'ನಾನು ರೋಮ್ಯಾಂಟಿಕ್ ಅನ್ಸೋದು ನಿಮ್ಗೆ, ಆದ್ರೆ ನಾನು 'ಕರ್ನಲ್ ಭಯ್ಯ!' - ಟ್ರೋಲರ್‌ಗಳಿಗೆ ಸಲ್ಲು ಖಡಕ್ ತಿರುಗೇಟು!

Published : Jan 31, 2026, 05:20 PM IST
Salman Khan

ಸಾರಾಂಶ

ಸಲ್ಮಾನ್ ಖಾನ್ ತಮ್ಮ ಮೇಲಿನ ಟ್ರೋಲ್‌ಗಳನ್ನು ಸಕಾರಾತ್ಮಕವಾಗಿ ಎದುರಿಸುವ ಮೂಲಕ, ತಾವು ಪಾತ್ರಕ್ಕಾಗಿ ಹೇಗೆ ಸಿದ್ಧರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 'ಬ್ಯಾಟಲ್ ಆಫ್ ಗಲ್ವಾನ್' ಮೂಲಕ ಸಲ್ಲು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಟ್ರೋಲರ್‌ಗಳಿಗೆ ಸಲ್ಲು ಖಡಕ್ ತಿರುಗೇಟು!

ಮುಂಬೈ: ಬಾಲಿವುಡ್‌ನ 'ಸುಲ್ತಾನ್' ಸಲ್ಮಾನ್ ಖಾನ್ (Salman Khan) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಸಿನಿಮಾಗಳಿಗಿಂತ ಅವರ ವ್ಯಕ್ತಿತ್ವ ಮತ್ತು ಅವರು ನೀಡುವ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸುತ್ತವೆ. ಇತ್ತೀಚೆಗೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಬ್ಯಾಟಲ್ ಆಫ್ ಗಲ್ವಾನ್' (Battle of Galwan) ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರ ಲುಕ್ ಬಗ್ಗೆ ನೆಟ್ಟಿಗರು ಭಾರೀ ಟ್ರೋಲ್ ಮಾಡಿದ್ದರು. ಆದರೆ ಈಗ ಸಲ್ಲು ಭಾಯ್ ಈ ಟ್ರೋಲರ್‌ಗಳ ಬಾಯಿ ಮುಚ್ಚಿಸುವಂತಹ ಖಡಕ್ ಉತ್ತರ ನೀಡಿದ್ದಾರೆ.

ವಿವಾದಕ್ಕೆ ಕಾರಣವಾದ ಟೀಸರ್ ಲುಕ್:

'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಟೀಸರ್‌ನಲ್ಲಿ ಸಲ್ಮಾನ್ ಖಾನ್ ದಪ್ಪನೆಯ ಮರದ ಕೋಲನ್ನು ಹಿಡಿದು ಚೀನಾ ಸೈನಿಕರ ವಿರುದ್ಧ ಹೋರಾಡಲು ಸಿದ್ಧರಾಗಿ ನಿಂತಿರುವ ದೃಶ್ಯವಿದೆ. ಆದರೆ ನೆಟ್ಟಿಗರು ಈ ಸನ್ನಿವೇಶದಲ್ಲಿ ಸಲ್ಮಾನ್ ನೀಡಿದ ಮುಖಭಾವವನ್ನು (Glance) ನೋಡಿ ಕೆಣಕಿದ್ದರು. "ಯುದ್ಧದ ಸನ್ನಿವೇಶದಲ್ಲೂ ಸಲ್ಮಾನ್ ತಮ್ಮ ಸಿನಿಮಾಗಳ ಪ್ರೇಮ ಸನ್ನಿವೇಶದಲ್ಲಿ ನೀಡುವಂತಹ 'ರೋಮ್ಯಾಂಟಿಕ್' ಲುಕ್ ನೀಡುತ್ತಿದ್ದಾರೆ" ಎಂದು ಕಾಲೆಳೆದಿದ್ದರು. ಈ ಟ್ರೋಲ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.

ಸೂರತ್ ಕಾರ್ಯಕ್ರಮದಲ್ಲಿ ಸಲ್ಮಾನ್ ಸ್ಪಷ್ಟನೆ:

ಶುಕ್ರವಾರ ಸಂಜೆ ಸೂರತ್‌ನಲ್ಲಿ ನಡೆದ ಒಂದು ಕ್ರಿಕೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್‌ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ವೇದಿಕೆಯ ಮೇಲಿದ್ದ ನಿರೂಪಕರು ಸಲ್ಮಾನ್ ಅವರಿಗೆ ಟೀಸರ್‌ನಲ್ಲಿರುವಂತೆ ಪೋಸ್ ನೀಡಲು ಕೇಳಿಕೊಂಡರು. ಮರದ ಕೋಲಿನ ಮಾದರಿಯ ವಸ್ತುವನ್ನು ಹಿಡಿದು ಅದೇ ರೀತಿ ಪೋಸ್ ನೀಡಿದ ಸಲ್ಮಾನ್, ನಂತರ ಮೈಕ್ ಹಿಡಿದು ಟ್ರೋಲರ್‌ಗಳಿಗೆ ಉತ್ತರ ನೀಡಿದರು.

