ನನ್ನ ಮಗನ ಕ್ರಿಕೆಟ್ ಭವಿಷ್ಯ ಹಾಳು ಮಾಡಿದ್ದೇ ಈ ನಾಲ್ವರು: ಸಂಜು ಸ್ಯಾಮ್ಸನ್ ತಂದೆಯ ಗಂಭೀರ ಆರೋಪ!

Published : Nov 14, 2024, 12:19 PM IST
ನನ್ನ ಮಗನ ಕ್ರಿಕೆಟ್ ಭವಿಷ್ಯ ಹಾಳು ಮಾಡಿದ್ದೇ ಈ ನಾಲ್ವರು: ಸಂಜು ಸ್ಯಾಮ್ಸನ್ ತಂದೆಯ ಗಂಭೀರ ಆರೋಪ!

ಸಾರಾಂಶ

ತಮ್ಮ ಮಗನ ಒಂದು ದಶಕದ ಕ್ರಿಕೆಟ್ ಬದುಕು ಹಾಳಾಗಲು ಟೀಂ ಇಂಡಿಯಾದ ಈ ನಾಲ್ವರೇ ಕಾರಣ ಎಂದು ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ತಿರುವನಂತಪುರಂ: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್, ಇದಾದ ಬಳಿಕ ಸತತ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದಾರೆ. ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಅವರು ತಮ್ಮ ಮಗನ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಹಾಳಾಗಲು ನಾಲ್ವರು ಪ್ರಮುಖ ಕಾರಣ ಎಂದು ಆರೋಪಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಂದು ದಶಕಗಳ ಕಾಲ ತಮ್ಮ ಮಗನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಹಾಳಾಗಲು ಟೀಂ ಇಂಡಿಯಾ ಮಾಜಿ ನಾಯಕರಾದ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ ಕಾರಣ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಅದೇ ರೀತಿ ಸಂಜು ಸ್ಯಾಮ್ಸನ್ ಅವರ ನೆಚ್ಚಿನ ಕ್ರಿಕೆಟಿಗ ಎನಿಸಿಕೊಂಡಿರುವ ಟೀಂ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡಾ, ಸಂಜು ಕ್ರಿಕೆಟ್ ಭವಿಷ್ಯ ಹಾಳಾಗಲು ಕಾರಣ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಪರ್ತ್‌ನಲ್ಲಿ ಟೀಂ ಇಂಡಿಯಾ ಕಠಿಣ ಅಭ್ಯಾಸ!

ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿ ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆಯೇ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ ಭಾರತ ಟಿ20 ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಾರಂಭಿಸಿದೆ. ಸಂಜು ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದು, ಸತತ ಎರಡು ಟಿ20 ಶತಕ ಸಿಡಿಸಿ ಮಿಂಚಿದ್ದರು.

"ಮೂರರಿಂದ ನಾಲ್ಕು ಮಂದಿ ನನ್ನ ಮಗನ ಹತ್ತು ವರ್ಷಗಳ ಅಮೂಲ್ಯ ಕ್ರಿಕೆಟ್ ವೃತ್ತಿಬದುಕನ್ನು ಹಾಳು ಮಾಡಿದರು. ನಾಯಕರಾಗಿದ್ದಂತಹ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್, ಈ ನಾಲ್ವರು ನನ್ನ ಮಗನ 10 ವರ್ಷಗಳ ಕ್ರಿಕೆಟ್ ಬದುಕನ್ನು ಹಾಳು ಮಾಡಿದರು.  ಯಾರೆಷ್ಟೇ ಸಂಜುವನ್ನು ನೋಯಿಸಿದ್ದರೂ, ಆತ ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ" ಎಂದು ಮಲೆಯಾಳಿ ನ್ಯೂಸ್‌ವೊಂದಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ. 

ರಣಜಿ ಟ್ರೋಫಿ: ವಾಸುಕಿ ಕೌಶಿಕ್ ವೇಗಕ್ಕೆ ಉತ್ತರ ಪ್ರದೇಶ ತತ್ತರ!

ಇನ್ನು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಅದೇ ರೀತಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ ಭಾರತ ಟಿ20 ತಂಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಾರಂಭಿಸಿವೆ. 

ಕೆಲ ದಿನಗಳ ಹಿಂದಷ್ಟೇ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ತಮ್ಮ ಬಳಿ ಬಂದು, ನೀವು ಭಾರತ ಪರ ಮುಂದಿನ 7 ಟಿ20 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದೀರಿ ಎಂದು ತಿಳಿಸಿರುವುದಾಗಿ ಸಂಜು ಸ್ಯಾಮ್ಸನ್ ಹೇಳಿದ್ದರು.

"ದುಲೀಪ್ ಟ್ರೋಫಿ ಆಡುತ್ತಿದ್ದಾಗ ಸೂರ್ಯ ನನ್ನ ಬಳಿ ಬಂದು, 'ನೀವು ಮುಂದಿನ 7 ಪಂದ್ಯಗಳನ್ನು ಭಾರತ ಪರ ಆರಂಭಿಕನಾಗಿ ಆಡುತ್ತೀರ. ಫಲಿತಾಂಶ ಏನೇ ಬರಲಿ, ನೀವೇ ಮುಂದಿನ ಏಳು ಪಂದ್ಯಗಳಲ್ಲೂ ಇನ್ನಿಂಗ್ಸ್ ಆರಂಭಿಸುತ್ತೀರ ಎಂದು ಹೇಳಿದರು. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಸ್ಪಷ್ಟ ಚಿತ್ರಣ ನನಗೆ ಸಿಕ್ಕಿದ್ದು. ಇದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಟೀಂ ಮ್ಯಾನೇಜ್‌ಮೆಂಟ್ ಕೂಡಾ ನನಗೆ ಸ್ಪಷ್ಟ ಸಂದೇಶ ಕೊಟ್ಟಿದೆ" ಎಂದು ಸಂಜು ಹೇಳಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!