
ಟೀಂ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದ ಮುಕ್ತಾಯದ ಬಳಿಕ ಮ್ಯಾನೇಜ್‌ಮೆಂಟ್ ವಿರುದ್ಧ ಗರಂ ಆಗಿರುವ ಶ್ರೀಕಾಂತ್, ಸಂಜು ಸ್ಯಾಮ್ಸನ್ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ನಡೆಸಿಕೊಳ್ಳುತ್ತಿರುವ ವಿಧಾನವನ್ನು ಪ್ರಶ್ನಿಸಿದ್ದಾರೆ.
ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಪ್ಲೇಯರ್ ಆಫ್ ದಿ ಸೀರಿಸ್ ಆಗಿದ್ದ ಸೂರ್ಯವಂಶಿ ಅವರನ್ನು, ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಿಂದ ಕೈಬಿಟ್ಟು, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಕೇವಲ 10 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್, ಅಫ್ಘಾನ್ ವಿರುದ್ಧದ ಮೊದಲ ಟಿ20 ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟ ಟೀಂ ಇಂಡಿಯಾ ನಡೆಯ ಬಗ್ಗೆ ನನ್ನನ್ನು ಪ್ರಶ್ನಿಸಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶ್ರೀಕಾಂತ್, ಮೊನ್ನೆ ನಡೆದ ಪಂದ್ಯದಲ್ಲಿ ಸೂರ್ಯವಂಶಿ ಆಡಿರಲಿಲ್ಲ. ಇದರಿಂದ ನಾವು ಮ್ಯಾಚ್ ಆಫ್ ಮಾಡಿ ಸಿನಿಮಾ ನೋಡಿದ್ದೇವು. ಅದರಲ್ಲೂ ಸೂರ್ಯವಂಶಿ ಯಾಕೆ ಆಡಲಿಲ್ಲ ಎಂದುನನ್ನ ವಿರುದ್ಧ ಪತ್ನಿ ಕಿರುಚಾಡಿದ್ದರು. ಅಲ್ಲದೇ, ಸರಣಿ ಶೇಷ್ಠ ಪ್ರಶಸ್ತಿ ಆಟಗಾರರನ್ನು ಮುಂದಿನ ಪಂದ್ಯದಿಂದ ನೀವು ಕೈಬಿಡುತ್ತೀರಿ ಎಂದರೆ ಏನರ್ಥ ಎಂದು ವಾದವನ್ನು ಶುರು ಮಾಡಿದ್ದಳು ಎಂದು ಅವರು ತಿಳಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಕೂಡ ಆಗಿರುವ ಶ್ರೀಕಾಂತ್, ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಸತತವಾಗಿ ಅವಕಾಶಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಅಲ್ಲದೇ ಇದು ಒರ್ವ ಯುವ ಆಟಗಾರರನ್ನು ನಡೆಸಿಕೊಳ್ಳುವ ಉತ್ತಮ ವಿಧಾನ ಅಲ್ಲ ಅಂತಲೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿ ಆತ ಉತ್ತಮ ಪ್ರದರ್ಶನ ನೀಡದಿದ್ದರೆ ಮತ್ತೆ ಆತನನ್ನು ಡ್ರಾಫ್ಟ್ ಮಾಡ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಶೀಯ ಕ್ರಿಕೆಟ್, ಭಾರತದ ಎ ತಂಡ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸೂರ್ಯವಂಶಿ ಅವರು ನೀಡಿರುವ ಪ್ರದರ್ಶನಗಳನ್ನು ಉಲ್ಲೇಖಿಸಿರುವ ಶ್ರೀಕಾಂತ್, ಐಪಿಎಲ್ ಸೇರಿದಂತೆ ಸೂರ್ಯವಂಶಿ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮ ರನ್ ಗಳಿಸಿದ್ದಾರೆ. ನೀವು ಈ ರೀತಿ ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುತ್ತಿದ್ದರೆ, ಆಟಗಾರರಿಗೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಅಲ್ಲದೇ ಇದು ತಪ್ಪು ಸಂದೇಶವನ್ನ ನೀಡುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಅವರ ಬಗ್ಗೆ ಮಾತನಾಡಿರುವ ಶ್ರೀಕಾಂತ್, ಪದೇ ಪದೇ ಸಂಜು ಅವರನ್ನು ತಂಡದಿಂದ ಡ್ರಾಫ್ ಮಾಡುವುದು ಮತ್ತೆ ಒಂದೆರಡು ಪಂದ್ಯಗಳಿಗೆ ಅವಕಾಶ ನೀಡುವ ಮ್ಯಾನೇಜ್‌ಮೆಂಟ್ ನಡೆಯನ್ನು ಟೀಕಿಸಿದ್ದಾರೆ. ಸಂಜು 2026ರ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆದರೆ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಅವರನ್ನು ಕೈಬಿಟ್ಟು, ಸೂರ್ಯವಂಶಿಗೆ ಸ್ಥಾನ ನೀಡಲಾಯ್ತು. ಈ ಇಬ್ಬರು ಆಟಗಾರರೊಂದಿಗೆ ಕೋಚ್ ಗಂಭೀರ್ ಸೇರಿದಂತೆ ಮ್ಯಾನೇಜ್ಮೆಂಟ್ ಈ ರೀತಿ ನಡೆದುಕೊಳ್ಳುವ ಬದಲು ಒಂದು ಸ್ಪಷ್ಟ ಯೋಜನೆಯನ್ನು ರೂಪಿಸಬೇಕು. ಆಡಳಿತ ಮಂಡಳಿ ಗಂಭೀರ್ ಅವರ ವೃತ್ತಿಜೀವನದೊಂದಿಗೆ ಆಟವಾಡುತ್ತಿದೆ. ಈ ವಿಚಾರದಲ್ಲಿ ವಿಷಾದವಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ಉಳಿದಂತೆ ಇಂದು ಟೀಂ ಇಂಡಿಯಾ ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಎರಡನೇ ಟಿ20 ಪಂದ್ಯವನ್ನು ಆಡಲಿದೆ. ಸಂಜೆ 7:30 ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೊದಲ ಟಿ20 ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದ ಸಂಜು ಸ್ಯಾಮ್ಸನ್ ಕೇವಲ 10 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇದರೊಂದಿಗೆ ಎರಡನೇ ಪಂದ್ಯಕ್ಕೆ ಅವಕಾಶ ನೀಡಲಾಗುತ್ತಾ? ಅಥವಾ ವೈಭವ್ ಅವರಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡುತ್ತಾ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.