
ಸದ್ಯ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮಿಂಚುತ್ತಿದ್ದಾರೆ. ರಾಮಾಯಣ ಸಿನಿಮಾನದಲ್ಲಿ ರಾವಣನ ಪಾತ್ರ ಮಾಡ್ತಿರುವ ಯಶ್, ಸಿನಿಮಾ ರಿಲೀಸ್ ಗೆ ಮುನ್ನವೇ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಈಗ ತಮ್ಮ ವಿಭಿನ್ನ ಸ್ಟೈಲ್ನಿಂದಲೇ ಸದ್ದು ಮಾಡಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ಗೆ ಯಶ್ ಹಾಜರಾಗಿದ್ದರು. ಈ ವೇಳೆ ಅವರು ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್, ಕಪ್ಪು ಕನ್ನಡಕ ಮತ್ತು ಚಿನ್ನದ ಬ್ರೋಚ್ ಎಲ್ಲರ ಗಮನ ಸೆಳೆದಿವೆ. ಅದರಲ್ಲೂ ಬ್ರೋಚ್ನಲ್ಲಿ ರಾವಣನ 9 ತಲೆಗಳ ವಿನ್ಯಾಸವಿದ್ದು, ಇದು ಅವರ ಲುಕ್ಗೆ ವಿಶೇಷ ಮೆರುಗು ನೀಡಿದೆ.
2026ರ ಅಕ್ಟೋಬರ್ 27ರಂದು ಲಾಸ್ ಏಂಜಲೀಸ್ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ನಲ್ಲಿ ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಯಶ್ ಸಂಪೂರ್ಣ ಕಪ್ಪು ಬಣ್ಣದ ಉಡುಗೆಯಲ್ಲಿ ಆಗಮಿಸಿದ್ದರು. ಕಪ್ಪು ಕನ್ನಡಕದ ಜೊತೆಗೆ ಧರಿಸಿದ್ದ ಚಿನ್ನದ ಬ್ರೋಚ್ ಅವರ ಲುಕ್ನ ಪ್ರಮುಖ ಆಕರ್ಷಣೆಯಾಗಿತ್ತು. ಈ ಬ್ರೋಚ್ನಲ್ಲಿ ರಾವಣನ 9 ತಲೆಗಳನ್ನು ಬಿಂಬಿಸುವ ವಿನ್ಯಾಸವಿತ್ತು. ಇದು ಕೇವಲ ಫ್ಯಾಷನ್ ಆಕ್ಸೆಸರಿಯಷ್ಟೇ ಆಗಿರದೆ, ಸಿನಿಮಾದಲ್ಲಿ ಅವರು ನಿರ್ವಹಿಸುತ್ತಿರುವ ರಾವಣನ ಪಾತ್ರದೊಂದಿಗೆ ನೇರವಾಗಿ ಸಂಬಂಧ ಹೊಂದಿತ್ತು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಉಡುಗೆ ಮತ್ತು ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಯಶ್ ತಮ್ಮ ಪಾತ್ರದ ಗುರುತನ್ನೇ ಫ್ಯಾಷನ್ನ ಭಾಗವಾಗಿಸಿಕೊಂಡಿದ್ದರು. ಹೀಗಾಗಿ ಅವರ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಗ್ರ್ಯಾಂಡ್ ಎಂಟ್ರಿ!
ಈ ಕಾರ್ಯಕ್ರಮಕ್ಕೆ ಯಶ್ ಒಬ್ಬರೇ ಬಂದಿರಲಿಲ್ಲ. ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಕೂಡ ಜೊತೆಯಲ್ಲಿದ್ದರು. ರಾಧಿಕಾ ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಮಿಂಚಿದ್ದಾರೆ. ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ಜೊತೆಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ಅಭಿಮಾನಿಗಳ ಕೈಕುಲುಕ್ತಾ, ಅವರಿಗೆ ಸೆಲ್ಫಿ ನೀಡ್ತಾ ರಾಧಿಕಾ ಹಾಗೂ ಯಶ್ ತಮ್ಮ ಸರಳತೆ ಮೆರೆದಿದ್ದಾರೆ.
ಕನ್ನಡದಲ್ಲೇ ಮಾತು ಆರಂಭ
ಯಶ್ ತಮ್ಮ ಫ್ಯಾಷನ್ನಿಂದ ಮಾತ್ರವಲ್ಲ, ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಲೂ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಅವರು ತಮ್ಮ ಭಾಷಣವನ್ನು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಆರಂಭಿಸಿದರು.
ರಣಬೀರ್ ಕಪೂರ್, ಸಾಯಿ ಪಲ್ಲವಿ ಕೂಡ ಭಾಗಿ
ಈ ಗ್ರ್ಯಾಂಡ್ ಪ್ರೀಮಿಯರ್ನಲ್ಲಿ ಚಿತ್ರದ ಪ್ರಮುಖ ನಟರಾದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಕೂಡ ಭಾಗವಹಿಸಿದ್ದರು. ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.