ಪಾಕಿಸ್ತಾನದ ಆರು ವರ್ಷದ ಬಾಲಕಿ ಸೋನಿಯಾ ಖಾನ್ ಅವರ ಬ್ಯಾಟಿಂಗ್ ವೈರಲ್ ಆಗಿದ್ದು, ಆಕೆಯನ್ನು ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾಗೆ ಹೋಲಿಕೆ ಮಾಡಲಾಗುತ್ತಿದೆ. ಆಕೆ ಪುಲ್ ಶಾಟ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಮ್ಮಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುವ ಪ್ರತಿಭೆಗಳಿಗೆ ಕೊರತೆ ಏನಿಲ್ಲ, ಗಲ್ಲಿಯಲ್ಲಿ ಕ್ರಿಕೆಟ್ ಆಡಿ ಪ್ರಾಕ್ಟಿಸ್ ಮಾಡಿದವರಿಗೆ ಒಳ್ಳೆ ಅವಕಾಶ ಸಿಕ್ಕರೆ ಅವರು ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವುದರಲ್ಲಿ ಸಂಶಯವೇ ಬೇಡ. ಇತ್ತೀಚೆಗೆ ಭಾರತದ ಪುಟಾಣಿ ಕ್ರಿಕೆಟರ್ ಸುಶೀಲಾ ಮೀನಾ ತಮ್ಮ ಅದ್ಭುತವಾದ ಬೌಲಿಂಗ್ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರಿಯ ಮಟ್ಟದ ಗಮನ ಸೆಳೆದಿದ್ದರು. ಅನೇಕರು ಆಕೆಯನ್ನು ಹಿರಿಯ ಕ್ರಿಕೆಟರ್ ಜಹೀರ್‌ಖಾನ್‌ಗೆ ಹೋಲಿಕೆ ಮಾಡಿದ್ದರು. ಹೀಗಿರುವಾಗ ಈಗ ನೆರೆಯ ರಾಷ್ಟ್ರ ಪಾಕಿಸ್ತಾನದ ಪುಟ್ಟ ಬಾಲಕಿಯೊಬ್ಬಳು ತನ್ನ ಅದ್ಭುತ ಬ್ಯಾಟಿಂಗ್ ಕಾರಣಕ್ಕೆ ಸುದ್ದಿಯಲ್ಲಿದ್ದಾಳೆ.
ಪಾಕಿಸ್ತಾನದ ಆರು ವರ್ಷದ ಬಾಲಕಿಯ ಕ್ರಿಕೆಟ್ ಪ್ರತಿಭೆಗೆ ನೆಟ್ಟಿಗರು ಬೆರಗಾಗಿದ್ದು ಆಕೆಯನ್ನು ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾಗೆ ಹೋಲಿಕೆ ಮಾಡಿದ್ದು, ಆಕೆ ಕ್ರಿಕೆಟ್ ಆಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್‌ಗಳು ಬೀಸುವ ಪುಲ್ ಶಾಟ್ ಅನ್ನು ಕ್ರೀಡೆಯ ಅತ್ಯಂತ ಐಕಾನಿಕ್ ಸ್ಟ್ರೋಕ್‌ಗಳಲ್ಲಿ ಒಂದೆಂದು ಹೆಚ್ಚಾಗಿ ಕ್ರಿಕೆಟ್ ಪ್ರಿಯರು ಬಣ್ಣಿಸುತ್ತಾರೆ. ಹೀಗಿರುವಾಗ ಪಾಕಿಸ್ತಾನದ ಆರು ವರ್ಷದ ಬಾಲಕಿ ಸೋನಿಯಾ ಖಾನ್ ಬಹಳ ಸುಲಭವಾಗಿ ಪುಲ್ ಶಾಟ್ ಹೊಡೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಆಕೆಯನ್ನು ಭಾರತದ ಕ್ರಿಕೆಟರ್ ರೋಹಿತ್ ಶರ್ಮಾಗೆ ಹೋಲಿಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಿಚರ್ಡ್ ಕೆಟಲ್‌ಬರೋ ಅವರು ಈ ಬಾಲಕಿಯ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನದ 6 ವರ್ಷದ ಪ್ರತಿಭಾನ್ವಿತ ಬಾಲಕಿ ಸೋನಿಯಾ ಖಾನ್, ರೋಹಿತ್ ಶರ್ಮಾ ಅವರಂತೆ ಪುಲ್ ಶಾಟ್ ಆಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಳದಿ ಬಣ್ಣದ ಚುಡಿದಾರ್ ಧರಿಸಿದ ಪುಟ್ಟ ಬಾಲಕಿ ಸಲೀಸಾಗಿ ಫುಲ್ ಶಾಟ್ ಹೊಡೆದಿದ್ದಾಳೆ. ತುಂಬಾ ಸೊಗಸಾಗಿ ಬಾಲನ್ನು ಎದುರಿಸುವ ಆಕೆಯ ಪುಲ್ ಶಾಟ್ ಹೊಡೆತಕ್ಕೆ ಈಗ ನೆಟ್ಟಿಗರು ಫಿದಾ ಆಗಿದ್ದಾರೆ.