"ಈಗ ಕೆಲವರಿಗೆ ಈ ಲುಕ್ ನೋಡಿ ಇದು ರೋಮ್ಯಾಂಟಿಕ್ ಲುಕ್ ಅಂತ ಅನಿಸಬಹುದು... ಆದರೆ ನಾನು ಈ ಸಿನಿಮಾದಲ್ಲಿ ಒಬ್ಬ ಕರ್ನಲ್ ಭಯ್ಯ! ಇದು ಒಬ್ಬ ಕರ್ನಲ್‌ನ ಲುಕ್. ತನ್ನ ತಂಡಕ್ಕೆ, ತನ್ನ ಸೈನಿಕರಿಗೆ ಹೇಗೆ ಧೈರ್ಯ ತುಂಬಬೇಕು ಮತ್ತು ಅವರಲ್ಲಿ ಹೇಗೆ ಹುರುಪು ಮೂಡಿಸಬೇಕು ಎಂದು ತಿಳಿದಿರುವ ಒಬ್ಬ ಅಧಿಕಾರಿಯ ನೋಟವಿದು," ಎಂದು ಸಲ್ಮಾನ್ ತಮ್ಮ ಪಾತ್ರದ ಗಂಭೀರತೆಯನ್ನು ವಿವರಿಸಿದರು.

ಗರ್ಜಿಸಿದ ಸಲ್ಲು ಭಾಯ್:

ಇಷ್ಟಕ್ಕೆ ನಿಲ್ಲದ ಸಲ್ಮಾನ್, "ನಾನು ಬೇಕಿದ್ದರೆ ಭಯಾನಕವಾಗಿ ಗರ್ಜಿಸುವ ಲುಕ್ ಕೂಡ ಕೊಡಬಲ್ಲೆ (ವೇದಿಕೆಯ ಮೇಲೆ ಗುರುಗುಟ್ಟುತ್ತಾ ತೋರಿಸಿದರು). ಆದರೆ ಅಂತಹ ನೋಟಕ್ಕೆ ಆ ಸನ್ನಿವೇಶದಲ್ಲಿ ಅರ್ಥವಿರುವುದಿಲ್ಲ. ವಿಷಯಗಳು ಹೀಗೆಯೇ ನಡೆಯುತ್ತಿವೆ ಮತ್ತು ನಿಮ್ಮೆಲ್ಲರ ಪ್ರೀತಿ-ಆಶೀರ್ವಾದದಿಂದ ಹೀಗೆಯೇ ಮುಂದುವರಿಯುತ್ತವೆ," ಎಂದು ಹೇಳುವ ಮೂಲಕ ಅನಗತ್ಯವಾಗಿ ಟ್ರೋಲ್ ಮಾಡುವವರಿಗೆ ಟಾಂಗ್ ನೀಡಿದರು.

ಸಿನಿಮಾ ಬಗ್ಗೆ:

ಅಪೂರ್ವ ಲಾಖಿಯಾ ನಿರ್ದೇಶನದ ಈ ಚಿತ್ರವು 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ನೈಜ ಸಂಘರ್ಷವನ್ನು ಆಧರಿಸಿದೆ. ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಶಪ್ರೇಮದ ಕಥಾಹಂದರ ಹೊಂದಿರುವ ಈ ಸಿನಿಮಾ ಏಪ್ರಿಲ್ 17, 2026 ರಂದು ಅದ್ಧೂರಿಯಾಗಿ ತೆರೆಕಾಣಲಿದೆ.

ಒಟ್ಟಿನಲ್ಲಿ ಸಲ್ಮಾನ್ ಖಾನ್ ತಮ್ಮ ಮೇಲಿನ ಟ್ರೋಲ್‌ಗಳನ್ನು ಸಕಾರಾತ್ಮಕವಾಗಿ ಎದುರಿಸುವ ಮೂಲಕ, ತಾವು ಪಾತ್ರಕ್ಕಾಗಿ ಹೇಗೆ ಸಿದ್ಧರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 'ಬ್ಯಾಟಲ್ ಆಫ್ ಗಲ್ವಾನ್' ಮೂಲಕ ಸಲ್ಲು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಮಂದಣ್ಣ 'ಬ್ಲಶಿಂಗ್' ರಿಯಾಕ್ಷನ್.. 'ಆ ಸುದ್ದಿ' ನಿಜ ಹೌದು' ಅಂತಿರೋ ಫ್ಯಾನ್ಸ್!
ನೀವು Nivin Pauly ಫ್ಯಾನ್ ಆಗಿದ್ರೆ… ಈ ಸಿನಿಮಾಗಳನ್ನು ಖಂಡಿತಾ ಇಷ್ಟಪಡ್ತೀರಿ