*ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ 372 ರನ್‌ಗಳ ಬೃಹತ್ ಜಯ
*2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಗೆದ್ದ ಟೀಂ ಇಂಡಿಯಾ
*2ನೇ ಇನ್ನಿಂಗ್ಸಲ್ಲಿ ಕಿವೀಸ್ 167ಕ್ಕೆ ಆಲೌಟ್
*4ನೇ ದಿನ 43 ನಿಮಿಷಗಳಲ್ಲಿ ಕೊನೆ 5 ವಿಕೆಟ್ ಪತನ
*ಅಶ್ವಿನ್, ಜಯಂತ್‌ಗೆ ತಲಾ 4 ವಿಕೆಟ್
ಮುಂಬೈ(ಡಿ. 07): ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ (India vs New Zealand Test), ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಕಿವೀಸ್ ಮೇಲೆ ಮೊದಲ ದಿನದಿಂದಲೇ ಸವಾರಿ ಮಾಡಿ 372 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆಲ್ಲುವ ಮೂಲಕ, ತವರಿನಲ್ಲಿ ಸತತ 14ನೇ ಸರಣಿ ಗೆಲುವಿನ ಸಂಭ್ರಮ ಆಚರಿಸಿತು. ಗೆಲ್ಲಲು 540 ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 140 ರನ್ ಗಳಿಸಿತ್ತು. 4ನೇ ದಿನ ಬೆಳಗ್ಗೆ ಆ ಮೊತ್ತಕ್ಕೆ ಕೇವಲ 27 ರನ್ ಸೇರಿಸಲಷ್ಟೇ ಕಿವೀಸ್ ಶಕ್ತವಾಯಿತು. ದಿನದಾಟದ ಆರಂಭದಲ್ಲಿ ಕೆಲ ಓವರ್‌ಗಳನ್ನು ಯಶಸ್ವಿಯಾಗಿ ಎದುರಿಸಿದ ಹೆನ್ರಿ ನಿಕೋಲ್ಸ್ ಹಾಗೂ ರಚಿನ್ ರವೀಂದ್ರ (Rachin Ravindra), ಸ್ಪಿನ್ ದಾಳಿ ಎದುರು ಬಹಳ ಸಮಯ ನಿಲ್ಲಲು ಸಾಧ್ಯವಾಗಲಿಲ್ಲ. ರಚಿನ್(18) ಔಟಾಗುವ ಮೂಲಕ ಕಿವೀಸ್ ಪೆವಿಲಿಯನ್ ಪರೇಡ್ ಆರಂಭಗೊಂಡಿತು. ಕೇವಲ 5 ರನ್ ಅಂತರದಲ್ಲಿ ಕೊನೆ 5 ವಿಕೆಟ್ ಪತನಗೊಂಡವು. ಇದರಲ್ಲಿ 4 ವಿಕೆಟ್ ಜಯಂತ್ ಯಾದವ್ ಪಾಲಾದರೆ, 1 ಅಶ್ವಿನ್‌ಗೆ ದೊರೆಯಿತು. ಅಶ್ವಿನ್ ಇನ್ನಿಂಗ್ಸಲ್ಲಿ 4, ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಿತ್ತರು.
2013ರಿಂದ ತವರಿನಲ್ಲಿ ಸರಣಿ ಸೋಲದ ಭಾರತ
ಕಿವೀಸ್ ವಿರುದ್ಧ 1-0ಯಲ್ಲಿ ಗೆಲ್ಲುವ ಮೂಲಕ ಭಾರತ ತವರಿನಲ್ಲಿ ಸತತ 14ನೇ ಸರಣಿ ಗೆಲುವು ಸಂಪಾದಿಸಿದೆ. 2013ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಸರಣಿ ಗೆಲ್ಲುವ ಮೂಲಕ ಆರಂಭಗೊಂಡ ಗೆಲುವಿನ ಓಟ ಇನ್ನೂ ಮುಂದುವರಿಯುತ್ತಲ್ಲೇ ಇದ್ದು, ಭಾರತದಲ್ಲಿ ಸರಣಿ ಗೆಲ್ಲಲು ಬಲಿಷ್ಠ ತಂಡಗಳಿಗೂ ಸಾಧ್ಯವಾಗುತ್ತಿಲ್ಲ. ಕಳೆದ 8 ವರ್ಷದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದ.ಆಫ್ರಿಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ವಿರುದ್ಧ ತಲಾ 2, ಅಷ್ಘಾನಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ತಲಾ 1 ಸರಣಿ ಗೆಲುವು ಕಂಡಿದೆ.
