೆ ಬ್ಲ್ಯೂ ವೆರಿಫೈ ಬ್ಯಾಡ್ಜ್ ಇಲ್ಲದಿರುವುದು. ಈ ವಿಚಾರದಲ್ಲಿ ಅಜಾಜ್ ಪಟೇಲ್ ನೆರವಿಗೆ ನಿಂತವರು ನಮ್ಮ ಆರ್.ಅಶ್ವಿನ್. “ದಿ ವೆರಿಫೈಡ್ ಬ್ಲ್ಯೂ ಬ್ಯಾಡ್ಜ್ ಸೋರ್ಸ್” ಪೇಜ್ ಗೆ ಈ ಕುರಿತಾಗಿ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಅಶ್ವಿನ್, ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಮಾಡಿದ ಅಜಾಜ್ ಪಟೇಲ್ ಬ್ಲ್ಯೂ ಟಿಕ್ ಗೆ ಅರ್ಹರು ಎಂದು ಬರೆದಿದ್ದರು.

Dear , a ten wicket bag in an innings definitely deserves to be verified here! 😂

— Ashwin 🇮🇳 (@ashwinravi99)


ಅಶ್ವಿನ್ ಅವರ ಈ ಟ್ವೀಟ್ ಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿದ್ದರು. ಇದಕ್ಕೆ ಟ್ವಿಟರ್ ಕೂಡ ಹೊರತಾಗಿರಲಿಲ್ಲ. ಅಶ್ವಿನ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅಜಾಜ್ ಪಟೇಲ್ ಅವರ ಖಾತೆಗೆ ಟ್ವಿಟರ್ ಬ್ಲ್ಯೂ ಟಿಕ್ ನೀಡಿತು. ಅಶ್ವಿನ್ ಮಾಡಿದ ಟ್ವೀಟ್ ಗೆ 59K ಲೈಕ್ಸ್ ಬಂದಿದ್ದರೆ, 509 ಕಾಮೆಂಟ್ಸ್ ಗಳು ದಾಖಲಾಗಿವೆ. ಅಶ್ವಿನ್ ಅವರ ಟ್ವೀಟ್ ಗೆ ಮನ್ನಣೆ ನೀಡಿದ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಅನ್ನು ಕೂಡ ಈ ವಿಚಾರದಲ್ಲಿ ಮೆಚ್ಚಬೇಕಾಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಶ್ವಿನ್-ಅಜಾಜ್‌ ಪಟೇಲ್

ಮೊದಲ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಉರುಳಿಸಿದ್ದ ಅಜಾಜ್ ಪಟೇಲ್, 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ 225 ರನ್ ಗೆ 14 ವಿಕೆಟ್ ಸಾಧನೆ ಮಾಡುವ ಮೂಲಕ, ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡದ ಬೌಲರ್ ನ ಶ್ರೇಷ್ಠ ನಿವರ್ಹಣೆಯ ಸಾಧನೆ ಮಾಡಿದರು. ಇದಕ್ಕೂ ಮುನ್ನ ಈ ದಾಖಲೆ ಇಯಾನ್ ಬಾಥಮ್ (Ian Botham) ಅವರ ಹೆಸರಲ್ಲಿತ್ತು. ಬಾಥಮ್ ಭಾರತ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 106 ರನ್ ಗೆ 13 ವಿಕೆಟ್ ಉರುಳಿಸಿದ್ದರು.

ಬೌಲ್ಡ್ ಆದರೂ DRS ಮೊರೆ ಹೋದ ಅಶ್ವಿನ್‌..! ವಿಡಿಯೋ ವೈರಲ್

ಇನ್ನು ಮ್ಯಾಚ್ ದೃಷ್ಟಿಯಲ್ಲಿ ಹೇಳುವುದಾದರೆ, ಮುಂಬೈ ಪಿಚ್ ನಲ್ಲಿ(Mumbai Test) ಅಶ್ವಿನ್ ಅವರ ಬೌಲಿಂಗ್ ಎದುರಿಸುವುದು ಕಿವೀಸ್ ಬ್ಯಾಟಿಂಗ್ ವಿಭಾಗಕ್ಕೆ ಕಬ್ಬಿಣದ ಕಡಲೆ ಎನಿಸಿತ್ತು. ಪಂದ್ಯದಲ್ಲಿ 8 ವಿಕೆಟ್ ಸಾಧನೆ ಮಾಡಿದ ಅಶ್ವಿನ್, ಭಾರತ ತಂಡದ (India Cricket Team) ದೊಡ್ಡ ಗೆಲುವಿಗೆ ಕಾರಣರಾಗಿದ್ದರು.  ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ (Kanpur Test) ಹರ್ಭಜನ್ ಸಿಂಗ್ (Harbhajan Singh) ಅವರ ದಾಖಲೆಯನ್ನು ಮುರಿದಿದ್ದ ಅಶ್ವಿನ್, ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಮೂರನೇ ಭಾರತೀಯ ಬೌಲರ್ ಎನ್ನುವ ದಾಖಲೆ ಮಾಡಿದ್ದರು. ಟೆಸ್ಟ್ ಸರಣಿಯಲ್ಲಿ ತಮ್ಮ ನಿರ್ವಹಣೆಗಾಗಿ ಪಂದ್ಯಶ್ರೇಷ್ಠ ಗೌರವವನ್ನೂ ಅಶ್ವಿನ್ ಪಡೆದರು.

click me!