
ಸೋಶಿಯಲ್ ಮೀಡಿಯಾದಲ್ಲಿ 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಪಾಕಿಸ್ತಾನದ ಮಾಜಿ ಬೌಲರ್. ಅಂದು ಭಾರತ ತಂಡದ ಗೆಲುವನ್ನ ಅರಗಿಸಿಕೊಳ್ಳಲಾಗದೇ ಪಾಕಿಸ್ತಾನಿಯರು ಇಂದಿಗೂ ಕೂಡ ಒದ್ದಾಡುತ್ತಿದ್ದಾರೆ.
ಅಂದ್ಹಾಗೆ 2011ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿ ಫೈನಲ್ ತಲುಪಿತ್ತು. ಆ ಪಂದ್ಯ ಮುಗಿದು ದಶಕಗಳೇ ಕಳೆದರೂ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್‌ಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಣ್ತದೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳು. ಅಂದು ಸಚಿನ್ ತೆಂಡೂಲ್ಕರ್ ಔಟಾಗಿದ್ದರು. ಆದರೆ ಡಿಆರ್‌ಎಸ್‌ನಲ್ಲಿ (DRS) ಮೋಸ ನಡೆಯಿತು ಎಂದು ಅಜ್ಮಲ್ ಮತ್ತೊಮ್ಮೆ ಹಳೇ ಟೇಪ್ ರೆಕಾರ್ಡ್ ಹಾಕಿದ್ದಾರೆ.
2011ರ ಮಾರ್ಚ್ 30ರಂದು ಮೊಹಾಲಿಯಲ್ಲಿ ವಿಶ್ವಕಪ್‌ನ ಸೆಮಿಫೈನಲ್ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ 9 ವಿಕೆಟ್‌ಗೆ 260 ರನ್ ಗಳಸಿತ್ತು. ಸಚಿನ್ ತೆಂಡೂಲ್ಕರ್ 85 ರನ್ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. 261 ರನ್‌ಗಳ ಗುರಿ ಬೆನ್ನು ಹತ್ತಿದ್ದ ಪಾಕ್, 231 ರನ್‌ಗಳಿಗೆ ಆಲೌಟ್ ಆಗಿ ಸೋಲನ್ನ ಅನುಭವಿಸಿತ್ತು. ಈ ಪಂದ್ಯದಲ್ಲಿ ಸಚಿನ್‌ಗೆ ಸಿಕ್ಕ ಜೀವದಾನ ಇಂದಿಗೂ ಪಾಕ್ ಆಟಗಾರರ ಮರೆಯಲು ಆಗುತ್ತಿಲ್ಲ. ಸಚಿನ್ 23 ರನ್ ಗಳಿಸಿ ಆಡುತ್ತಿದ್ದಾಗ ಸಯೀದ್ ಅಜ್ಮಲ್ ಎಸೆದ ಚೆಂಡು ನೇರವಾಗಿ ಪ್ಯಾಡ್‌ಗೆ ತಗುಲಿತ್ತು. ಪಾಕ್ ಆಟಗಾರರ ಮನವಿಗೆ ಸ್ಪಂದಿಸಿದ ಅಂಪೈರ್ ಔಟ್ ಎಂದು ತೀರ್ಪು ಕೊಟ್ಟಿದ್ದರು.
ನಾನ್‌ಸ್ಟ್ರೈಕರ್‌ನಲ್ಲಿದ್ದ ಗಂಭೀರ್ ಸಲಹೆಯಂತೆ ಸಚಿನ್ ತಕ್ಷಣವೇ ರಿವ್ಯೂ (DRS) ಪಡೆದರು. ಟಿವಿ ಪರದೆಯಲ್ಲಿ ಚೆಂಡು ಲೆಗ್ ಸ್ಟಂಪ್‌ಗೆ ತಾಗದೆ ಪಕ್ಕಕ್ಕೆ ಹೋಗುತ್ತಿರುವುದು ಸ್ಪಷ್ಟವಾಯಿತು. ಇದರಿಂದ ಅಂಪೈರ್ ತಮ್ಮ ತೀರ್ಪು ಬದಲಿಸಿ ಸಚಿನ್‌ಗೆ ನಾಟೌಟ್ ತೀರ್ಪು ನೀಡಿದರು.
ಇದೇ ಘಟನೆಯನ್ನ ಸ್ಮರಿಸಿದ ಇತ್ತೀಚೆಗೆ ಮಾತನ್ನಾಡಿರುವ ಅಜ್ಮಲ್, ಆ ಪಂದ್ಯದಲ್ಲಿ ಭಾರತಕ್ಕೆ ಒಳ್ಳೆ ಆರಂಭ ಸಿಕ್ಕಿತ್ತು. ಆಮೇಲೆ ವಿಕೆಟ್ ಬೀಳಲು ಶುರುವಾಯಿತು. ಸಚಿನ್ ಅವರ ಆ ಎಲ್ ಬಿಡಬ್ಲ್ಯೂಗೆ ಅಂಪೈರ್ ಔಟ್ ಕೊಟ್ಟಿದ್ದರು. ಆದರೆ ಗಂಭೀರ್ ಹೇಳಿದ್ರು ಅಂತ ಸಚಿನ್ ರಿವ್ಯೂ ತಗೊಂಡ್ರು. ಇವತ್ತಿಗೂ ನನಗೆ ಅನುಮಾನವಿದೆ. ಆವತ್ತು ಡಿಆರ್‌ಎಸ್‌ನ ಕೊನೆಯ ಫ್ರೇಮ್ ಅನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ.
ಸದ್ಯ ಅಜ್ಮಲ್ ಈ ಹೇಳಿಕೆಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋಲನ್ನು ಒಪ್ಪಿಕೊಳ್ಳಲು ಆಗದೇ ಈಗಲೂ ಕಣ್ಣೀರು ಹಾಕುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಗಳು ಹೇಳುತ್ತಿದ್ದಾರೆ. ಇನ್ನು, 2011 ರಲ್ಲಿ ಸಯೀದ್ ಅಜ್ಮಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಆ ಒಂದೇ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಕಿತ್ತಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ 35 ಟೆಸ್ಟ್‌ಗಳಿಂದ 178 ವಿಕೆಟ್ ಹಾಗೂ 113 ಏಕದಿನ ಪಂದ್ಯಗಳಿಂದ 184 ವಿಕೆಟ್ ಪಡೆದಿದ್ದಾರೆ. 2015ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.