
ಹೌದು ಅವರ ನಡುವೆ ನಿಶ್ಚಿತಾರ್ಥವಾಗಿತ್ತು. ಏನು ಕಾರಣವೋ ಅದು ಮುರಿದು ಬಿತ್ತು. ಆ ಕಾರಣ ನಿಮಗೆ ಗೊತ್ತಾ? ಅವರಿಬ್ಬರೂ ಬಂದು ಏನಾದರೂ ಹೇಳಿದಾರ? ಅವರ ಬದುಕು ಅವರ ಆಯ್ಕೆ. ನಿಮ್ಮ ಹೊಟ್ಟೆನೋವು ಏನು?
ರಶ್ಮಿಕಾಳನ್ನು ಸೋಶಿಯಲ್ ಮೀಡಿಯಾ ಕಟಕಟೇಲಿ ನಿಲ್ಸಿ ಪದೇ ಪದೇ ಯಾಕೆ ವಿಚಾರಣೆಗೊಳಪಡಿಸುತ್ತೀರಿ? ಯಾವ ಹಕ್ಕಿದೆ ನಿಮಗೆ? ಅವಳೆಷ್ಟು ಚಿಕ್ಕವಳು ಆಗ. ಕ್ಲಾರಿಟಿ ಇರದಿರಬಹುದು. ಕರಿಯರ್ ಬಗ್ಗೆ ದೂರದ ದಾರಿ ಕಂಡಿರಬಹುದು. ಅಥವಾ ಅವನಿಂದಲೇ ಬೇಸರವಾಗಿರಲೂಬಹುದು. ಗೊತ್ತು ಯಾರಿಗೆ?
ಈಗ ಆಕೆ ಸಾಕಷ್ಟು ಸಾಧಿಸಿದ್ದಾಳೆ. ಇತ್ತೀಚೆನ ಗರ್ಲ್ ಫ್ರೆಂಡ್ ಸಿನೆಮಾದಲ್ಲಿ ಅದೆಷ್ಟು ಒಳ್ಳೆಯ ಅಭಿನಯ ನೀಡಿದ್ದಾಳೆ. ಆಕೆ ಅತಿದೊಡ್ಡ ಯಶಸ್ಸು ಗಳಿಸಿದ್ದಾಳೆ ಈಗ.
ಇಲ್ಲಿಂದ ಹೋಗಿ ಬಾಲಿವುಡ್ ನಲ್ಲಿ ಯಾವುದೋ ಪಾತ್ರ ಸಣ್ಣ ಪಾತ್ರ ಮಾಡಿ ಬಂದರೆ, ಹಾಡು ಹಾಡಿ ಬಂದರೆ ಆಹಾ ಓಹೋ ಅಂತ ಮೆರೆಸುತ್ತೀರಿ. ಹೀರೋಗಳ ವಿಚಾರ ಹೇಳುವುದೇ ಬೇಡ. ಅನಾಮತ್ತು ತಲೆಮೇಲೇ ಕೂರಿಸಿಕೊಳ್ತೀರಿ. ರಶ್ಮಿಕಾಳದ್ದೂ ಅಸಾಧಾರಣ ಸಾಧನೆಯೇ. ಅದೆಂತದೋ ಸಮಸ್ಯೆ ನಿಮಗೆಲ್ಲ ಅವಳ ಯಶಸ್ಸನ್ನು ಕೊಂಡಾಡಲು.
