ಒಂದು ಅನ್ ಟೋಲ್ಡ್ ಡೆತ್ ಸ್ಟೋರಿ ಜೀವನ, ಅವಕಾಶ, ರೈಲು ಮತ್ತು ಸುಶಾಂತ್ ಸಿಂಗ್

By Suvarna News  |  First Published Jun 15, 2020, 5:16 PM IST

 ಚಲಿಸುವ ರೈಲು ಬದುಕಿನ ಸಂಕೇತ. ಅಂತ ರೈಲನ್ನೇರಿ ಧೋನಿ ತಾನು ಮಾಡುತ್ತಿದ್ದ ರೈಲ್ವೆ ಉದ್ಯೋಗಕ್ಕೆ ಗುಡ್ ಬೈ ಹೇಳುತ್ತಾನೆ. ಹೊಸ ಬದುಕನ್ನು ಕಟ್ಟಿ ಕೊಳ್ಳುತ್ತಾನೆ. ಅಂಥ ಸಾಧಕನ ಕಥೆ ಎಂಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ. ಬದುಕವನ್ನು ಪೂರ್ಣವಾಗಿ ಬದುಕುವುದು ಹೇಗೆ ಎಂದು ಹೇಳುವ ಚಿತ್ರಗಳಲ್ಲಿಯೇ ನಟಿಸಿದ್ದವರು ಸುಶಾಂತ್ ಸಿಂಗ್. ಆದರೆ...?
 


ಆರ್. ಕೇಶವಮೂರ್ತಿ 

ತೆರೆ ಮೇಲೆ ಬದುಕಿನ ಪಾಠ ಹೇಳಿದವನು, ಜೀವನ ಎಷ್ಟು ಖುಷಿಯಾಗಿರುತ್ತದೆ ಎಂದು ಅರ್ಥ ಮಾಡಿಸಲು ಕೊನೆಯವರೆಗೂ ಸಾಹಸ ಪಟ್ಟ, ಸಾವು ಪರಿಹಾರ ಅಲ್ಲ, ಆತ್ಮಹತ್ಯೆಯೇ ಎಲ್ಲ ಸಮಸ್ಯೆಗಳಿಗೂ ಉತ್ತರವಲ್ಲ...

Tap to resize

Latest Videos

ಸಿನಿ ಜಗತ್ತಿನ ಅತ್ಯಂತ ಸುರಸುಂದರಾಂಗ, ಅದ್ಭುತ ಯುವ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎನ್ನುವ ಶೋಕದ ಮಾತುಗಳ ನಡುವೆ ಈ ಮೇಲಿನ ಸಾಲುಗಳು ಹೊಳೆಯುತ್ತವೆ. ಯಾಕೆಂದರೆ ತೆರೆ ಮೇಲೆ ಸುಶಾಂತ್ ಸಿಂಗ್ ರಜಪೂತ್ ಮಾಡಿದ ಪಾತ್ರಗಳೇ ಅಂತವು. 

ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಜೀವನ ಪುಟಗಳಿಗೆ ತೆರೆ ಮೇಲೆ ಜೀವ ತುಂಬಿದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಅವರೇ ಎಂಬುದನ್ನು ಭೇಷರತ್ತಾಗಿ ಎಲ್ಲರು ಒಪ್ಪುವ ಮಾತು. ಧೋನಿ ಅನ್ ಟೋಲ್ಡ್ ಸಿನಿಮಾ ನೋಡಿರುತ್ತೀರಿ. ರೈಲ್ವೆಯಲ್ಲಿ ಟಿಟಿ ಕೆಲಸ ಮಾಡಿಕೊಂಡಿದ್ದ ಧೋನಿಗೆ ಬ್ಯಾಟು, ಬಾಲು, ಮೈದಾನವೇ ಕಾಡುತ್ತದೆ. ಕ್ರಿಕೆಟ್ ತನ್ನ ಜಗತ್ತು, ಆ ರೈಲ್ವೆ ಉದ್ಯೋಗ ತನ್ನದಲ್ಲ ಎನ್ನುವ ಸತ್ಯ ಆತನಿಗೆ ಗೊತ್ತು. 

