ಶೋಭಿತಾ ಹಾಗೂ ನಾಗಚೈತನ್ಯರ ಇನ್‌ಸ್ಟಾ ಅಕೌಂಟ್‌ಗಳು, ಇವರಿಬ್ಬರ ಸುದ್ದಿಯನ್ನು ಪ್ರಕಟಿಸುವ ಫ್ಯಾನ್ ಪೇಜ್‌ಗಳು ಎಲ್ಲದರಲ್ಲೂ ಈ ಟ್ರೋಲ್‌ಗಳದೇ ಹವಾ. ಕೆಲವು ಟ್ರೋಲ್‌ಗಳು ಈಕೆಯನ್ನು 'ಮನೆಮುರುಕಿ' ಎಂದು ಕರೆದಿವೆ
ನಾಗಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಮದುವೆಯಾಗಿದ್ದಾರೆ. ಈ ಶೋಭಿತಾ ನಟಿ ಹಾಗೂ ಮಾಡೆಲ್. ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಇದೆ, ಇವರಿಬ್ಬರೂ ಬೇರೆಯಾಗಲಿದ್ದಾರೆ ಎಂಬುದು ಸುದ್ದಿಯಾದಾಗಿನಿಂದಲೂ, ಶೋಭಿತಾ ಜೊತೆಗೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾನಂತೆ ಎಂಬುದು ಸುದ್ದಿಯಾಗಿತ್ತು. ಅಂದರೆ ಇವರ ಸ್ನೇಹ ಹೊಸತೇನೂ ಆಗಿರಲಿಲ್ಲ. ಹೀಗಾಗಿಯೇ, ಸಮಂತಾ ಮತ್ತು ನಾಗಚೈತನ್ಯ ಡೈವೋರ್ಸ್ ನಿಕ್ಕಿಯಾದಾಗ, ಅದಕ್ಕೆ ಕಾರಣವೇ ಶೋಭಿತಾ ಎಂಬ ಸುದ್ದಿಯೂ ಹರಡಿತು. ಇದೀಗ ಇಬ್ಬರೂ ಮದುವೆಯೇ ಆಗಿದ್ದಾರೆ. ಈಗಂತೂ ಟ್ರೋಲ್ ಮಾಡುವವರಿಗೆ ಸುಗ್ಗಿ.
ಆದರೆ ಯಾರನ್ನು ಟ್ರೋಲ್ ಮಾಡುತ್ತಾರೆ? ಟ್ರೋಲ್ ಮಾಡುವವರಿಗೆ ಒಬ್ಬರು ಅನ್ಯಾಯಕ್ಕೀಡಾದವರು ಕಾಣಿಸಬೇಕು; ಒಬ್ಬರು ಅನ್ಯಾಯ ಮಾಡಿದವರು ಕಾಣಿಸಬೇಕು. ಅನ್ಯಾಯಕ್ಕೀಡಾದವರು ಎನ್ನಿಸಿಕೊಂಡವರಿಗೆ ಸಿಂಪತಿ ಮಾತಾಡುವ ಭರದಲ್ಲಿ ಅನ್ಯಾಯ ಮಾಡಿದವರು ಎಂದು ಕಾಣಿಸುವವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತೆ. ಈ ಕೇಸಿನಲ್ಲಿ ಶೋಭಿತಾ ಅನ್ಯಾಯಗಾರ್ತಿ. ಯಾಕೆಂದರೆ ಆಕೆಯೇ ಸಮಂತಾ- ನಾಗಚೈತನ್ಯ ದಾಂಪತ್ಯ ಮುರಿದುಹಾಕಿದವಳು! ಸಮಂತಾಳನ್ನು ನಾಗಚೈತನ್ಯನ ಬದುಕಿನಿಂದ ಆಚೆ ಓಡಿಸಿ, ತಾನು ಅವನ ಮನೆಯಲ್ಲಿ ಪ್ರತಿಷ್ಠಾಪಿತ ಆಗಿಬಿಟ್ಟ ಮಾಟಗಾತಿ ಈಕೆ! ಇನ್ನು ಈಕೆ ವಿಲನ್ ಎನ್ನಲು ಬೇರೇನು ಬೇಕು? ಇದೇ ಸಾಕಲ್ಲವೇ? ಟ್ರೋಲ್ ಮಾಡುವವರಿಗೆ ಹಬ್ಬವೋ ಹಬ್ಬ.
ಶೋಭಿತಾ ಹಾಗೂ ನಾಗಚೈತನ್ಯರ ಇನ್‌ಸ್ಟಾ ಅಕೌಂಟ್‌ಗಳು, ಇವರಿಬ್ಬರ ಸುದ್ದಿಯನ್ನು ಪ್ರಕಟಿಸುವ ಫ್ಯಾನ್ ಪೇಜ್‌ಗಳು ಎಲ್ಲದರಲ್ಲೂ ಈ ಟ್ರೋಲ್‌ಗಳದೇ ಹವಾ. ಕೆಲವು ಟ್ರೋಲ್‌ಗಳು ಈಕೆಯನ್ನು 'ಮನೆಮುರುಕಿ' ಎಂದು ಕರೆದಿವೆ. 'ಈಗ ನಿಂಗೆ ಸಮಾಧಾನ ಆಯ್ತಾ?' ಎಂಬುದು ಈ ಟ್ರೋಲ್‌ಗಳ ಕಾಮನ್ ಟೋನು. "ನೀನು ಒಂದು ಮನೆ ಮುರಿದೆ, ಒಂದು ದಾಂಪತ್ಯ ಮುರಿದೆ, ಇಬ್ಬರನ್ನು ಭಗ್ನಗೊಳಿಸಿದೆ'' ಎಂತಾನೆ ಇನ್ನೊಬ್ಬ. "ಶೋಭಿತಾಗಿಂತ ಸಮಂತಾಳೇ ನೂರು ಪಟ್ಟು ಸುಂದರವಾಗಿದ್ದಾಳೆ. ಈ ನಾಗಚೈತನ್ಯಂಗೆ ಏನು ಬಂತು ರೋಗ?" ಎಂದು ಇನ್ನೊಬ್ಬರ ಹಲುಬುವಿಕೆ. "ನೀನು ಎಂಥಾ ವಿವಾಹಿತ ಪುರುಷನನ್ನಾದರೂ ಬುಟ್ಟಿಗೆ ಹಾಕಿಕೊಳ್ಳೋ ಥರ ಕಾಣಿಸ್ತಿದೀಯ" ಎಂದು ಇನ್ನೊಬ್ಬ ಶೋಭಿತಾಳನ್ನು ಟೀಕಿಸುತ್ತಾನೆ.