ರಾಧಿಕಾ ಪಂಡಿತ್. ಎಷ್ಟು ಪ್ರಶಸ್ತಿಗಳನ್ನು ಪಡೆದ ನಟಿ. ಮದುವೆಯಾಗಿ ಏನಾಗಿದ್ದಾರೆ? ಕರಿಯರ್ ಮುಂದುವರೆಯಲಿಲ್ಲ. ಅದು ಅವರ ಆಯ್ಕೆ. ಗೌರವಿಸೋಣ. ಹಾಗಂತ ಇವರ ಆಯ್ಕೆಯನ್ನೇಕೆ ಪ್ರಶ್ನಿಸಬೇಕು? 'ಹೀರೋ ಅಣ್ಣ' ನ ಹೆಂಡತಿಯಾಗಿ , ಸೋಶಿಯಲ್ ಮೀಡಿಯಾ ಅತ್ತಿಗೆಯಾಗಿ ಇದ್ದುಬಿಟ್ಟರೆ ಬಹಳ ಒಳ್ಳೆಯವರು ನಟಿಯರು. ನಿಮ್ಮ ಚೌಕಟ್ಟು ಮೀರಿ, ಅವಳದೇ ಆಯ್ಕೆಯಾದರೆ, ಅಂತಹ ಆಯ್ಕೆಯಲ್ಲಿ ಅದೆಷ್ಟು ದೂರ, ಎತ್ತರ ಹೋದರೂ ಅಷ್ಟೆ. ಆಹಾ ಓಹೋ. ಭಲಾ ಅಂತೆಲ್ಲ ಮೆರೆಸಲು 'ಹೀರೋ' ಅಲ್ಲವಲ್ಲ?
ಅವಳು ನಮ್ಮ ರಕ್ಷಿತನಿಗೆ ಕೈಕೊಟ್ಟುಬಿಟ್ಟಳು. ಅಬ್ಬಬ್ಬಾ. ಇದೊಂದು ವಿಷಯ ಇಟ್ಟುಕೊಂಡು ಕೊಲೆ ಅಪರಾಧಿ ತರ ವರ್ಷಾನುಗಟ್ಟಲೆಯಿಂದ ಟ್ರೋಲು ನಡೆಸೇ ಇದೀರಲ್ಲಪ್ಪಾ. ಯಾವುದೋ ಕಾರ್ಯಕ್ರಮದಲ್ಲಿ ಆಕೆ ವಿಜಯ್ ನೋಡಿ ಭಾವುಕವಾದರೆ ; 'ಎಲ್ಲ ನಾಟಕ ಗುರೂ. ನಾಳೆ ನಿನಗೂ ಕೈಕೊಡ್ತಾಳೆ'. ಅವನ ಯಾವುದೋ ಹಳೆಯ ಫೊಟೋ ಲೀಕ್ ಆದರೆ ಅದಕ್ಕೂ ಇವಳಿಗೇ ಬೈಗುಳ; 'ಕರ್ಮ ರಿಟರ್ನ್ಸು. ನಮ್ ರಕ್ಷಿತ್ಗೆ ಕೈ ಕೊಟ್ಯಲ್ಲ' ಮದುವೆ ಮುರಿಯುತ್ತಂತೆ ಅನ್ನೋ ಗಾಸಿಪ್ಪು ಚಪ್ಪರಿಸುತ್ತಾ; 'ಅವಳಿಗೆ ಅದೇ ತಕ್ಕ ಶಾಸ್ತಿ' ಅವನದೂ ಏನೂ ತಪ್ಪಿಲ್ಲ. ಇವನದೂ ಇಲ್ಲ. ಏನು ಮಾಡಿದರೂ, ಏನೇ ಆದರೂ ಅವಳನ್ನು ದೂಷಿಸುತ್ತಾ ಇರಬೇಕು ಸದಾ ನೀವು. ಹಾಡುತ್ತಿರಬೇಕು ಅದೇ ರಾಗ; 'ಹಂಗೇ ಆಗಬೇಕು. ಹಲ್ಲು ಮುರೀಬೇಕು ಅವಳಿಗೆ'
ಯಾಕೆ? ರಕ್ಷಿತ್ಗೆ ಆಗಲೀ, ಅತನಿಗೆ ಮೋಸವಾಯ್ತು ಅಂತ ಗೋಳಾಡೋರಿಗೇ ಆಗಲೀ( ಅವನೇನೂ ಹೇಳಿಲ್ಲ ಗೋಳಾಡಿ ಅಂತ ಅದು ಬೇರೆ) ಸುಮ್ನೆ ಆಳಿಗೊಂದು ಕಲ್ಲು ಎಸೀತಿರೋ ಇವರ್ಯಾರಿಗಾಗಲೀ ಹೈಸ್ಕೂಲಲ್ಲೂ, ಕಾಲೇಜಲ್ಲೂ, ಮದುವೆಯಾದಾಗಲೂ, ನಂತರವೂ, ಕನಸಲ್ಲೂ ಒಬ್ಬರೇ ಸಂಗಾತಿ ಇದ್ದರು. ಮದುವೆಗೆ ಮುಂಚೆಯೂ ಅವರೇ ಕನಸಲ್ಲಿ ಬರ್ತಿದ್ರು. ಹ ಹ್ಹ . ಸಾಧ್ಯವೇನ್ರೀ? ಅಷ್ಟೆಲ್ಲ ಪರಮಪರಿಶುದ್ದರಾ ಆಕೆಯ ಬಗ್ಗೆ ಮಾತಾಡೋರೆಲ್ಲ? ಮತ್ಯಾಕೆ ಆ ಹುಡುಗಿ ಬಗ್ಗೆ ಅಷ್ಟು ಅಸಹನೆ?
