ಕರ್ನಾಟಕದ ಯುವ ಪ್ರತಿಭೆ ವಿದ್ಯಾಧರ್ ಪಾಟೀಲ್ ಮುಂಬರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಯಚೂರಿನ ಹಳ್ಳಿ ಹುಡುಗ ಇದೀಗ ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತು ದಕ್ಷಿಣ ಆಫ್ರಿಕಾ ತೆರಳಲಿದ್ದಾರೆ. ವಿದ್ಯಾಧರ್ ಪಾಟೀಲ್ ಕ್ರಿಕೆಟ್ ಜರ್ನಿಯ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆಯಾದ ಕನ್ನಡಪ್ರಭ ಮಾಡಿದೆ. ವಿದ್ಯಾಧರ್ ಏನಂದ್ರು, ನೀವೇ ನೋಡಿ...
ಸಂದರ್ಶನ: ಧನಂಜಯ ಎಸ್. ಹಕಾರಿ
ಬೆಂಗಳೂರು(ಡಿ.08): ಪೃಥ್ವಿ ಶಾ ಹಾಗೂ ತಂಡ ಅಂಡರ್-19 ವಿಶ್ವಕಪ್ ಗೆದ್ದು ಸಂಭ್ರಮಿಸಿದ ದಿನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ಮರೆತಿಲ್ಲ. ಅಷ್ಟರಾಗಲೇ ಮತ್ತೊಂದು ಅಂಡರ್-19 ವಿಶ್ವಕಪ್ ಬಂದಿದೆ. ಜ.17ರಿಂದ ಫೆ.9ರ ವರೆಗೂ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೂರ್ನಿಗೆ ಕಳೆದ ವಾರ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿತು. ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರು ಸ್ಥಾನ ಪಡೆದರು. ಅದರಲ್ಲಿ ವಿದ್ಯಾಧರ್ ಪಾಟೀಲ್ ಸಹ ಒಬ್ಬರು. ರಾಯಚೂರಿನ ವೇಗದ ಬೌಲರ್ ತಮ್ಮ ಸಂಭ್ರಮವನ್ನು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆಯಾದ ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದು, ವಿಶ್ವಕಪ್ಗೆ ನಡೆಸಿರುವ ತಯಾರಿ ಬಗ್ಗೆ ವಿವರಿಸಿದ್ದಾರೆ.
undefined
ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಟೀಂ ಇಂಡಿಯಾ ಸೇರಿದ್ಹೇಗೆ..?
ಇಂಗ್ಲೆಂಡ್ ಪ್ರವಾಸ ಟರ್ನಿಂಗ್ ಪಾಯಿಂಟ್
2011ರಲ್ಲಿ ಭಾರತ ತಂಡದ ವಿಶ್ವಕಪ್ ಗೆಲುವು ವಿದ್ಯಾಧರ್‌ರಲ್ಲಿದ್ದ ಕ್ರಿಕೆಟ್ ಪ್ರೇಮವನ್ನು ಹೆಚ್ಚಿಸಿತು. ಆ ಗೆಲುವಿನಿಂದ ಸ್ಫೂರ್ತಿ ಪಡೆದು ತಾವು ಕ್ರಿಕೆಟಿಗರಾಗಬೇಕು ಎಂದು ನಿರ್ಧರಿಸಿದ ವಿದ್ಯಾಧರ್, ರಾಯಚೂರಿನ ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು. ಅಲ್ಲಿಂದ ಅವರ ಕ್ರಿಕೆಟ್ ಪಯಣ ಆರಂಭಗೊಂಡಿತು. 2019ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ಅಂಡರ್-19 ತಂಡದಲ್ಲಿದ್ದ ಅವರು, ತ್ರಿಕೋನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದರು. ಬಳಿಕ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್ ಹಾಗೂ ತವರಿನಲ್ಲಿ ನಡೆದ ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ, ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿದರು.
ಕೋಚ್ ರಾಹುಲ್ ದ್ರಾವಿಡ್ ನೆರವು
ಅಂಡರ್-19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ವಿದ್ಯಾಧರ್‌ಗೆ ಅತ್ಯಗತ್ಯ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ‘ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಇಂಗ್ಲೆಂಡ್ ಪ್ರವಾಸ ಹೊಸ ಅನುಭವ ನೀಡಿತು. ವಾತಾವರಣ ಬದಲಾದಾಗ ಚೆಂಡಿನ ವರ್ತನೆ ಬದಲಾಗುತ್ತದೆ. ಇದು ನನ್ನಲ್ಲಿ ಗೊಂದಲ ಮೂಡಿಸಿತ್ತು. ಆದರೆ ರಾಹುಲ್ ಸರ್, ನನ್ನನ್ನು ಸಮಾಧಾನಗೊಳಿಸಿದರು. ಆಟವನ್ನು ಆನಂದಿಸುವಂತೆ ಸಲಹೆ ನೀಡಿದರು. ದೇಶಕ್ಕಾಗಿ ಆಡುವ ಛಲ ಕಳೆದುಕೊಳ್ಳದಂತೆ ಹುರಿದುಂಬಿಸಿದರು’ ಎಂದು ವಿದ್ಯಾಧರ್ ಹೇಳಿದರು.