ನಿನ್ನೆ ಪೋಸ್ಟ್ ಆಗಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದಾರೆ. ಅನೇಕ ಕ್ರಿಕೆಟ್ ಪ್ರಿಯರು ಸೋನಿಯಾ ಖಾನ್ ಪ್ರತಿಭೆ ಮೆಚ್ಚಿ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಹಲವು ಕ್ರಿಕೆಟ್ ಪ್ರೇಮಿಗಳು ಕೂಡ ಈಕೆಯ ಕ್ರಿಕೆಟ್ ಪ್ರತಿಭೆಯನ್ನು ರೋಹಿತ್ ಶರ್ಮಾ ಆಟಕ್ಕೆ ಹೋಲಿಸಿ ವಾವ್, ಸೂಪರ್ , ಅದ್ಬುತ ಎಂದು ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲೂ ಕೆಲವು ರಿಯಲ್ ಆದ ಪ್ರತಿಭೆಗಳಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಫಾಲೋ-ಥ್ರೂ ಅನ್ನು ಕೂಡ ಜನ ಮೆಚ್ಚಿದ್ದಾರೆ. ಈಕೆ ವೃತ್ತಿಪರರಂತೆ ಆಡುತ್ತಿದ್ದಾಳೆ. ಎಲ್ಲೂ ಕಟ್‌ಗಳಿಲ್ಲ, ಸ್ವೀಪ್‌ಗಳಿಲ್ಲ ಅದ್ಭುತವಾದ ಹೊಡೆತವಿದು. ಇದು ನಿಜವಾದ ಗಲ್ಲಿ ಕ್ರಿಕೆಟ್ ಕೈಚಳಕ ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬರು ಆಕೆ ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕಿಂತ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಬಿಬಿಸಿ ಸ್ಪೋರ್ಟ್ಸ್ ಅಕಾಡೆಮಿ ವರದಿಯ ಪ್ರಕಾರ, ಪುಲ್ ಶಾಟ್ ಎಂದರೆ ಶಾರ್ಟ್-ಪಿಚ್ ಎಸೆತವನ್ನು ಎದುರಿಸಲು ಬ್ಯಾಕ್ ಫೂಟ್‌ನಿಂದ ಆಡುವ ಕ್ರಾಸ್-ಬ್ಯಾಟಿಂಗ್ ಹೊಡೆತವಾಗಿದ್ದು, ಇದು ಚೆಂಡನ್ನು ಕಾಲುಗಳ ಕಡೆಗೆ (leg side)ನಿರ್ದೇಶಿಸುತ್ತದೆ. ತಲೆಯ ಎತ್ತರದಲ್ಲಿ ಆಡುವ ಹುಕ್ ಶಾಟ್‌ಗಿಂತ ಭಿನ್ನವಾಗಿ, ಪುಲ್ ಶಾಟ್ ಅನ್ನು ಸೊಂಟದ ಮಟ್ಟದ ಸುತ್ತಲೂ ಕಾರ್ಯಗತಗೊಳಿಸಲಾಗುತ್ತದೆ ಹೀಗಾಗಿ ಇದನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಈ ಫುಲ್ ಶಾಟ್‌ನ್ನು ಅನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸರಿಯಾದ ಪಾದಚಲನೆ ಮತ್ತು ಪೂರ್ವ ನಿರೀಕ್ಷೆ ನಿರ್ಣಾಯಕವಾಗಿರಬೇಕಾಗುತ್ತದೆ.
ಬಾಲಕಿಯ ಅದ್ಬುತ ಬ್ಯಾಟಿಂಗ್ ವೀಡಿಯೋ ಇಲ್ಲಿದೆ ನೋಡಿ
6 yrs old ~ Talented Sonia Khan from Pakistan 🇵🇰 (Plays Pull Shot like Rohit Sharma) 👏🏻 pic.twitter.com/Eu7WSOZh19
— Richard Kettleborough (@RichKettle07)