
ಸಿನಿಮಾ ಶೈಲಿಯಲ್ಲಿ ಸಮಾಜಕ್ಕೆ ಪಾಠ: ಹೀರೊ ಯಾರು? ವಿಲನ್ ಯಾರು? ಯೋಗಿಜೀ ಕೊಟ್ಟ ಬಿಗ್ 'ಟ್ವಿಸ್ಟ್'!
ಬೆಳ್ಳಿತೆರೆಯ ಮೇಲೆ ಒಬ್ಬ ಡಕಾಯಿತ ಮಾಸ್ ಎಂಟ್ರಿ ಕೊಡುತ್ತಾನೆ, ಸಿಗರೇಟ್ ಸ್ಟೈಲ್ ಆಗಿ ಹಚ್ಚುತ್ತಾನೆ, ಕಾನೂನು ಮುರಿದು ಮೆರೆಯುತ್ತಾನೆ... ಅಷ್ಟರಲ್ಲಿ ಥಿಯೇಟರ್‌ನಲ್ಲಿ ಸೀಟಿಗಳ ಸುರಿಮಳೆ! ಆದರೆ, ಈ "ರೀಲ್" ಲೈಫಿನ ವಿಲನ್ ಅಟ್ಟಹಾಸಕ್ಕೆ "ರಿಯಲ್" ಲೈಫಿನ ಬುಲ್ಡೋಜರ್ ಬಾಬಾ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಬ್ರೇಕ್ ಹಾಕ್ಬೇಕು ಎಂದಿದ್ದಾರೆ.
ಹೌದು, ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಚಕ್ರವರ್ತಿ ವಿಕ್ರಮಾದಿತ್ಯನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಚಿತ್ರರಂಗದ ವಿರುದ್ಧ ತಮ್ಮ ಗಟ್ಟಿ ಧ್ವನಿಯಲ್ಲಿ ಒಂದು 'ಪವರ್‌ಫುಲ್ ಡೈಲಾಗ್' ಹೊಡೆದಿದ್ದಾರೆ. ಅವರ ಆ ತೀಕ್ಷ್ಣ ಮಾತುಗಳು ಈಗ ಗಾಂಧಿನಗರದಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸಿವೆ.
ಯೋಗಿಜೀ ಅವರ ಪ್ರಕಾರ, ಇಂದಿನ ಸಿನೆಮಾಗಳು ಯುವ ಪೀಳಿಗೆಯ ದಾರಿಯನ್ನು ತಪ್ಪಿಸುತ್ತಿವೆ. "ಒಂದು ಕಾಲದಲ್ಲಿ ಉದಾತ್ತ ವ್ಯಕ್ತಿಗಳನ್ನು ನಾಯಕರಂತೆ ತೋರಿಸಲಾಗುತ್ತಿತ್ತು, ಕೆಟ್ಟವರನ್ನು ಸಮಾಜಘಾತುಕರನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕಟುಕರು, ಡಕಾಯಿತರು ಮತ್ತು ಅಪರಾಧಿಗಳನ್ನು 'ಹೀರೊ'ಗಳಂತೆ ಬಿಂಬಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆ ಹಾಳಾಗುತ್ತಿದೆ," ಎಂದು ಅವರು ನೇರವಾಗಿ ಗುಡುಗಿದ್ದಾರೆ. ಸಿನೆಮಾ ನೋಡಿ ಯುವಕರು ಡಕಾಯಿತರನ್ನೇ ರೋಲ್ ಮಾಡೆಲ್ ಅಂದುಕೊಂಡರೆ ದೇಶದ ಭವಿಷ್ಯ ಏನಾಗಬೇಡ? ಎಂಬ ಕಳಕಳಿ ಅವರ ಮಾತುಗಳಲ್ಲಿತ್ತು.
