ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಬೀಗುತ್ತಿರುವ ಕರ್ನಾಟಕ ತಂಡ ಇದೀಗ ರಣಜಿ ಟ್ರೋಫಿ ಗೆಲುವಿನತ್ತ ಚಿತ್ತ ನೆಟ್ಟಿದೆ. ಒಂದು ವೇಳೆ ರಣಜಿ ಟ್ರೋಫಿ ಜಯಿಸಿದರೆ, ಒಂದೇ ವರ್ಷದಲ್ಲಿ 3 ದೇಶಿ ಟ್ರೋಪಿ ಗೆದ್ದ ಮೊದಲ ತಂಡ ಎನ್ನುವ ಗೌರವಕ್ಕೆ ಕರ್ನಾಟಕ ಪಾತ್ರವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು(ಡಿ.08): ವಿಜಯ್ ಹಜಾರೆ ಏಕದಿನ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳನ್ನು ಗೆದ್ದು ಬೀಗಿರುವ ಕರ್ನಾಟಕ ತಂಡ, ಡಿ.9ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿಯಲ್ಲೂ ಮಿಂಚು ಹರಿಸಲು ಸಜ್ಜಾಗಿದೆ. ಪ್ರಥಮ ದರ್ಜೆ ಮಾದರಿಯಲ್ಲೂ ಚಾಂಪಿಯನ್ ಆಗಿ ಇತಿಹಾಸ ಬರೆಯುವ ಉತ್ಸಾಹ ರಾಜ್ಯ ತಂಡದ್ದಾಗಿದೆ. ಈ ವರೆಗೂ ತಂಡವೊಂದು ಒಂದೇ ಋುತುವಿನಲ್ಲಿ ಮೂರು ಮಾದರಿಯಲ್ಲಿ ಚಾಂಪಿಯನ್ ಆದ ಉದಾಹರಣೆಗಳಿಲ್ಲ. ಅಂತಹ ಅಪರೂಪದ ಸಾಧನೆಯನ್ನು ಕರ್ನಾಟಕ ತಂಡ ಮಾಡಲು ಪಣತೊಟ್ಟಿದೆ.
ಈ ಹಿಂದೆ 2013-14, 2014-15ರ ಋುತುವಿನಲ್ಲಿ ಕರ್ನಾಟಕ ವಿಜಯ್ ಹಜಾರೆ ಹಾಗೂ ರಣಜಿ ಟ್ರೋಫಿ ಚಾಂಪಿಯನ್ಶಿಪ್ಗಳನ್ನು ಗೆದ್ದಿತ್ತು. ಇರಾನಿ ಟ್ರೋಫಿಯೂ ರಾಜ್ಯ ತಂಡದ ಪಾಲಾಗಿತ್ತು. ಆದರೆ ಮುಷ್ತಾಕ್ ಅಲಿ ಟೂರ್ನಿಯನ್ನು ಗೆದ್ದಿರಲಿಲ್ಲ. 2018-19ರಲ್ಲಿ ಮೊದಲ ಬಾರಿಗೆ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನು ಗೆದ್ದಾಗ ರಣಜಿ, ವಿಜಯ್ ಹಜಾರೆ ಟೂರ್ನಿಯನ್ನು ಜಯಿಸಲಿಲ್ಲ. ಈ ಬಾರಿ ಮೊದಲೆರಡು ಟೂರ್ನಿಗಳನ್ನು ಗೆದ್ದಿರುವ ಕರ್ನಾಟಕ, ರಣಜಿ ಗೆದ್ದು ಹೊಸ ಇತಿಹಾಸ ಬರೆಯುವ ಅವಕಾಶ ಪಡೆದಿದೆ.
ರಣಜಿ ಟ್ರೋಫಿ: ಮೊದಲ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ
ಕಳೆದ ಕೆಲ ವರ್ಷಗಳಿಂದ ರಾಜ್ಯ ತಂಡ ಅತ್ಯಂತ ಬಲಿಷ್ಠವಾಗಿದೆ. ಪ್ರತಿಭಾವಂತ ಆಟಗಾರರಿಂದ ಕೂಡಿರುವ ತಂಡ ಸ್ಥಿರ ಪ್ರದರ್ಶನ ತೋರುತ್ತಿದ್ದು, ಕಳೆದ 2 ಆವೃತ್ತಿಗಳ ರಣಜಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಈ ಬಾರಿ ಮತ್ತಷ್ಟು ಪ್ರೌಢತೆ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ 8 ಬಾರಿ ಚಾಂಪಿಯನ್ ತಂಡ, ತನ್ನ ಟ್ರೋಫಿಗಳ ಖಾತೆಗೆ ಮತ್ತೊಂದನ್ನು ಸೇರ್ಪಡೆಗೊಳಿಸಲು ಎದುರು ನೋಡುತ್ತಿದೆ.