ಕಲಾವಿದರ ಸಿನಿಮಾಗಳು ಆದರ್ಶವೇ ಹೊರತು, ಅವರ ವೈಯಕ್ತಿಕ ಬದುಕಲ್ಲ: ದುನಿಯಾ ವಿಜಿ

 ಹೀಗೆ ಚಿಂತೆಯಲ್ಲಿರುವಾಗ ತನ್ನ ಕಣ್ಣಲತೆಯ ದೂರದಲ್ಲೇ ರೈಲು ಬರುತ್ತಿದೆ, ಅದೇ ರೈಲ್ವೆ ಪ್ಲಾಟ್ ಫಾರಂ ನ ಬೆಂಚಿನ ಮೇಲೆ ಧೋನಿ ಕೂತಿದ್ದಾನೆ. ರೈಲು ಬರುತ್ತಿದೆ, ತನ್ನ ಬದುಕಿನ ದಾರಿಯನ್ನು ನಿರ್ಧರಿಸಿಕೊಳ್ಳುವ ಕೊನೆಯ ರೈಲು ಅದು. ಇನ್ನೇನು ರೈಲು ತಾನು ಕೂತ ಜಾಗದಿಂದ ಕೊಂಚ ಮುಂದಕ್ಕೆ ಹೋಗುತ್ತಿದ್ದಂತೆಯೇ ಕೈಯಲ್ಲಿರುವ ಕಪ್ಪು ಕೋಟಿನ ಸಮೇತ ಧೋನಿ ಆ ರೈಲು ಹತ್ತಿಕೊಳ್ಳುತ್ತಾನೆ. ರೈಲ್ವೆ ಉದ್ಯೋಗಕ್ಕೆ ಹಾಗೆ ಕೊನೆಯದಾಗಿ ಟಾಟಾ ಮಾಡಿ ಹೋದ ಧೋನಿ, ಮತ್ತೆ ನಮಗೆಲ್ಲ ಎದುರಾಗುವುದು ಕ್ರಿಕೆಟ್ ಜಗತ್ತಿನ ಹೀರೋ ಆಗಿ. 

ಬದುಕಿನ ಗುರಿಯಾಗಿ ರೈಲು...
ಈ ದೃಶ್ಯದಲ್ಲಿ ರೈಲ್ವೆ ಪ್ಲಾಟ್ ಫಾರಂನ ಆ ಬೆಂಚು ನಮ್ಮದಲ್ಲದ ಉದ್ಯೋಗದ ಸಂಕೇತವಾದರೆ, ಅದರ ಮುಂದೆಯೇ ಹಾದು ಹೋಗುತ್ತಿರುವ ರೈಲು ನಮ್ಮದೇ ಬದುಕಿನ ಗುರಿಯತ್ತ ತೆಗೆದುಕೊಂಡು ಹೋಗುವ ಒಂದು ಅದ್ಭುತ ಜೀವನ ಅವಕಾಶ. ಈ ಎರಡರ ನಡುವೆ ನಾವು ನಿಂತಿರುತ್ತೇವೆ ಎಂದುಕೊಂಡರೆ ಇದು ಧೋನಿ ಸಿನಿಮಾದ ಕೇವಲ ಒಂದು ದೃಶ್ಯವಾಗಿ ಮಾತ್ರ ಬಂದು ಹೋಗಲ್ಲ. ಅದು ಪ್ರತಿಯೊಬ್ಬರ ಜೀವನದಲ್ಲೂ ಇಂಥದ್ದೊಂದು ಅವಕಾಶ ರೈಲಿನ ರೂಪದಲ್ಲಿ ಬರುತ್ತಲೇ ಇರುತ್ತದೆ. ಆದರೆ, ಆ ರೈಲು ಹತ್ತಬೇಕಾ, ಬೇಡವಾ ಎಂಬ ನಿರ್ಧಾರ ಮಾತ್ರ ನಮ್ಮ ಕೈಯಲ್ಲಿರುತ್ತದೆ. ಹಾಗೆ ನಿರ್ಧರಿಸಿ, ರೈಲು ಹತ್ತುವ ಮೂಲಕ ಹೊಸ ಜೀವನದ ದಾರಿ ಹುಡುಕುವ ಆ ಕ್ಷಣದಲ್ಲಿ ಮಹೇಂದ್ರ ಸಿಂಗ್ ಧೋನಿ ಹೇಗಿದ್ದರು ಎಂದು ನಾವ್ಯಾರೂ ನೋಡಿರಲಿಲ್ಲ. ಆದರೆ, ಅದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿ, ಆ ನಿರ್ಣಾಯಕ ಘಟ್ಟಕ್ಕೆ ಜೀವ ತುಂಬಿದ್ದು ಮಾತ್ರ ಇನ್ನಿಲ್ಲ ಎನಿಸಿಕೊಂಡ ಇದೇ ಸುಶಾಂತ್ ಸಿಂಗ್ ರಜಪೂತ್. ಆ ಮೂಲಕ ಜೀವನ ಘಟ್ಟವನ್ನು ತೆರೆ ಮೇಲೆ ತೋರಿದ ಈ ನಟ.

