ಜಾಹೀರಾತು ಹಾಗೂ ಸಿನಿಮಾಗಳು ಮಕ್ಕಳ ಮನಸ್ಸಿನ ಮೇಲೆ ಅದೆಷ್ಟು ಕೆಟ್ಟ ಪರಿಣಾಮ ಬೀರುತ್ತಿವೆ ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿಯಾಗಿದೆ ನೋಡಿ...
ಬಹುತೇಕ ವಿಷಕಾರಿ ಪದಾರ್ಥಗಳ ಜಾಹೀರಾತಿನಲ್ಲಿ ದೊಡ್ಡ ದೊಡ್ಡ ಚಿತ್ರತಾರೆಯರು, ಕ್ರಿಕೆಟಿಗರು ಸೇರಿದಂತೆ ಕೆಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಮಾಮೂಲಾಗಿದೆ. ತಾವು ತೋರಿಸುವ ಜಾಹೀರಾತಿನ ಪದಾರ್ಥಗಳನ್ನು ಜನ್ಮದಲ್ಲಿ ಒಂದೇ ಒಂದು ಬಾರಿ ಸೇವಿಸದಿದ್ದರೂ ಕೋಟಿ ಕೋಟಿ ಹಣದ ಆಸೆಗೆ ಬಿದ್ದು ಅದರಲ್ಲಿ ರಾಯಭಾರಿಯಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜನರ ಹಾದಿ ತಪ್ಪಿಸುವ ಜಾಹೀರಾತುಗಳಿಗೇನೂ ಕೊರತೆ ಇಲ್ಲ. ಅದರಲ್ಲಿಯೂ ಪ್ರಾಣಕ್ಕೆ ಕುತ್ತು ತರುವ, ದೇಹದ ಅಂಗಾಂಗಳಿಗೆ ಶಾಶ್ವತ ನಷ್ಟ ಉಂಟು ಮಾಡುವ ಜಾಹೀರಾತುಗಳಿಗೆ ಕಡಿವಾಣವೂ ಬಿದ್ದಿಲ್ಲ. ಒಂದಷ್ಟು ತಿಂಗಳು ಕೋರ್ಟ್ ಇಲ್ಲವೇ ಸರ್ಕಾರ ಇದನ್ನು ಬ್ಯಾನ್ ಮಾಡಿದರೆ, ಮತ್ತೆ ಜಾಹೀರಾತುಗಳು ಮುಂದುವರೆಯುತ್ತವೆ.
ಅದೇ ಇನ್ನೊಂದೆಡೆ, ಸಿನಿ ತಾರೆಯರನ್ನೇ ದೇವರು ಎಂದು ನಂಬಿರೋರು ಅದೆಷ್ಟೋ ಮಂದಿ. ಅವರ ಹೇರ್ಸ್ಟೈಲ್, ಜೀವನ ಕ್ರಮ, ಅವರ ಉಡುಗೆ-ತೊಡಗೆ ಹೀಗೆ ಚಿತ್ರ ನಟ-ನಟಿಯರನ್ನೇ ಅನುಸರಿಸುವುದು ಎಂದರೆ ಇಂದಿನ ಯುವ ಪೀಳಿಗೆಗೆ ಸಿಕ್ಕಾಪಟ್ಟೆ ಇಷ್ಟ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಯುವಕರನ್ನು ಪೊಲೀಸರು ಪ್ರಶ್ನಿಸಿದಾಗ, ನಾನು ಆ ಚಿತ್ರದ ಆ ನಟನನ್ನು ಅನುಸರಿಸಿದೆ ಎಂದು ಹೇಳುವುದು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿಯಾಗಿ ಇಂದು ನಾಯಕನ ಕೈಯಲ್ಲಿ ಲಾಂಗು, ಮಚ್ಚು ಕೊಡಿಸಿ ಕೊಲೆ, ರಕ್ತಪಾತ ಮಾಡಿಸುವುದು ಮಾಮೂಲಾಗಿಬಿಟ್ಟಿದೆ. ಒಂದು ಅಂಥ ಚಿತ್ರ ಹಿಟ್ ಆಗುತ್ತಿದ್ದಂತೆಯೇ ಮತ್ತೋರ್ವ ನಾಯಕನಿಂದಲೂ ನಿರ್ದೇಶಕರು ಅದೇ ರೀತಿ ಮಾಡಿಸುವುದು ಹೊಸ ವಿಷಯವೇನಲ್ಲ. ಒಂದು ಭಾಷೆಯಲ್ಲಿ ಒಂದು ಕಥೆ ಹಿಟ್ ಆದರೆ, ಇನ್ನೊಂದು ಭಾಷೆಯಲ್ಲಿ ಅದೇ ಕಥೆಯಲ್ಲಿ ಅತ್ತಿತ್ತ ಮಾಡಿ, ಕೊಲೆ-ರಕ್ತಪಾತ ಮಾಡುತ್ತಿರುವ ಅದೆಷ್ಟು ಚಿತ್ರಗಳನ್ನು ನಾವು ನೋಡುತ್ತಿಲ್ಲ! ಚಿತ್ರದಲ್ಲಿ ಕೊನೆಯಲ್ಲಿ ನಾಯಕನಿಗೆ ಜಯವಾಗುತ್ತದೆ, ಆದರೆ ನಿಜ ಜೀವನದಲ್ಲಿ ಹಾಗಲ್ಲವಲ್ಲ?
