ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭೋಪಾಲ್ ನಗರದ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ. ಭೋಪಾಲಿ ಎಂದರೆ ಸಲಿಂಗಕಾಮಿ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾ ಬಿಡುಗಡೆಯಾದಾಗಿನಿಂದ ಅಗ್ನಿಹೋತ್ರಿ ಹೆಸರು ಚರ್ಚೆಯಲ್ಲಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಮಾಯಿ ಮಾಡಿದೆ. ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿರುವ ಈ ಸಿನಿಮಾ ಇದುವರೆಗೂ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಬಗ್ಗೆ ಈ ಸಿನಿಮಾ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಾದರೂ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಕಾಶ್ಮೀರ್ ಫೈಲ್ಸ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭೋಪಾಲ್(Bhopal) ನಗರದ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ. ಅಗ್ನಿಹೋತ್ರಿ ಬಹಿರಂಗ ಕ್ಷಮೆಕೇಳಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ವಿವೇಕ್ ಅಗ್ನಿಹೋತ್ರಿ ಭೋಪಾಲ್ ಗೆ ತೆರಳಿದ್ದರು. ಆ ಸಮಯದಲ್ಲಿ ಅಗ್ನಿಹೋತ್ರಿ ಅನ್ ಲೈನ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭೋಪಾಲ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಮೂರು ವಾರಗಳ ಹಳೆಯದು ಎಂದು ಹೇಳಲಾಗುತ್ತಿರುವ ಅಗ್ನಿಹೋತ್ರಿ ವಿಡಿಯೋ ಈಗ ಹರಿದಾಡುತ್ತಿದೆ. ಈ ಸಂದರ್ಶನದಲ್ಲಿ ಅಗ್ನಿಹೋತ್ರಿ 'ನಾನು ಭೋಪಾಲ್ ನಲ್ಲಿ ಹುಟ್ಟಿ ಬೆಳೆದಿದ್ದೇನೆ. ಆದರೆ ನಾನು ಭೋಪಾಲಿ ಅಲ್ಲ. ಏಕೆಂದರೆ ಭೋಪಾಲಿ ಎಂದರೆ ವಿಭಿನ್ನವಾದ ಅರ್ಥ ಹೊಂದಿದೆ. ನೀವು ಯಾವುದೇ ಭೋಪಾಲಿಯನ್ನು ಕೇಳಬಹುದು. ನಾನು ಅದನ್ನು ವಿವರಿಸುತ್ತೇನೆ. ಯಾರಾದರು ಅವನು ಭೋಪಾಲಿ ಎಂದು ಹೇಳಿದರೆ ಅವರು ಸಾಮಾನ್ಯವಾದ ಅರ್ಥ ಸಲಿಂಗಕಾಮಿ(Bhopali means Homosexual), ನವಾಬಿ ಎಂದರ್ಥ' ಎಂದು ಅಗ್ನಿಹೋತ್ರಿ ಹೋಳಿದ್ದಾರೆ.
ಅಗ್ನಿಹೋತ್ರಿ ಅವರ ಈ ಹೇಳಿಕೆ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ನಿರ್ದೇಶಕ ಅಗ್ನಿಹೋತ್ರಿ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, 'ಅಗ್ನಿಹೋತ್ರಿ ಅವರೆ, ಇದು ನಿಮ್ಮ ವೈಯಕ್ತಿಕ ಅನುಭವವಾಗಿರಬಹುದು. ಇದು ಸಾಮಾನ್ಯ ಭೋಪಾಲ್ ನಿವಾಸಿಗಳ ಅನುಭವವಲ್ಲ. ನಾನು 1977ರಿಂದ ಭೋಪಾಲ್ ಮತ್ತು ಭೋಪಾಲಿಗಳೊಂದಿಗೆ ಸಂಬಂಧ ಹೊಂದಿದ್ದೇನೆ. ಆದರೆ ನನಗೆ ಆ ಅನುಭವವಾಗಿಲ್ಲ' ಎಂದಿದ್ದಾರೆ.
ಅಗ್ನಿಹೋತ್ರಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದಾರೆ. ಭೋಪಾಲ್ ನೆಟ್ಟಿಗರು ಅಗ್ನಿಹೋತ್ರಿಯನ್ನು ತರಾಟೆ ತೆಗೆದುಕೊಂಡರು. ಇದು ನಿಜಕ್ಕೂ ಕೆಟ್ಟ ಅಭಿರುಚಿ ಎಂದು ಅಗ್ನಿಹೋತ್ರಿ ವಿರುದ್ಧ ಹರಿಹಾಯ್ದರು. ಅಗ್ನಿಹೋತ್ರಿ ಅವರು ಭೋಪಾಲ್ ಜನರನ್ನು ಸಲಿಂಗಕಾಮಿ ಎಂದು ಕರೆದು ಅಪರಾಧ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೇಸ್ ಉಪಾಧ್ಯಕ್ಷ ಭೂಪೇಂದ್ರ ಗುಪ್ತಾ ಪ್ರತಿಕ್ರಿಯೆ ನೀಡಿ 'ಅಗ್ನಿಹೋತ್ರಿಯವರ ಹೇಳಿಕೆ ಭೋಪಾಲ್ ನ 25 ಲಕ್ಷ ನಿವಾಸಿಗಳಿಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಗ್ನಿಹೋತ್ರಿ ಕ್ಷಮೆಯಾಚಿಸುವ ವರೆಗೂ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು' ಎಂದು ಒತ್ತಾಯಿಸಿದ್ದಾರೆ.