ಆತ್ಮಹತ್ಯೆಗೆ ಯತ್ನಿಸುವ ಬಾಲಕನ ತಂದೆಯಾಗಿ....
ಇದು ಮತ್ತೊಂದು ಸಿನಿಮಾ. ಕಳೆದ ವರ್ಷ ತೆರೆಗೆ ಬಂದ ಚಿಚ್ಚೋರೆ ಚಿತ್ರದ್ದು. ಈ ಚಿತ್ರದಲ್ಲಿ ಆತ್ಮಹತ್ಯೆಗೆ ಯತ್ನಿಸುವ ಬಾಲಕನ ತಂದೆ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಅಪ್ಪನ ಪಾತ್ರ. 

ಆತ್ಮಹತ್ಯೆಗೆ ಯತ್ನಿಸಿ ಸಾವು- ಬದುಕಿನ ನಡುವೆ ಐಸಿಯುಗೆ ದಾಖಲಾಗುವ ಮಗನ ಮುಂದೆ ಕೂತು ತನ್ನ ಯೌವ್ವನದ ದಿನಗಳು, ಆಗಿನ ಪ್ರೇಮ ಕತೆಗಳು, ಗೆಳೆತನ, ಜೀವನ ಸಂಭ್ರಮದ ಕ್ಷಣಗಳನ್ನು ಹೇಳುತ್ತ ತನ್ನ ಮಗನನ್ನು ಉಳಿಸಿಕೊಳ್ಳುವ ಸಾಹಸ ಮಾಡುವ ಪಾತ್ರ ಸುಶಾಂತ್ ಸಿಂಗ್ ಅವರದ್ದು. ಈಗಿನ ಕಾಲಕ್ಕೆ ತೀರಾ ಅಗತ್ಯ ಎನಿಸುವ ಈ ಕತೆ ಹಾಗೂ ಚಿತ್ರದಲ್ಲಿನ ಸುಶಾಂತ್ ಸಿಂಗ್ ರಜಪೂತ್ ಅವರ ನಟನೆ ನೋಡಿ ಅಮೀರ್ ಖಾನ್ ಅವರೇ ಭಾವುಕರಾಗಿದ್ದರು.


   
ಸುಶಾಂತ್ ಅವರ 'ಅನ್ನಿ' ಹೆಸರಿನ ಈ ಪಾತ್ರ ಆ ಮಟ್ಟಿಗೆ ಎಲ್ಲರನ್ನು ಪ್ರಭಾವಿಸಿತ್ತು. ಸೋಲು, ಗೆಲುವು ಯಾವತ್ತಿಗೂ ಎರಡನೇ ಸ್ಥಾನ. ಆದರೆ, ಬದುಕು ಮುಖ್ಯ. ಜೀವನದಲ್ಲಿ ಆಶಾವಾದಿಗಳಾಗಬೇಕು, ಜೀವನ ಪ್ರೇಮ ಉಳಿಸಿಕೊಳ್ಳಬೇಕು ಎಂಬುದು ಈ ಚಿತ್ರದ ಸಂದೇಶ. ಹೀಗೆ ಜೀವನ ಪ್ರೀತಿಯನ್ನು ಹೇಳಿ, ಸಾವಿನಂಚಿನಲ್ಲಿರುವ ಮಗನನ್ನು ಉಳಿಸಿಕೊಳ್ಳುವ ಪಾತ್ರ ಮಾಡಿ ಎಲ್ಲರ ಮನಸ್ಸಿಗೂ ಹತ್ತಿರವಾದ ಸುಶಾಂತ್ ಸಿಂಗ್ ರಜಪೂತ್ ಅವರ ನಿಜ ಜೀವನದಲ್ಲಿ ಎದುರಾದ ಈ ಸಾವಿನ ಆಲೋಚನೆಯನ್ನು ಅವರದ್ದೇ ಚಿಚ್ಚೋರೆ ಸಿನಿಮಾ ಕತೆ ಮತ್ತು ಪಾತ್ರ ತಡೆಯದೆ ಹೋಗಿದ್ದು ದುರಂತವೇ ಸರಿ. 