ಟೆಸ್ಟ್‌ನಲ್ಲಿ ಭಾರತಕ್ಕೆ ರನ್ ಆಧಾರದಲ್ಲಿ ಅತಿದೊಡ್ಡ ಜಯ
ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಆಧಾರದಲ್ಲಿ ಇದು ಭಾರತದ ಅತಿದೊಡ್ಡ ಗೆಲುವು ಎನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2015ರಲ್ಲಿ ಗಳಿಸಿದ್ದ 337 ರನ್‌ಗಳ ಗೆಲುವಿನ ದಾಖಲೆಯನ್ನು ಭಾರತ ಉತ್ತಮಗೊಳಿಸಿಕೊಂಡಿದೆ. ಇನ್ನು 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ್ದ 321 ರನ್‌ಗಳ ಜಯ 3ನೇ ಅತಿದೊಡ್ಡ ಗೆಲುವು ಎನಿಸಿದೆ. ವಿಶೇಷ ಎಂದರೆ ಈ ಮೂರೂ ಪಂದ್ಯಗಳು ಸರಣಿಯ ಕೊನೆ ಪಂದ್ಯಗಳಾಗಿದ್ದವು. ಮೂರೂ ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಶ್ವಿನ್‌ಗೆ 4 ವಿಕೆಟ್ ಕಿತ್ತಿದ್ದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಇದೇ ವೇಳೆ ರನ್ ಆಧಾರದಲ್ಲಿ ನ್ಯೂಜಿಲೆಂಡ್‌ಗಿದು ಅತಿದೊಡ್ಡ ಸೋಲು. 2007ರಲ್ಲಿ ದ.ಆಫ್ರಿಕಾ ವಿರುದ್ಧ 358 ರನ್‌ಗಳಿಂದ ಸೋತಿದ್ದು ಈ ವರೆಗಿನ ದಾಖಲೆಯಾಗಿತ್ತು.
ಅಶ್ವಿನ್‌ಗೆ 9ನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿ
ಸರಣಿಯಲ್ಲಿ 14 ವಿಕೆಟ್ ಕಬಳಿಸಿ, 70 ರನ್ ಗಳಿಸಿದ ಆರ್.ಅಶ್ವಿನ್ (Ravichandran Ashwin) ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. 81 ಪಂದ್ಯಗಳಲ್ಲಿ 9ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಅತಿಹೆಚ್ಚು ಬಾರಿ ಈ ಗೌರವಕ್ಕೆ ಪಾತ್ರರಾದ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲಿಸ್ ಜೊತೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. 11 ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ.
ತವರಿನಲ್ಲಿ 300 ಟೆಸ್ಟ್ ವಿಕೆಟ್ ಪೂರೈಸಿದ ಅಶ್ವಿನ್
2ನೇ ಇನ್ನಿಂಗ್ಸಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ತವರಿನಲ್ಲಿ 300 ವಿಕೆಟ್ ಪೂರೈಸಿದ ಸಾಧನೆ ಮಾಡಿದರು. ಈ ಮೈಲಿಗಲ್ಲು ತಲುಪಿದ ವಿಶ್ವದ 6ನೇ ಹಾಗೂ ಭಾರತದ 2ನೇ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾದರು. ಅನಿಲ್ ಕುಂಬ್ಳೆ 350 ವಿಕೆಟ್ ಉರುಳಿಸಿದ್ದಾರೆ.
ಮೂರೂ ಮಾದರಿಯಲ್ಲಿ 50 ಜಯ: ಕೊಹ್ಲಿ ದಾಖಲೆ!
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಟೆಸ್ಟ್, ಏಕದಿನ, ಅಂ.ರಾ.ಟಿ20 ಮೂರೂ ಮಾದರಿಯಲ್ಲಿ ಕನಿಷ್ಠ 50 ಗೆಲುವುಗಳನ್ನು ಕಂಡ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಒಳಗಾಗಿದ್ದಾರೆ. ಕಿವೀಸ್ ವಿರುದ್ಧದ ಗೆಲುವು ಕೊಹ್ಲಿ ಕಂಡ 50ನೇ ಟೆಸ್ಟ್ ಗೆಲುವು. 97 ಪಂದ್ಯಗಳಲ್ಲಿ ಅವರು ಈ ಮೈಲಿಗಲ್ಲು ತಲುಪಿದ್ದಾರೆ. ಇನ್ನು 254 ಏಕದಿನಗಳಲ್ಲಿ 153 ಜಯ, 95 ಟಿ20ಗಳಲ್ಲಿ 59 ಜಯ ಕಂಡಿದ್ದಾರೆ.