ಮದುವೆಗಳೇ ಸಣ್ಣ ಸಣ್ಣ ಕಾರಣಗಳಿಗೆ ಮುರಿದು ಬೀಳ್ತವೆ. ಮರುಮದುವೆ ಎಲ್ಲ ವರ್ಗದ ಸಮಾಜದಲ್ಲೂ ಕಾಮನ್ ಆಗಿದೆ. ಅಂತಹುದರಲ್ಲಿ ಒಂದು ನಿಶ್ಚಿತಾರ್ಥ ಮುರಿದರೆ ಅವಳನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳಬೇಕಾ? ಇಷ್ಟೆಲ್ಲಾ ನಿಂದಿಸುವಿಕೆ ಬೇಕ? ಇಂತಹ ಘಟನೆ ಇಡೀ ಜಗತ್ತಿನಲ್ಲಿ ಇದೇ ಮೊದಲು ಅನ್ನೋತರ. ಅವಳೇನೋ ಮಾಡಬಾರದ ಮಹಾಪರಾಧ ಮಾಡಿದಳು ಅನ್ನೋತರ. ಅವಳ ಬದುಕು, ಅವಳ ಸಂಗಾತಿಯ ಆಯ್ಕೆ ಅವಳದು ಅಲ್ವೇನ್ರೀ? ಅಂತಹ ಆಯ್ಕೆಗೇ ಇಷ್ಟು ಅಸಹನೆ? ಅಥವಾ ಅಸಾಧಾರಣ ಗೆಲುವಿಗೆ? ಅವಳಿಗೆ ಅವನು ಅವಕಾಶ ಕೊಟ್ಟನಂತೆ. ಜಗತ್ತಿನ ಎಲ್ಲ ನಟನಟಿಯರಿಗೂ ಮೊದಲ ಅವಕಾಶ ಯಾರಿಂದಲೋ ಬಂದಿರತ್ತೆ. ಎಂತಾ ಸ್ಟಾರ್ ನಟನಿಗೂ. ಅದರಲ್ಲೇನಿದೆ ವಿಶೇಷ?
ಅವಳಿಗೆ ನಟನೆ ಬರಲ್ಲ ಅನ್ನೋರೂ ಉಂಟು. ಅದು ಅವರವರ ಅಭಿಪ್ರಾಯ. ಆದರೆ ನೀವು ಮೆರೆಸುತ್ತಿರೋ ಅಣ್ಣಗಳ ನಟನಾ ಸಾಮರ್ಥ್ಯವನ್ನೂ ಅವಲೋಕಿಸಬೇಕಲ್ಲ ಒಮ್ಮೆ? ಕನ್ನಡವನ್ನು ಆಕೆ ನಿರ್ಲಕ್ಷಿಸುತ್ತಾಳೆ ಅನ್ನುವ ದೂರಿದ್ದರೆ ಅದರ ಬಗ್ಗೆ ಮಾತಾಡಿ. ಭಾಷೆಯ ಆಯ್ಕೆಯ ಸ್ವಾತಂತ್ರ್ಯವೂ ವೈಯಕ್ತಿಕ. ಅದು ಬೇರೆ. ಆದರೂ ನಿಮಗೆ ಅಸಮಾಧಾನವಿದ್ದರೆ ಇರಬಹುದು. ಆ ವಿಷಯವೇ ಬೇರೆ. ಅವಳು ಕನ್ನಡದ ವಾತಾವರಣದಲ್ಲೆ ಬೆಳೆಯದಿದ್ದರೆ ಅದು ಅವಳ ತಪ್ಪಲ್ಲ. ಅವಳು ಸುಳ್ಳು ಅಭಿಮಾನ ನಟಿಸುತ್ತಲೂ ಇಲ್ಲ ಗಮನಿಸಿ. ಇದಕ್ಕಾಗಿಯೂ ಅವಳ ವೈಯಕ್ತಿಕ ಬದುಕಿನ ಬಗ್ಗೆ ಕೀಳಾಗಿ ಮಾತಾಡಲು ಯಾರು ನಾವು ನೀವೆಲ್ಲ ಏನು ಅಧಿಕಾರ? ಯಾವ ಸೀಮೆಗಿಲ್ಲದ ನೈತಿಕ ವ್ಯಾಪಾರ? ನಮ್ಮ ನಮ್ಮ ಬದುಕಿನ ತಟ್ಟೆಗಳನ್ನು ಒಮ್ಮೆ ಇಣುಕಿಕೊಂಡರೆ ಸಾಲದೇ?