ಆತ್ಮಹತ್ಯೆ ಪರಿಹಾರವಲ್ಲ ಎಂದವ ಸುಶಾಂತ್..
ಸುಶಾಂತ್, ತೆರೆ ಮೇಲೆ ತಾನು ಜೀವಿಸಿದ್ದ ಪಾತ್ರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಬಿಟ್ಟಿದ್ದು ತೀರಾ ಅನ್ಯಾಯ. ತೆರೆ ಮೇಲೆ ಆತ್ಯಹತ್ಯೆ ಪರಿಹಾರ ಅಲ್ಲ ಎಂದು ಸುಶಾಂತ್ ಸಿಂಗ್ ರಜಪೂತ್‌ಗೆ ತೆರೆ ಆಚೆ ಅದೇ ಪರಿಹಾರ ಅನಿಸುವಂತ ಕಷ್ಟಗಳು ಏನಿದ್ದವು ಎಂಬುದು ಎಲ್ಲರ ನೋವಿನ ಪ್ರಶ್ನೆ. ಉತ್ತರಿಸಬೇಕಾದ ಸುಶಾಂತ್, ಮೌನವಾಗಿದ್ದಾರೆ. 

ಧೋನಿ ಪಾತ್ರದಲ್ಲಿ ಬದುಕಿನ ಗುರಿ ಸೇರುವುದನ್ನು ಹೇಳಿದವ, ಅನ್ನಿ ಪಾತ್ರದಲ್ಲಿ ಆತ್ಮಹತ್ಯೆ, ಸಾವು ಜೀವನದ ಸಮಸ್ಯೆಗಳಿಗೆ ಪರಿಹಾರ ಅಲ್ಲ ಎಂದವ. ಒಂದು ಪಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡು ಎಂದಿತ್ತು, ಮತ್ತೊಂದು ಪಾತ್ರ ಬದುಕುವುದನ್ನು ಕಲಿ ಎಂದಿತ್ತು. ಹೀಗೆ ತೆರೆ ಮೇಲೆ ತಾನು ಹೇಳಿದ, ಜೀವಿಸಿದ ಪಾತ್ರಗಳಿಗೆ ತದ್ವಿರುದ್ಧವಾಗಿ ಸುಶಾಂತ್ ಸಿಂಗ್ ರಜಪೂತ್ ಯೋಚಿಸಿದ್ದು ಯಾಕೆ?

ತೆರೆ ಮೇಲಿನ ಅವರ ಈ ಧೋನಿ ಹಾಗೂ ಅನ್ನಿ ಹೆರಿನ ಪಾತ್ರಗಳು ಮುಂದೆ ಯಾರ ನಿಜ ಬದುಕಿನಲ್ಲೂ ಸುಳ್ಳಾಗದಿರಲಿ. ಯಾಕೆಂದರೆ ಕ್ಯಾನ್ಸರ್ ರೂಪದಲ್ಲಿ ಸಾವನ್ನು ಮುಂದಿಟ್ಟುಕೊಂಡು ಬದುಕಿನ ಪಾಠ ಹೇಳಿದ ಆನಂದ್ ಚಿತ್ರದ ಹೀರೋ ರಾಜೇಶ್ ಖನ್ನಾ, ಇದೇ ಸಿನಿ ಜಗತ್ತಿನ ಕೂಸು ಅಲ್ಲವೇ.

click me!