ಕೇವಲ ಮನರಂಜನೆಯಲ್ಲ, ಇದು ಸಂಸ್ಕಾರದ ವಿಷಯ:
ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಕೂಡ ಸಾಕ್ಷಿಯಾಗಿದ್ದರು. ಸಿನೆಮಾ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಯೋಗಿಜೀ ಕೊಟ್ಟ ಸಲಹೆ ಹೀಗಿದೆ: "ಸೃಜನಶೀಲತೆ ಎನ್ನುವುದು ಸಮಾಜದ ಮೌಲ್ಯಗಳನ್ನು ಬಲಿಕೊಡುವಂತಿರಬಾರದು. ಸಿನಿಮಾ ಅಂದರೆ ಕೇವಲ ಮೂರು ಗಂಟೆಯ ಮನರಂಜನೆಯಲ್ಲ, ಅದು ಸಮಾಜದ ಕನ್ನಡಿ. ರಾಷ್ಟ್ರಭಕ್ತಿ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಥೆಗಳಿಗೆ ನೀವು ಜೀವ ತುಂಬಬೇಕು."
ಇತ್ತೀಚಿನ ಸಿನೆಮಾಗಳಲ್ಲಿ 'ಕೆಟ್ಟದ್ದೇ ಸರಿ' (Bad is Good) ಎಂಬ ಟ್ರೆಂಡ್ ಜೋರಾಗಿದೆ. ಹಿಂಸೆ ಮತ್ತು ಅಪರಾಧವನ್ನು ಗ್ಲೋರಿಫೈ ಮಾಡುವುದರಿಂದ ಜನರಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಕಿಚ್ಚೇ ಆರಿಹೋಗುತ್ತಿದೆ ಎಂದು ಯೋಗಿಜೀ ಆತಂಕ ವ್ಯಕ್ತಪಡಿಸಿದ್ದಾರೆ. "ನೆನಪಿಡಿ, ಸಮಾಜಕ್ಕೆ ಸ್ಪೂರ್ತಿ ನೀಡುವಂತಿರಲಿ ನಿಮ್ಮ ಕಲೆ. ಸಮಾಜವನ್ನು ಸುಡುವ ಕಿಚ್ಚಾಗದಿರಲಿ," ಎಂದು ಎಚ್ಚರಿಸಿದ್ದಾರೆ.
ಬಾಕ್ಸ್ ಆಫೀಸ್ ವರ್ಸಸ್ ವ್ಯಾಲ್ಯೂಸ್:
ಒಟ್ಟಿನಲ್ಲಿ, ಯೋಗಿ ಆದಿತ್ಯನಾಥ್ ಅವರು ಸಿನೆಮಾ ಮಂದಿಗೆ ದೊಡ್ಡ ಸವಾಲನ್ನೇ ಹಾಕಿದ್ದಾರೆ. ಕೇವಲ ಹಣ ಗಳಿಸುವ 'ಮಸಾಲಾ' ಸಿನಿಮಾಗಳ ಬದಲು, ಮಣ್ಣಿನ ಸಂಸ್ಕೃತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಸಾರುವ 'ಕ್ಲಾಸಿಕ್' ಸಿನಿಮಾಗಳನ್ನು ಮಾಡಿ ತೋರಿಸಿ ಎಂಬುದು ಅವರ ಆಶಯ.
ಈಗ ಸಿನೆಮಾ ಮಂದಿ ಯೋಗಿಜೀ ಅವರ ಈ 'ಸ್ಕ್ರಿಪ್ಟ್' ಅನ್ನು ಫಾಲೋ ಮಾಡುತ್ತಾರಾ ಅಥವಾ ಹಳೇ ದಾರಿಯಲ್ಲೇ ಸಾಗುತ್ತಾರಾ? ಕಾದು ನೋಡಬೇಕು. ಆದರೆ ಒಂದು ಮಾತು ಮಾತ್ರ ನಿಜ, ಹೀರೊ ಅಂದರೆ ಅನ್ಯಾಯ ಮಾಡುವವನಲ್ಲ, ಅನ್ಯಾಯವನ್ನು ಮೆಟ್ಟಿನಿಲ್ಲುವವನು ಎಂಬ ದೊಡ್ಡ ಸತ್ಯವನ್ನಂತೂ ಅವರು ಸಾಬೀತುಪಡಿಸಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.