ಈದ್ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾರನ್ನೇ ಕಟ್ ಮಾಡಿದ ಸೈಫ್ ತಂಗಿ ಸೋನಾ ಖಾನ್. ಅಷ್ಟಕ್ಕೂ ಆಗಿದ್ದೇನು?
ಇದೇ 11ರಂದು ಮುಸ್ಲಿಂ ಸಮುದಾಯದವರಿಂದ ಈದ್ ಹಬ್ಬದ ಸಂಭ್ರಮ. ಸೆಲೆಬ್ರಿಟಿಗಳು ಸೇರಿದಂತೆ ಮುಸ್ಲಿಂ ಸಮುದಾಯದವರು ಮಾತ್ರವಲ್ಲದೇ ಹಲವೆಡೆ ಹಿಂದೂಗಳೂ ಈ ಹಬ್ಬವನ್ನು ಆಚರಿಸಿ ಖುಷಿಪಟ್ಟರು. ಸೋಷಿಯಲ್ ಮೀಡಿಯಾಗಳಲ್ಲಿ ಈದ್ ಶುಭಾಶಯಗಳ ಸುರಿಮಳೆಯೇ ಆಗಿದೆ. ಆದರೆ ಇಲ್ಲಿ ಎಲ್ಲರ ಕಣ್ಣು ಕುಕ್ಕಿರುವುದು ನಟಿ ಕರೀನಾ ಕಪೂರ್ ಗಂಡ ನಟ ಸೈಫ್ ಅಲಿ ಖಾನ್ ಅವರ ಸಹೋದರ ಸೋನಾ ಅಲಿ ಖಾನ್ ಅವರು ಶೇರ್ ಮಾಡಿರುವ ಫೋಟೋ. ಅಷ್ಟಕ್ಕೂ ಒಂದು ಫೋಟೋದಲ್ಲಿ ಕರೀನಾ ಕಪೂರ್ ಇದ್ದರೂ ಅವರನ್ನು ಕ್ರಾಪ್ ಮಾಡಿ ಫೋಟೋ ಶೇರ್ ಮಾಡಲಾಗಿದೆ. ಇದು ಕರಿನಾ ಅವರ ಅಭಿಮಾನಿಗಳಿಗೆ ವಿಪರೀತ ಸಿಟ್ಟು ತರಿಸಿದೆ. ತಮ್ಮ ಫ್ಯಾಮಿಲಿ ಫೋಟೋ ಎಂದು ಈ ಫೋಟೋ ಶೇರ್ ಮಾಡಲಾಗಿದೆ. ಅದರಲ್ಲಿ ಕೊನೆಯಲ್ಲಿ ಇರುವ ಕರೀನಾ ಸ್ವಲ್ಪವೇ ಕಾಣುತ್ತಿದ್ದಾರೆ. ಅವರ ಫೋಟೊ ಫ್ರೇಮ್ ಹೊರಗೆ ಹೋಗಿದ್ದು, ಇದನ್ನು ಬೇಕಂತಲೇ ಮಾಡಲಾಗಿದೆ ಎನ್ನುವುದು ಕರೀನಾ ಅಭಿಮಾನಿಗಳ ಅಭಿಮತ.
ಅಷ್ಟಕ್ಕೂ ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಸೋಹಾ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ನಡುವೆ ಉತ್ತಮ ಒಡನಾಟವೇ ಇದೆ. ಹಾಗಿದ್ದರೂ ಕೂಡ ಅವರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ. ಈಗ ಸೋನಾ ಅಲಿ ಖಾನ್ ಅವರು ಕರೀನಾ ಕಪೂರ್ ಖಾನ್ರ ಫೋಟೋವನ್ನು ಕ್ರಾಪ್ ಮಾಡಿರುವುದರಿಂದ ಅತ್ತಿಗೆ-ನಾದಿನಿ ನಡುವೆ ಏನೋ ಕಿರಿಕ್ ಆಗಿರಬಹುದೇ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೆಂದು ಎಲ್ಲಾ ಫೋಟೋಗಳಲ್ಲಿ ಈ ರೀತಿ ಮಾಡಲಾಗಿಲ್ಲ. ಉಳಿದ ಫೋಟೋಗಳಲ್ಲಿ ಕರೀನಾ ಸರಿಯಾಗಿಯೇ ಕಾಣಿಸುತ್ತಾರೆ. ಈ ಫೋಟೋ ಅಡ್ಜಸ್ಟ್ ಮಾಡುವಾಗ ಏನೋ ಎಡವಟ್ಟಾಗಿರಬಹುದು ಎನ್ನಿಸುತ್ತದೆ ಎನ್ನುವುದು ಇನ್ನು ಕೆಲವರ ಅಭಿಮತ. ಆದರೂ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.
ಅಂದಹಾಗೆ ಕರೀನಾ ಮತ್ತು ಸೈಫ್ ಅಲಿ ಅವರ ಮದುವೆಯನ್ನು ಲವ್ ಜಿಹಾದ್ ಎಂದೇ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್ ಭೇಷ್ ಎನ್ನುತ್ತಿದ್ದಾರೆ.
ಶೆರ್ಲಿನ್ ಚೋಪ್ರಾ ವಿಶೇಷ ರೀತಿಯಲ್ಲಿ ಈದ್ ಆಚರಣೆ! ಡ್ರೆಸ್ ಮೇಲೆ ಬಿತ್ತು ಅಭಿಮಾನಿಗಳ ಕಣ್ಣು...!