ಅಂಡರ್-19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ, ನಮ್ಮ ಹೆಮ್ಮೆ
ವಿದ್ಯಾಧರ್‌ಗೆ ಕೆಪಿಎಲ್‌ನಲ್ಲಿ ಕರ್ನಾಟಕದ ಹಿರಿಯ ಹಾಗೂ ಅನುಭವಿ ವೇಗಿಗಳಾದ ವಿನಯ್ ಕುಮಾರ್ ಹಾಗೂ ಎಸ್.ಅರವಿಂದ್ರಿಂದ ಮಾರ್ಗದರ್ಶನ ಸಿಕ್ಕಿದೆ. 2018ರಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದಲ್ಲಿದ್ದ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ 2019ರಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ವಿದ್ಯಾಧರ್, ಉತ್ತಮ ಪ್ರದರ್ಶನ ತೋರಿದ್ದರು.
ಅಭ್ಯಾಸಕ್ಕಾಗಿ 7 ಕಿ.ಮೀ. ಸೈಕಲ್ ತುಳಿಯುತ್ತಿದ್ದ ವೇಗಿ!
ರಾಯಚೂರು ಜಿಲ್ಲೆಯ ಚಿಕ್ಕಸಗೂರು ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ ವಿದ್ಯಾಧರ್ ಪಾಟೀಲ್, 10ನೇ ವಯಸ್ಸಿನಲ್ಲಿ ಕ್ರಿಕೆಟ್ ಆಟಕ್ಕೆ ಮನಸೂರೆ ಗೊಂಡರು. ತಂದೆ ಸೋಮಶೇಖರ್ ಆಸೆಯಂತೆ ರಾಯಚೂರು ವಲಯದ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು. ವಿದ್ಯಾಧರ್ ಬ್ಯಾಟ್ಸ್‌ಮನ್ ಆಗಬೇಕು ಎನ್ನುವುದು ತಂದೆಯ ಆಸೆಯಾಗಿತ್ತು. ಆದರೆ ವಿದ್ಯಾಧರ್‌ಗೆ ತರಬೇತಿ ನೀಡುತ್ತಿದ್ದ ಕೋಚ್ ವೆಂಕಟ್ ರೆಡ್ಡಿ ಅವರಿಗೆ ಮಾತ್ರ ಇವರಲ್ಲಿ ಬೌಲರ್ ಒಬ್ಬ ಕಾಣಿಸಿಕೊಂಡಿದ್ದ. ವಿದ್ಯಾಧರ್ ಎತ್ತರದ ಹುಡುಗ, ವೇಗದ ಬೌಲರ್‌ಗೆ ಇರಬೇಕಿರುವ ಗುಣಗಳು ಇವರಲ್ಲಿದ್ದ ಕಾರಣ ಕೋಚ್ ವೆಂಕಟ್ ವೇಗದ ಬೌಲರ್ ಆಗಲು ಸೂಚಿಸಿದ್ದರಂತೆ. ವಿದ್ಯಾಧರ್ ವೇಗದ ಬೌಲರ್ ಆಗಿ ರೂಪುಗೊಳ್ಳಲು ಸುಮಾರು 7 ವರ್ಷ ಕಷ್ಟಪಟ್ಟಿದ್ದಾರೆ. ‘ವಿದ್ಯಾಧರ್ ಪ್ರತಿದಿನ ಚಿಕ್ಕಸಗೂರಿನಿಂದ 7 ಕಿ.ಮೀ. ಸೈಕಲ್ ತುಳಿದುಕೊಂಡು ರಾಯಚೂರು ವಲಯ ಕ್ರಿಕೆಟ್ ಅಕಾಡೆಮಿಗೆ ಅಭ್ಯಾಸಕ್ಕೆ ಹೋಗುತ್ತಿದ್ದ. ಆತನ ಶ್ರಮಕ್ಕೆ ಈಗ ಪ್ರತಿಫಲ ದೊರೆಯುತ್ತಿದೆ’ ಎಂದು ವಿದ್ಯಾಧರ್ರ ತಾಯಿ ಕವಿತಾ ಪಾಟೀಲ್ ಸಂತಸ ವ್ಯಕ್ತಪಡಿಸಿದರು.
ಸದ್ಯ ರಾಯಚೂರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾಧರ್, ಭವಿಷ್ಯದಲ್ಲಿ ಭಾರತ ತಂಡದಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಅಂಡರ್-19 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿ, ಸದ್ಯದಲ್ಲೇ ಕರ್ನಾಟಕ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡುವುದು ಅವರ ಗುರಿಯಾಗಿದೆ.