
ರಣಬೀರ್ ಕಪೂರ್ ಅಭಿನಯದ 'ರಾಮಾಯಣ: ಪಾರ್ಟ್ 1' ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಈ ಸಿನಿಮಾ ಕೇವಲ 18 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 1,693.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪಾರ್ಟ್ 1 ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಪಾರ್ಟ್ 2 ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರತಂಡವು ಈಗಾಗಲೇ 'ರಾಮಾಯಣ: ಪಾರ್ಟ್ 2' ಚಿತ್ರದ ಬಿಡುಗಡೆಯ ದಿನಾಂಕವನ್ನೂ ಒಂದು ವರ್ಷ ಮುಂದೂಡಿದೆ. ಇದರಿಂದಾಗಿ ಅಭಿಮಾನಿಗಳಲ್ಲಿ ಈ ಸಿನಿಮಾ ಮುಂದೂಡಿಕೆಯಾಗಲು ನಿಜವಾದ ಕಾರಣವೇನು ಎಂಬ ಕುತೂಹಲ ಮೂಡಿದೆ. ಚಿತ್ರದ ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದರೂ, ಅಭಿಮಾನಿಗಳು ಸಿನಿಮಾ ನೋಡಲು 2028ರವರೆಗೆ ಕಾಯಬೇಕಾಗಿದೆ. ಹಾಗಾದರೆ ಚಿತ್ರದ ಬಿಡುಗಡೆ ವಿಳಂಬಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.
'ರಾಮಾಯಣ: ಪಾರ್ಟ್ 1' ಚಿತ್ರದ ಛಾಯಾಗ್ರಹಣಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಪಂಕಜ್ ಕುಮಾರ್ ಮತ್ತು ಮಹೇಶ್ ಲಿಮಾಯೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪಂಕಜ್ ಕುಮಾರ್ ಅವರು ಇತ್ತೀಚೆಗೆ 'ವೆರೈಟಿ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಪಾರ್ಟ್ 2 ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾ ವಿಳಂಬವಾಗಲು ಅಸಲಿ ಕಾರಣವೇನು?
ಪಂಕಜ್ ಕುಮಾರ್ ಮಾತನಾಡಿ, ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗದ ದೃಶ್ಯ ವೈಭವ ಇನ್ನಷ್ಟು ದೊಡ್ಡದಾಗಿರಲಿದೆ. ಅಷ್ಟೇ ಅಲ್ಲದೆ, ಪಾರ್ಟ್ 1ಕ್ಕಿಂತ ಪಾರ್ಟ್ 2ರಲ್ಲಿ ಹೆಚ್ಚು ಫೈಟ್ ಸೀಕ್ವೆನ್ಸ್‌ಗಳು ಇರಲಿವೆಯಂತೆ. ಎರಡನೇ ಭಾಗದ ಬಗ್ಗೆ ಎಲ್ಲರಿಗೂ ಹೆಚ್ಚಿನ ನಿರೀಕ್ಷೆಗಳಿವೆ. ಈ ಸಿನಿಮಾ ಮೊದಲ ಭಾಗಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿ ಮೂಡಿಬರಲಿದೆ. ಹೀಗಾಗಿ ಚಿತ್ರತಂಡವು ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ದೃಶ್ಯಗಳನ್ನು ನೀಡಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿದೆ. ಇದರಿಂದಾಗಿ ಸಿನಿಮಾದ ಪ್ರತಿಯೊಂದು ಸಣ್ಣಪುಟ್ಟ ಅಂಶಗಳ ಮೇಲೂ ಕೆಲಸ ಮಾಡಲು ಚಿತ್ರತಂಡಕ್ಕೆ ಹೆಚ್ಚಿನ ಸಮಯ ಸಿಗಲಿದೆ. ವಿಎಫ್‌ಎಕ್ಸ್ (VFX) ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಕಾರಣದಿಂದಲೇ ಪಾರ್ಟ್ 2 ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಿನಿಮಾ ವಿಳಂಬವಾಗುತ್ತಿರುವುದನ್ನು ನಾನು ಸಕಾರಾತ್ಮಕವಾಗಿ ನೋಡುತ್ತೇನೆ ಎಂದು ಪಂಕಜ್ ಕುಮಾರ್ ಹೇಳಿದ್ದಾರೆ.
ಯಾವಾಗ ಬಿಡುಗಡೆಯಾಗಲಿದೆ 'ರಾಮಾಯಣ: ಪಾರ್ಟ್ 2'?
ಚಿತ್ರತಂಡವು ಈ ಹಿಂದೆ 'ರಾಮಾಯಣ: ಪಾರ್ಟ್ 2' ಚಿತ್ರವನ್ನು 2027ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಪಾರ್ಟ್ 1 ಬಿಡುಗಡೆಯಾದ ಬಳಿಕ ಪಾರ್ಟ್ 2 ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ 'ರಾಮಾಯಣ: ಪಾರ್ಟ್ 2' ಸಿನಿಮಾ 2028ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಇನ್ನೂ ಕೆಲವು ಹೊಸ ಕಲಾವಿದರ ಪ್ರವೇಶವೂ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.