ಹುಡುಗ - ಹುಡುಗ ಕಿಸ್ ಮಾಡೋದರಲ್ಲಿ ತಪ್ಪೇನಿದೆ? ಆಯುಷ್ಮಾನಾ ಖುರಾನಾ
ಆದರೆ ಯಾರೂ ನಾಗಚೈತನ್ಯನನ್ನು ಟೀಕಿಸಿಯೇ ಇಲ್ಲ! ಟೀಕಿಸಿದ್ದರೂ ಅತೀ ಕಡಿಮೆ ಮಂದಿ. ಅಂದರೆ ಜನ ಮೊದಲು ಹುಳುಕು ಹುಡುಕುವುದೇ ಹೆಣ್ಣಿನಲ್ಲಿ. ಸಮಂತಾ- ನಾಗಚೈತನ್ಯಳ ಮದುವೆ ಮುರಿಯಲು ಶೋಭಿತಾಳೇ ಕಾರಣ ಎಂಬುದು ಇಂಥ ಹೆಚ್ಚಿನವರ ಅನಿಸಿಕೆ. ಯಾಕೆ ನಾಗಚೈತನ್ಯ ಮತ್ತು ಸಮಂತಾ ಪರಸ್ಪರ ಪ್ರೀತಿಯಿಂದಲೇ ಬೇರೆ ಬೇರೆ ಆಗಿರಬಾರದು? ಇದರಲ್ಲಿ ಶೋಭಿತಾ ಪಾಲು ಯಾಕಿರಬೇಕು? ಮದುವೆ ಮುರಿಯಲು ನಾಗಚೈತನ್ಯನೂ ಕಾರಣ ಇರಬಹುದಲ್ಲವೇ? ಇಂಥ ಪ್ರಶ್ನೆಗಳು ಈ ಟ್ರೋಲಿಗರ ಕಣ್ಣಿಗೆ ಬೀಳುವುದೇ ಇಲ್ಲ. ಅವರಿಗೆ ಏನಿದ್ದರೂ ಸುಲಭವಾಗಿ ಸಿಗುವ ಬಲಿಪಶು ಬೇಕು. ಆ ಬಲಿಪಶು ಶೋಭಿತಾ.
ಈಗ ಸಮಂತಾ ಕೂಡ ಬೇರೆಯಾಗಿದ್ದ ತನ್ನ ಬದುಕು ಕಟ್ಟಿಕೊಂಡಿದ್ದಾಳೆ. ಸಮಂತಾ- ನಾಗಚೈತನ್ಯ- ಶೋಭಿತಾರಲ್ಲಿ ಯಾರೂ ಸಣ್ಣ ಮಕ್ಕಳಲ್ಲ, ತಮ್ಮ ಬದುಕಿನ ತೀರ್ಮಾನಗಳನ್ನು ತಾವೇ ಮಾಡಿಕೊಳ್ಳಬಲ್ಲವರು. ಪ್ರತಿಯೊಂದು ದಾಂಪತ್ಯದ ಒಡಕಿನ ಹಿಂದೆಯೀ ಹಲವು ಕಾರಣಗಳಿರುತ್ತವೆ ಮತ್ತು ಅದು ಆ ದಂಪತಿಗಳಿಗೆ ಮಾತ್ರ ಗೊತ್ತಿರಲು ಸಾಧ್ಯ. ಇದು ಈ ಟ್ರೋಲಿಗರಿಗೆ ಅರ್ಥವಾದರೆ ಸಾಕು. ಆದರೂ ಎಲ್ಲರೂ ಹೆಣ್ಣನ್ನೇ ಟಾರ್ಗೆಟ್ ಮಾಡುವುದು ಯಾಕೋ!
ಅಂದಹಾಗೆ 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಶೋಭಿತಾ ಪ್ರಶಸ್ತಿ ಗೆದ್ದದ್ದರು. ಈ ಮೂಲಕ ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅವರು 2016ರಲ್ಲಿ ಹಿಂದಿ ಚಿತ್ರ ರಾಮನ್ ರಾಘವ್ 2.0 ನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಣಿರತ್ನಂ ನಿರ್ದೇಶನದ ಪೊನ್ನಿಯಂ ಸೆಲ್ವನ್ ಚಿತ್ರದಲ್ಲಿ ರಾಜಕುಮಾರಿ ವನತಿ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಅಭಿಮಾನಿಗಳನ್ನು ಆಕರ್ಷಿಸಿದರು.