ಕೋಚ್ ದ್ರಾವಿಡ್‌ಗೆ ಆರಂಭಿಕ ಯಶಸ್ಸು
ರಾಹುಲ್ ದ್ರಾವಿಡ್ (Rahul Dravid) ಟೀಂ ಇಂಡಿಯಾದ ಕೋಚ್ ಆಗಿ ಆರಂಭಿಕ ಯಶಸ್ಸು ಕಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಡಿದ ಮೊದಲ ಟಿ20 ಸರಣಿಯನ್ನು ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿದರೆ, ಟೆಸ್ಟ್ ಸರಣಿಯನ್ನು 1-0ಯಲ್ಲಿ ಜಯಸಿದೆ. ದ್ರಾವಿಡ್‌ರ ಕೋಚಿಂಗ್ ಶೈಲಿ ಬಗ್ಗೆ ತಂಡದ ಹಲವು ಆಟಗಾರರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈದಾನ ಸಿಬ್ಬಂದಿಗೆ 35000 ರು. ಉಡುಗೊರೆ.
ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿದ್ದಕ್ಕೆ ವಾಂಖೇಡೆ ಕ್ರೀಡಾಂಗಣದ ಮೈದಾನ ಸಿಬ್ಬಂದಿಗೆ ಟೀಂ ಇಂಡಿಯಾ 35000 ರು. ಉಡುಗೊರೆ ನೀಡಿದೆ. ಮೊದಲ ಟೆಸ್ಟ್ ಬಳಿಕ ಕಾನ್ಪುರ ಮೈದಾನ ಸಿಬ್ಬಂದಿಗೆ ಕೋಚ್ ದ್ರಾವಿಡ್ ತಮ್ಮ ವೈಯಕ್ತಿಕ ಹಣದಿಂದ 35000 ರು. ನೀಡಿದ್ದರು. ಆ ಸಂಪ್ರದಾಯವನ್ನು ಭಾರತ ತಂಡ ಮುಂದುವರಿಸಿದೆ.
ನ್ಯೂಜಿಲೆಂಡ್‌ಗೆ ಮೊದಲ ಸೋಲು
ಸತತ 10 ಟೆಸ್ಟ್‌ಗಳಲ್ಲಿ ಅಜೇಯವಾಗಿ (8 ಜಯ, 2 ಡ್ರಾ) ಉಳಿದಿದ್ದ ನ್ಯೂಜಿಲೆಂಡ್‌ಗೆ ಇದು ಸುಮಾರು 2 ವರ್ಷದಲ್ಲಿ ಮೊದಲ ಸೋಲು.
ಭಾರತಕ್ಕೆ 13 ಜಯ
ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಿದು 13ನೇ ಜಯ. ಅತಿಹೆಚ್ಚು ಗೆಲುವು ಕಂಡ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಅಪರೂಪದ ಫೋಟೋ!
ಬೇರೆ ಬೇರೆ ತಂಡಗಳಲ್ಲಿ ಒಂದೇ ಹೆಸರಿನ ಆಟಗಾರರು ಇರುವುದು ಅಪರೂಪ. ಆದರೆ ಭಾರತ-ನ್ಯೂಜಿಲೆಂಡ್ ನಡುವಿನ ಸರಣಿಯಲ್ಲಿ ಅಕ್ಷರ್ ಪಟೇಲ್, ಅಜಾಜ್ ಪಟೇಲ್, ರಚಿನ್ ರವೀಂದ್ರ, ರವೀಂದ್ರ ಜಡೇಜಾ ಒಟ್ಟಿಗೆ ಆಡಿದರು. ಈ ನಾಲ್ಕೂ ಜನ ಒಟ್ಟಿಗೆ ನಿಂತು ತೆಗಿಸಿಕೊಂಡಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಅಜಾಜ್‌ಗೆ ವಿಶೇಷ ಉಡುಗೊರೆ
ಐತಿಹಾಸಿಕ ಸಾಧನೆ ಮಾಡಿದ ಅಜಾಜ್ ಪಟೇಲ್‌ಗೆ ಟೀಂ ಇಂಡಿಯಾದ ಪರವಾಗಿ ಎಲ್ಲಾ ಆಟಗಾರರ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಆರ್.ಅಶ್ವಿನ್ ಸ್ಮರಣಿಕೆಯಾಗಿ ನೀಡಿದರು.