ದಿವಂಗತ ನಟ ದ್ವಾರಕೀಶ್‌ಗೆ ಐದು ಮಂದಿ ಗಂಡುಮಕ್ಕಳು. ಕೆಲವರಿಗೆ ಬರೀ ಗಂಡುಮಕ್ಕಳೇ ಆಗೋದೇಕೆ ಎಂಬ ಪ್ರಶ್ನೆಗೆ ಅವರು ತಮ್ಮದೇ ಆದ ಉತ್ತರ ಹೊತ್ತು ತಂದಿದಾರೆ.
ಸಾಮಾನ್ಯವಾಗಿ ಎಲ್ಲ ದಂಪತಿಗೂ ಒಂದು ಗಂಡು ಒಂದು ಹೆಣ್ಣು ಮಗು ಬೇಕೆಂತ ಆಸೆ ಇರುತ್ತದೆ. ಆದರೆ, ಹೆಚ್ಚಿನ ಬಾರಿ ಮೊದಲ ಮಗು ಹೆಣ್ಣಿದ್ದವರಿಗೆ ಹೆಣ್ಣೇ ಆಗುತ್ತದೆ ಮತ್ತು ಗಂಡಿದ್ದವರಿಗೆ ಗಂಡೇ ಆಗುತ್ತದೆ. ಯಾರೂ ತಮ್ಮ ಭಾವನೆಗಳನ್ನು ತೋರಿಸಿಕೊಳ್ಳುವುದಿಲ್ಲವಾದರೂ, ಹೀಗಾದಾಗ ಅಯ್ಯೋ ಇನ್ನೊಂದು ಮಗು ಹೆಣ್ಣಾಗಬಾರದಿತ್ತೇ, ಅಥವಾ ಗಂಡಾಗಬಾರದಿತ್ತೇ ಎಂದು ಪೋಷಕರಾದವರು ಮನಸ್ಸಿನಲ್ಲಿ ಒಮ್ಮೆಯಾದರೂ ಅಂದುಕೊಳ್ಳುತ್ತಾರೆ. ಈ ಯೋಚನೆಯಿಂದ ಅವರ ಮಕ್ಕಳ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲವೆಂಬುದೂ ಅಷ್ಟೇ ಸತ್ಯ. ಆದರೆ, ಮನೆಯಲ್ಲಿ ಆರತಿಗೊಬ್ಬಳು, ಕೀರ್ತಿಗೊಬ್ಬ ಇರಲಿ ಎಂಬ ಆಸೆ ಎಲ್ಲರಿಗೂ ಇರುತ್ತದೆ.
ಆದರೆ, ಕೆಲವರಿಗೆ ಏಕೆ ಬರೀ ಹೆಣ್ಣು ಮಕ್ಕಳಾಗುತ್ತವೆ, ಕೆಲವರಿಗೆ ಕೇವಲ ಗಂಡುಮಕ್ಕಳೇ ಹುಟ್ಟೋದೇಕೆ? ಈ ಪ್ರಶ್ನೆಗೆ ಇಬ್ಬರು ಪತ್ನಿಯರಿಂದ ಸ್ವತಃ ಐದು ಗಂಡುಮಕ್ಕಳ ತಂದೆಯಾಗಿದ್ದ ದ್ವಾರಕೀಶ್ ಒಂದು ಸಮಯದಲ್ಲಿ ಉತ್ತರಿಸಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ದ್ವಾರಕೀಶ್ ಹೇಳುವಂತೆ, 'ಹೆಂಡತಿ ಗಂಡನನ್ನು ಹೆಚ್ಚು ಪ್ರೀತಿಸಿದ್ರೆ ಗಂಡು ಮಕ್ಳಳಾಗುತ್ತಾರೆ. ಗಂಡನೇ ಹೆಚ್ಚು ಹೆಂಡತಿನ್ನ ಪ್ರೀತಿಸಿದ್ರೆ ಹೆಣ್ಣು ಮಕ್ಕಳಾಗ್ತಾರೆ. ನನ್ನ ವಿಷಯದಲ್ಲಿ ಹೆಂಡತೀನೇ ನನ್ನ ಪ್ರೀತಿಸುತ್ತಿದ್ದುದು ಹೆಚ್ಚು. ಹಾಗಾಗೇ ಗಂಡು ಮಕ್ಕಳೇ ಹುಟ್ಟಿದ್ದಾರೆ' ಎಂದಿದ್ದಾರೆ ಕರ್ನಾಟಕದ ಕುಳ್ಳ.
ಇದಕ್ಕೆ ಹಲವು ನೆಟ್ಟಿಗರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇನು ವೈಜ್ಞಾನಿಕವಾಗಿ ಸಾಬೀತಾದ ವಿಚಾರವಲ್ಲವಾದರೂ, ನೆಟ್ಟಿಗರು- ತಮ್ಮದೇ ಆದ ಯೋಚನೆಗಳನ್ನು ಈ ವಿಚಾರವಾಗಿ ಹರಿಬಿಟ್ಟಿದ್ದಾರೆ.
ಒಬ್ಬರು 'ಹಾಗಿದ್ದರೆ ಪತಿ ಪತ್ನಿ ಇಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತಿದ್ದರೂ ಕೆಲವೊಮ್ಮೆ ಮಕ್ಕಳೇ ಆಗುವುದಿಲ್ಲ ಏಕೆ' ಎಂದು ಕೇಳಿದ್ದಾರೆ. ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿ, 'ಮಕ್ಕಳಾದ್ರೆ ಇವರಿಬ್ಬರ ನಡುವಿನ ಪ್ರೀತಿ ಕಡಿಮೆ ಆಗ್ಬೋದು ಅಂತ ಮಕ್ಕಳಿರಲ್ಲ' ಎಂದಿದ್ದಾರೆ.
'ಇದು ತಪ್ಪು ಕಲ್ಪನೆಯಾದ್ರೂ ನನ್ನ ವಿಷಯದಲ್ಲಿ ನಿಜವಾಗಿದೆ' ಎಂದೊಬ್ಬರು ಬರೆದಿದ್ದಾರೆ. ಇನ್ನೂ ಹಲವರು ದ್ವಾರಕೀಶ್ ಮಾತಿಗೆ ಹಾರ್ಟ್ ಹಾಕಿ ತಮ್ಮ ಸಮ್ಮತಿ ಸೂಚಿಸಿದ್ದಾರೆ.