ಗುಟ್ಕಾದಿಂದ ಹಾದಿ ತಪ್ಪಿಸಲಾರೆನೆಂದ ಅಕ್ಷಯ್ ಔಟ್: ಶಾರುಖ್, ಅಜಯ್ ಡೋಂಟ್ ಕೇರ್- ಟೈಗರ್ ಎಂಟ್ರಿ!
ಈಗ ಸ್ಟಾರ್ ನಟರು ಇಂಥ ಕೃತ್ಯ ಎಸಗಿದಾಗ, ಅದು ಯುವ ಪೀಳಿಗೆ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ. ಸತ್ಯ-ನ್ಯಾಯ-ಪ್ರೀತಿ ಹೆಸರಿನ ಫೇಸ್ಬುಕ್ ಪೇಜ್ನಿಂದ ವೈರಲ್ ಆಗುತ್ತಿರುವ ಈ ವಿಡಿಯೋನೇ ಸಾಕ್ಷಿಯಾಗಿದೆ. ಇಲ್ಲಿ ಚಿಕ್ಕ ಮಕ್ಕಳು ಗುಟಕಾ ತಿನ್ನುತ್ತಿದ್ದಾರೆ. ಇದು ಒಳ್ಳೆಯದಲ್ಲ. ಅನಾರೋಗ್ಯಕರ, ಸಾಯುತ್ತೀರಿ ಎಂದು ಪತ್ರಕರ್ತ ಹೇಳಿದಾಗ ಮಕ್ಕಳು ಶಾರುಖ್ ಖಾನ್ ಸಾಯಲ್ವಾ? ನಾವು ಮಾತ್ರ ಸಾಯ್ತೇವಾ ಎಂದು ಪ್ರಶ್ನಿಸಿದ್ದಾರೆ. ಶಾರುಖ್ ಖಾನ್ ಯಾಕೆ ಸಾಯ್ತಾರೆ ಎಂದು ಪ್ರಶ್ನಿಸಿದಾಗ, ಅವರೂ ಗುಟ್ಕಾ ತಿಂತಾರಲ್ವಾ ಎಂದು ಬಾಲಕ ಪ್ರಶ್ನಿಸಿದ್ದಾನೆ! ಅಷ್ಟಕ್ಕೂ ಇದೊಂದು ವಿವಾದಾತ್ಮಕ ಗುಟಕಾ ಜಾಹೀರಾತು. ಹಿಂದೊಮ್ಮೆ ಬ್ಯಾನ್ ಆಗಿದ್ರೂ ಮತ್ತೆ ಜಾಹೀರಾತು ತೋರಿಸಲು ದುರದೃಷ್ಟವಶಾತ್ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯುವ ಜನತೆ ನಟರನ್ನು ಫಾಲೋ ಮಾಡಿ ಯಾವ ರೀತಿಯ ತಪ್ಪು ಹಾದಿ ಹಿಡಿಯುತ್ತಿದ್ದಾರೆ ಎಂದು ಇದರಲ್ಲಿ ನೋಡಬಹುದು.
ಅಷ್ಟಕ್ಕೂ, ಕೆಲ ತಿಂಗಳಿನಿಂದ ಅಕ್ಷಯ್ ಕುಮಾರ್ ಅವರ ವಿಮಲ್ ಪಾನ್ ಮಸಾಲಾ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿತ್ತು. ಈ ಜಾಹೀರಾತಿನಲ್ಲಿ ಇದರಿಂದ ಅಕ್ಷಯ್ ಕುಮಾರ್ ಸಕತ್ ಟ್ರೋಲ್ ಕೂಡ ಆಗಿದ್ದರು. ಈ ಜಾಹೀರಾತಿನಲ್ಲಿ ಬಾಲಿವುಡ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಹಾಗೂ ಅಜಯ್ ದೇವಗನ್ ಕೂಡ ಇದ್ದಾರೆ. ಈ ಮೂವರ ಜೋಡಿ ವಿಮಲ್ ಪಾನ್ ಮಸಾಲಾ ಜಾಹೀರಾತು ಮಾಡುತ್ತಾ ಬಂದಿದ್ದು ಬಹಳ ವರ್ಷಗಳೇ ಕಳೆದಿವೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು. ಇದನ್ನು ಮನಗಂಡು ಅಕ್ಷಯ್ ಕುಮಾರ್, ಗುಟ್ಕಾ ಜಾಹೀರಾತಿನಿಂದ ಹಿಂದಕ್ಕೆ ಸರಿದಿದ್ದಾರೆ. ಅವರ ಜಾಗದಲ್ಲಿ ಟೈಗರ್ಶ್ರಾಫ್ ಬಂದಿದ್ದಾರೆ. ಇದೀಗ ಈ ಮಕ್ಕಳು ಶಾರುಖ್ ಖಾನ್ ಹೆಸರು ಹೇಳುತ್ತಿರುವುದು ನೋಡಿದರೆ ಅದ್ಯಾವ ರೀತಿಯಲ್ಲಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್ ಹೇಳಿದ ರಣವೀರ್ ಸಿಂಗ್