ಬಲಿಷ್ಠ ಬ್ಯಾಟಿಂಗ್ ಪಡೆ
ಕರ್ನಾಟಕದ ಬಲವೇ ಬ್ಯಾಟಿಂಗ್. ಉತ್ಕೃಷ್ಟ ಲಯದಲ್ಲಿರುವ ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್ ತಂಡದ ಬ್ಯಾಟಿಂಗ್ ಆಧಾರವೆನಿಸಿದ್ದಾರೆ. ಕರುಣ್ ನಾಯರ್, ಆರ್.ಸಮರ್ಥ್, ರೋಹನ್ ಕದಂ, ಬಿ.ಆರ್.ಶರತ್ರಂತಹ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳ ಸೇವೆ ತಂಡಕ್ಕೆ ಲಭ್ಯವಾಗಲಿದೆ. ಡಿ.9ರಿಂದ ಆರಂಭಗೊಳ್ಳಲಿರುವ ಮೊದಲ ಪಂದ್ಯದಲ್ಲಿ ಕರ್ನಾಟಕ, ತಮಿಳುನಾಡು ವಿರುದ್ಧ ಸೆಣಸಲಿದೆ. ದಿಂಡಿಗಲ್ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮನೀಶ್ ಪಾಂಡೆ, ಕೆ.ಎಲ್.ರಾಹುಲ್ ಹಾಗೂ ಕಳೆದ ಬಾರಿಯ ಗರಿಷ್ಠ ರನ್ ಸರದಾರ ಕೆ.ವಿ.ಸಿದ್ಧಾರ್ಥ್ ಅಲಭ್ಯರಾಗಲಿದ್ದಾರೆ. ಆದರೂ ಕರ್ನಾಟಕ ಅತ್ಯುತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದೆ.
ಕಾಡಲಿದೆ ವಿನಯ್ ಅನುಪಸ್ಥಿತಿ!
ತಂಡದ ಬೌಲಿಂಗ್ ಬೆನ್ನೆಲುಬು ಎನಿಸಿದ್ದ ವಿನಯ್ ಕುಮಾರ್ ಈ ಋುತುವಿನಲ್ಲಿ ಪುದುಚೇರಿ ತಂಡಕ್ಕೆ ವಲಸೆ ಹೋಗಿದ್ದಾರೆ. ಹಲವು ವರ್ಷಗಳ ಕಾಲ ತಂಡದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ್ದ ವಿನಯ್ ಅನುಪಸ್ಥಿತಿ ಬಲವಾಗಿ ಕಾಡಲಿದೆ. ಮೊದಲ ಪಂದ್ಯಕ್ಕೆ ಹಿರಿಯ ವೇಗಿ ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ ಅಲಭ್ಯರಾಗಲಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಹೊಣೆ ರೋನಿತ್ ಮೋರೆ ಹೆಗಲಿದೆ ಬೀಳಲಿದೆ. ಯುವ ವೇಗಿ ದೇವಯ್ಯ ಮೇಲೆ ನಿರೀಕ್ಷೆ ಇರಿಸಲಾಗಿದೆ. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್, ಜೆ.ಸುಚಿತ್, ಕೆ.ಗೌತಮ್ ದೊಡ್ಡ ಪಾತ್ರ ನಿರ್ವಹಿಸಬೇಕಿದೆ.
ಪ್ರಮುಖ ಆಕರ್ಷಣೆ
* ದೇವದತ್ ಪಡಿಕ್ಕಲ್: ವಿಜಯ್ ಹಜಾರೆ ಹಾಗೂ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಗರಿಷ್ಠ ರನ್ ಕಲೆಹಾಕಿದ ದೇವದತ್ ಪಡಿಕ್ಕಲ್, ರಣಜಿ ಟ್ರೋಫಿಯಲ್ಲೂ ರನ್ ಹೊಳೆ ಹರಿಸಲು ಕಾಯುತ್ತಿದ್ದಾರೆ. ಇವರ ಆಟದ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಸಹ ಕಣ್ಣಿಟ್ಟಿದೆ. ಪಡಿಕ್ಕಲ್ ರಣಜಿ ಟ್ರೋಫಿಯಲ್ಲಿ ಮಿಂಚಿ, ಐಪಿಎಲ್‌ನಲ್ಲೂ ಅಬ್ಬರಿಸಿದರೆ ಮುಂದಿನ ವರ್ಷದ ಕೊನೆಯೊಳಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದರೆ ಅಚ್ಚರಿಯಿಲ್ಲ.
* ಮಯಾಂಕ್ ಅಗರ್‌ವಾಲ್: ದೇಸಿ ಕ್ರಿಕೆಟ್‌ನ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಮಯಾಂಕ್, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನಗಳಿಸಿದರು. ಆಡಲು ಅವಕಾಶ ಸಿಕ್ಕ ಕೂಡಲೇ ಅಬ್ಬರಿಸಿದ ಮಯಾಂಕ್, 8 ಟೆಸ್ಟ್‌ಗಳಲ್ಲಿ 800ಕ್ಕೂ ಹೆಚ್ಚು ರನ್ ಚಚ್ಚಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದರು. ಮಯಾಂಕ್ ಉಪಸ್ಥಿತಿ ಸಹಜವಾಗಿಯೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಲಿದೆ.
ಕರ್ನಾಟಕದ ವೇಳಾಪಟ್ಟಿ
ದಿನಾಂಕ ಎದುರಾಳಿ
ಡಿ.9-12 ತಮಿಳುನಾಡು
ಡಿ.17-20 ಉತ್ತರ ಪ್ರದೇಶ
ಡಿ.25-28 ಹಿಮಾಚಲ ಪ್ರದೇಶ
ಜ.3-6 ಮುಂಬೈ
ಜ.11-14 ಸೌರಾಷ್ಟ್ರ
ಜ.27-30 ರೈಲ್ವೇಸ್
ಫೆ.4-7 ಮಧ್ಯಪ್ರದೇಶ
ಫೆ.12-15 ಬರೋಡಾ