ನಟಿಯಾಗಿ ಆಕೆಯ ಬೆಳವಣಿಗೆಯನ್ನು ನೋಡುತ್ತಾ ನಾನಂತೂ ತುಂಬಾ ಖುಷಿಪಟ್ಟಿದ್ದೇನೆ. ಅವಳ ವೈಯಕ್ತಿಕ ಬದುಕಿನ ಆಯ್ಕೆಯನ್ನು ಪ್ರಶ್ನಿಸುವ ಅಧಿಕಾರ ಯಾರೆಂದರೆ ಯಾರಿಗೂ ಇಲ್ಲ. So. ಟ್ರೋಲು ವೀರ-ವೀರಾಗ್ರಣಿಗಳೇ, ಸಾಕು ಮಾಡಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ. ಗುಡಿಸಿಕೊಳ್ಳಿ ನಿಮ್ಮ ನಿಮ್ಮದೇ ಬದುಕಿನ ಕಸಗಳಾ.
ಡಿಯರ್ ರಶ್ಮಿಕಾ. ಸಾಕಷ್ಟು ಸಾಧಿಸಿದ್ದೀರಿ ನೀವು. ಎಂತೆಂತಾ ಪ್ರಾಜೆಕ್ಟುಗಳು, ಎಂತೆಂತಾ ಬ್ಯಾನರುಗಳು, ಎಂತೆಂತವರೊಂದಿಗೆ ಪಾತ್ರಗಳು. ದಕ್ಷಿಣವನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದವರನ್ನು ನಿಮ್ಮ ಕ್ಯಾಲೆಂಡರಿಗಾಗಿ ಕಾಯಿಸಿದ್ದೀರಿ. ಎಂತೆಂತವರ ಜೊತೆ ಸರಿಸಮವಾಗಿ ವೇದಿಕೆ ಹಂಚಿಕೊಂಡಿದ್ದೀರಿ. ಇಂತದ್ದನ್ನು ಈ ನೆಲದ ಒಂದು ಗಂಡು ಜೀವ ಸಾಧಿಸಿದ್ದರೆ...
ಇರಲಿ ಬಿಡಿ.
ಮದುವೆಯ ಶುಭಸಂಧರ್ಭದಲ್ಲಿರುವ ನಿಮಗೆ, ನಿಮ್ಮ ಆಯ್ಕೆಗೆ ನಾನು ಮತ್ತು ಕನ್ನಡ ನಾಡಿನ ನನ್ನಂತಾ ಎಲ್ಲ ಹೆಣ್ಮಕ್ಕಳ ಪರವಾಗಿ ಶುಭಹಾರೈಕೆಗಳು. ನಿಮ್ಮ ವೈಯಕ್ತಿಕ ಮತ್ತು ಕಲಾಜೀವನ ಎರಡೂ ಯಶಸ್ವಿಯಾಗಲಿ. ಭಾರತ ಚಲನಚಿತ್ರರಂಗದ ಚಿರಸ್ಥಾಯಿ ಹೆಸರಾಗಲಿ ನಿಮ್ಮದು.
ALL THE VERY BEST RASHMIKA 💐💓👍
ತುಂಬಾ ಒಳಿತಾಗಲಿ ನಿಮಗೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.