
ತಿರುವನಂತಪುರಂ[ಡಿ.08]: ವೆಸ್ಟ್‌ಇಂಡೀಸ್ ವಿರುದ್ಧ ಭಾನುವಾರ ಇಲ್ಲಿನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಸುಧಾರಿತ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನದೊಂದಿಗೆ ಮತ್ತೊಂದು ಸರಣಿ ಗೆಲುವಿನ ಮೇಲೆ ಭಾರತ ತಂಡ ಕಣ್ಣಿಟ್ಟಿದೆ.
ಕಳೆದ 13 ತಿಂಗಳಲ್ಲಿ ವಿಂಡೀಸ್ ವಿರುದ್ಧ ಆಡಿರುವ ಎಲ್ಲಾ 7 ಟಿ20 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಶುಕ್ರವಾರ ಹೈದರಾಬಾದ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದ ವಿರಾಟ್ ಕೊಹ್ಲಿ ಪಡೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ ಭಾರತ 2-1ರಲ್ಲಿ ಸರಣಿ ಗೆದ್ದಿತ್ತು.
ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ!
ಭಾನುವಾರ ಗೆಲುವು ಸಾಧಿಸಿದರೆ ಸರಣಿ ಗೆಲುವು ಒಲಿಯುವುದು ಮಾತ್ರವಲ್ಲದೆ, 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಕೆಲ ಪ್ರಯೋಗಗಳನ್ನು ಮಾಡಲು ಅನುಕೂಲವಾಗಲಿದೆ. 2020ರ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟಲು ಹೊರಟಿರುವ ಭಾರತ ತಂಡದ ಆಡಳಿತ, ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ ನಡೆಸುತ್ತಿದೆ. ಶುಕ್ರವಾರ, ಟಿ20ಯಲ್ಲಿ ಗರಿಷ್ಠ ರನ್ ಬೆನ್ನತ್ತಿ ಗೆದ್ದ ದಾಖಲೆ ಬರೆದ ಭಾರತ ತಂಡ, ಮೊದಲು ಬ್ಯಾಟ್ ಮಾಡಿದಾಗಲೂ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಂಡ ಮತ್ತೊಮ್ಮೆ ತನ್ನ ಬ್ಯಾಟ್ಸ್‌ಮನ್‌ಗಳ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಕೊಹ್ಲಿ ಇಲ್ಲವೇ ರೋಹಿತ್ ಶರ್ಮಾ ಇಬ್ಬರಲ್ಲಿ ಒಬ್ಬರು ಕಡ್ಡಾಯವಾಗಿ ದೊಡ್ಡ ಇನ್ನಿಂಗ್ಸ್ ಆಡಬೇಕಾದ ಅನಿವಾರ್ಯತೆ ಇದೆ. ಕೆ.ಎಲ್.ರಾಹುಲ್ ತಮ್ಮ ಆಕರ್ಷಕ ಲಯ ಮುಂದುವರಿಸಿರುವುದು ತಂಡಕ್ಕೆ ಲಾಭವಾಗುತ್ತಿದೆ. ಆದರೆ ರಿಷಭ್ ಪಂತ್ ಜವಾಬ್ದಾರಿಯುತ ಆಟವಾಡದೆ ಇರುವುದು ತಂಡದ ಆತಂಕ ಹೆಚ್ಚಿಸಿದೆ.
ಆಲ್ರೌಂಡರ್‌ಗಳ ಕೊರತೆ: ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡುತ್ತಿದೆ. ತಜ್ಞ ಆಲ್ರೌಂಡರ್‌ಗಳು ಇಲ್ಲದೆ ಇರುವ ಕಾರಣ, ಭಾರತ ಒಬ್ಬ ಹೆಚ್ಚುವರಿ ಬೌಲರ್ ಅನ್ನುಆಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇದರಿಂದಾಗಿ ಮಧ್ಯಮ ಕ್ರಮಾಂಕ ದುರ್ಬಲಗೊಂಡಿದೆ. ವಾಷಿಂಗ್ಟನ್ ಸುಂದರ್, ಶಿವಂ ದುಬೆ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಾಷಿಂಗ್ಟನ್ ಕ್ಷೇತ್ರರಕ್ಷಣೆಯಲ್ಲೂ ಎಡವಟ್ಟು ಮಾಡುತ್ತಿದ್ದಾರೆ. ಆದರೆ ಭಾರತದ ಬಳಿ ಬೇರೆ ಆಯ್ಕೆಗಳಿಲ್ಲ. ಹೀಗಾಗಿ, ಈ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.
ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!
ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹರ್ ಮೇಲೆ ಒತ್ತಡ ಹೆಚ್ಚಾಗಿದ್ದು, ಯಜುವೇಂದ್ರ ಚಹಲ್ ಸಹ ಒತ್ತಡಕ್ಕೆ ಸಿಲುಕಿದ್ದಾರೆ. ವಿಂಡೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವುದು ಭಾರತೀಯ ಬೌಲರ್‌ಗಳಿಗೆ ಮತ್ತೊಮ್ಮೆ ಸವಾಲಾಗಿ ಪರಿಣಮಿಸಬಹುದು.
ವಿಂಡೀಸ್‌ಗೆ ಪುಟಿದೇಳುವ ಗುರಿ: ಮೊದಲ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ 207 ರನ್ ಗಳಿಸಿದರೂ, ಕಳಪೆ ಬೌಲಿಂಗ್‌ನಿಂದಾಗಿ ವಿಂಡೀಸ್ ಪಂದ್ಯ ಕೈಚೆಲ್ಲಿತ್ತು. ನಾಯಕ ಪೊಲ್ಲಾರ್ಡ್, ಅನುಭವಿ ಜೇಸನ್ ಹೋಲ್ಡರ್ ಹಾಗೂ ಶೆಲ್ಡನ್ ಕಾಟ್ರೆಲ್ ಮೇಲೆ ಹೆಚ್ಚು ವಿಶ್ವಾಸವಿರಿಸಿದ್ದಾರೆ. ವಿಂಡೀಸ್ 23 ಇತರೆ ರನ್‌ಗಳು ನೀಡಿತು. ಆ ಬಗ್ಗೆ ತುರ್ತಾಗಿ ಗಮನ ಹರಿಸಬೇಕಿದೆ. ಇದೇ ವರ್ಷ ಆಗಸ್ಟ್‌ನಲ್ಲಿ ತವರಿನಲ್ಲಿ 0-3ರಲ್ಲಿ ವೈಟ್‌ವಾಶ್ ಆಗಿದ್ದ ಕೆರಿಬಿಯನ್ ಪಡೆ, ಈ ಪ್ರವಾಸದಲ್ಲಿ ವೈಟ್‌ವಾಶ್ ತಪ್ಪಿಸಿಕೊಳ್ಳಲು ಹೋರಾಡಲಿದೆ.
ಪಿಚ್ ರಿಪೋರ್ಟ್
ಗ್ರೀನ್‌ಫೀಲ್ಡ್ ಕ್ರೀಡಾಂಗಣ ಈ ವರೆಗೂ 2 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಆತಿಥ್ಯ ವಹಿಸಿದೆ. ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳಿಗೆ ನೆರವು ದೊರೆತಿತ್ತು. ಈ ವರ್ಷ ಮುಷ್ತಾಕ್ ಅಲಿ ಟಿ20 ಟೂರ್ನಿಯ 14 ಪಂದ್ಯಗಳಿಗೆ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಮತ್ತೊಮ್ಮೆ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದರು. ಹೀಗಾಗಿ ಎರಡೂ ತಂಡಗಳು ಪ್ರಮುಖವಾಗಿ ಸ್ಪಿನ್ನರ್‌ಗಳನ್ನೇ ವಿಕೆಟ್ ಕಬಳಿಸಲು ಅಸ್ತ್ರಗಳನ್ನಾಗಿ ಬಳಸಿಕೊಳ್ಳಬಹುದು. ಭಾರತೀಯ ಸ್ಪಿನ್ನರ್‌ಗಳು ಹೆಚ್ಚಿನ ಲಾಭ ಪಡೆದರೆ ಅಚ್ಚರಿಯಿಲ್ಲ.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.