ತಾಂಡವ್ ನಿರ್ಮಾಪಕರಿಂದ ಕ್ಷಮೆಯಾಚನೆ: ಭಾರೀ ಪ್ರತಿಭಟನೆಗೆ ಮಣಿದ ಚಿತ್ರತಂಡ!

By Suvarna NewsFirst Published Jan 19, 2021, 7:33 AM IST
Highlights

ತಾಂಡವ ನಿರ್ಮಾಪಕರಿಂದ ಕ್ಷಮೆಯಾಚನೆ| ಭಾರೀ ಪ್ರತಿಭಟನೆಗೆ ಮಣಿದ ಚಿತ್ರತಂಡ| ಚಿತ್ರತಂಡದ ವಿರುದ್ಧ ಹಲವೆಡೆ ಕೇಸು

ಮುಂಬೈ(ಜ.19): ‘ತಾಂಡವ್‌’ ಚಿತ್ರದ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸೋಮವಾರ ಚಿತ್ರತಂಡ ಕ್ಷಮೆಯಾಚಿಸಿದೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ‘ಅಮೆಜಾನ್‌ ವೆಬ್‌ಸೀರೀಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಮ್ಮ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜೊತೆಗೆ ಚಿತ್ರದ ಅಡಕಗಳ ಕುರಿತು ಸಾರ್ವಜನಿಕರಿಂದ ಭಾರೀ ಪ್ರಮಾಣದಲ್ಲಿ ದೂರು ಸಲ್ಲಿಕೆಯಾಗಿರುವ ವಿಷಯ ಕೂಡಾ ಸೋಮವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ನಡೆಸಿದ ಸಮಾಲೋಚನೆ ವೇಳೆ ಕೂಡಾ ಗಮನಕ್ಕೆ ಬಂದಿದೆ.

ತಾಂಡವ್‌, ವಾಸ್ತವವಾಗಿ ಒಂದು ಕಾಲ್ಪನಿಕ ಕಥೆ ಆಧರಿತ ಚಿತ್ರ. ಅದು ಯಾವುದೇ ವ್ಯಕ್ತಿ ಅಥವಾ ಘಟನೆಗಳ ಜೊತೆ ಹೋಲಿಕೆಯಾಗುತ್ತಿರುವುದು ಕಾಕತಾಳೀಯ. ಚಿತ್ರತಂಡವಾಗಲೀ ಅಥವಾ ತಂಡದ ಯಾವುದೇ ವ್ಯಕ್ತಿಗಾಗಲೀ ಯಾವುದೇ ವ್ಯಕ್ತಿ, ಧರ್ಮ, ಸಮುದಾಯ, ಜಾತಿ ಅಥವಾ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ. ಆದರೂ ಕೂಡಾ ಚಿತ್ರದ ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗಮನಿಸಿ ನಾವು ಬೇಷರತ್‌ ಕ್ಷಮೆಯಾಚಿಸುತ್ತಿದ್ದೇವೆ’ ಎಂದು ಹೇಳಿದೆ.

ಕೇಸು ದಾಖಲು: ಈ ನಡುವೆ ‘ತಾಂಡವ್‌’ ವೆಬ್‌ ಸರಣಿ ಹಾಗೂ ಅಮೆಜಾನ್‌ ಇಂಡಿಯಾ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರ ವಿರುದ್ಧ ಸೋಮವಾರ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ. ‘ಸರಣಿಯ ಮೊದಲ ಎಪಿಸೋಡ್‌ನ 17ನೇ ನಿಮಿಷದಲ್ಲಿ ದೇವರನ್ನು ಅವಹೇಳನ ಮಾಡಲಾಗಿದೆ. ಸಂಭಾಷಣೆಗಳು ಜನರಲ್ಲಿ ಜಾತಿ ದ್ವೇಷವನ್ನೂ ಇದು ಹುಟ್ಟು ಹಾಕಬಹುದು. ಪ್ರಧಾನ ಮಂತ್ರಿ ಹುದ್ದೆಗೂ ಅವಮಾನ ಮಾಡಲಾಗಿದೆ’ ಎಂಬುದು ಆರೋಪ. ಮತ್ತೊಂದೆಡೆ ಬಿಹಾರದ ಮುಜಫ್ಫರ್‌ಪುರದಲ್ಲಿ ವಕೀಲರೊಬ್ಬರು ತಾಂಡವ್‌ ಸಿನಿ ತಂಡದ 96 ಜನರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

ಮಾಯಾವತಿ ದನಿ:

ಈ ನಡುವೆ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ತಾಂಡವ್‌ ವಿರುದ್ಧ ದನಿ ಎತ್ತಿದ್ದು, ಇದರಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ಭಾನುವಾರವೇ ವೆಬ್‌ ಸರಣಿ ವಿರುದ್ಧ ಗಂಟಲೇರಿಸಿದ್ದರು.

ಭದ್ರತೆ: ಚಿತ್ರದ ವಿರುದ್ಧ ಆಕ್ರೋಶ ಹೆಚ್ಚಿದ ಬೆನ್ನಲ್ಲೇ ಮುಂಬೈನಲ್ಲಿ ಅಮೆಜಾನ್‌ ಕಚೇರಿ ಮತ್ತು ಚಿತ್ರದ ನಾಯಕ ನಟ ಸೈಫ್‌ ಅಲಿ ಖಾನ್‌ ಅವರ ನಿವಾಸಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

click me!