ಸಮೀರ್ ವಾಂಖೇಡೆ ಸಾಕಷ್ಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರು. ಆದರೆ ಇವುಗಳ ಖರ್ಚು-ವೆಚ್ಚವನ್ನು ಅವರು ಸರಿಯಾಗಿ ತೋರಿಸಿಲ್ಲ ಎಂದು ಸಿಬಿಐ ಆರೋಪಿಸಿದೆ.
ನವದೆಹಲಿ (ಮೇ 16, 2023): ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು 25 ಕೋಟಿ ರೂ. ಲಂಚ ಕೇಳಿದ ಆರೋಪ ಹೊತ್ತಿರುವ ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ ವಿರುದ್ಧ ಮತ್ತಷ್ಟು ಆರೋಪಗಳು ಕೇಳಿಬಂದಿವೆ. ಈ ಎಲ್ಲ ಆರೋಪಗಳನ್ನು ಸೋಮವಾರ ಬಹಿರಂಗಗೊಂಡಿರುವ ಪ್ರಕರಣದ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಸಮೀರ್ ವಾಂಖೇಡೆ ಸಾಕಷ್ಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರು. ಆದರೆ ಇವುಗಳ ಖರ್ಚು-ವೆಚ್ಚವನ್ನು ಅವರು ಸರಿಯಾಗಿ ತೋರಿಸಿಲ್ಲ. ವಿದೇಶಗಳ ಭೇಟಿಯ ಹಣದ ಮೂಲವನ್ನೂ ಅವರು ಹೇಳಿಲ್ಲ. ಇಲಾಖೆಯ ಗಮನಕ್ಕೆ ತಾರದೇ ಒಂದು ಕಂಪನಿಯ ಜತೆ ದುಬಾರಿ ವಾಚ್‌ಗಳ ಖರೀದಿ ಹಾಗೂ ಮಾರಾಟದ ವ್ಯವಹಾರ ನಡೆಸುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.
ಇದನ್ನು ಓದಿ: ಶಾರುಖ್ ಮಗನ ಬಂಧಿಸಿದ್ದ ಸಮೀರ್ ವಾಂಖೇಡೆಗೆ ಸಿಬಿಐ ಬಿಸಿ
ಇದೇ ವೇಳೆ, ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು. ಡೀಲ್ ಅನ್ನು ಈಗಾಗಲೇ ಬಂಧಿತರಾಗಿರುವ ಮಧ್ಯವರ್ತಿ ಕೆ.ಪಿ. ಗೋಸಾವಿ ಹಾಗೂ ಸ್ಯಾನ್ವಿಲ್ ಡಿ’ಸೋಜಾ ಅವರ ಮೂಲಕ ಕುದುರಿಸಿದ್ದರು. ಗೋಸಾವಿ ಹಾಗೂ ಡಿ’ಸೋಜಾ ಕೊನೆಗೆ 18 ಕೋಟಿ ರೂಗೆ ಡೀಲ್ ಅಂತಿಮಗೊಳಿಸಿದರು ಹಾಗೂ 50 ಲಕ್ಷ ರೂ. ಟೋಕನ್ ಅಡ್ವಾನ್ಸ್ ಪಡೆದರು. ಈ ಪೈಕಿ ಕೊಂಚ ಹಣವನ್ನು ಆರ್ಯನ್‌ಗೇ ನಂತರ ಮರಳಿಸಿದ್ದರು ಎಂದು ಎಫ್‌ಐಆರ್ ಹೇಳಿದೆ.
ಇದಲ್ಲದೆ, ಸಮೀರ್ ವಾಂಖೇಡೆ ಅವರು ಖಾಸಗಿ ಗುಪ್ತಚರನಾದ ಗೋಸಾವಿಯನ್ನೂ ಎನ್‌ಸಿಬಿ ಸಿಬ್ಬಂದಿ ಎಂದು ಬಿಂಬಿಸಿದ್ದರು. ಈ ಮೂಲಕ ಆರ್ಯನ್ ಖಾನ್‌ನನ್ನು ಬೆದರಿಸಿ ದುಡ್ಡು ಕೀಳುವ ತಂತ್ರವನ್ನು ಸಮೀರ್ ವಾಂಖೇಡೆ ಹೂಡಿದ್ದರು ಎಂದು ಸಿಬಿಐ ಆರೋಪಿಸಿದೆ. ಕೊನೆಗೆ ಈ ಪ್ರಕರಣದ ಒಂದೊಂದೇ ಲೋಪಗಳು ಹೊರಬಂದು ಆರ್ಯನ್ ಖಾನ್‌ಗೆ ಕೋರ್ಟ್ ಕ್ಲೀನ್‌ಚಿಟ್ ನೀಡಿತ್ತು. ಸಮೀರ್ ವಾಂಖೇಡೆಯೇ ಈ ಸುಳ್ಳು ಕೇಸಿನ ಹಿಂದಿನ ವ್ಯಕ್ತಿ ಎಂಬ ಹೊಸ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಕೇರಳದಲ್ಲಿ ಸಿಕ್ಕ ಡ್ರಗ್ಸ್ ಮೌಲ್ಯ 12 ಸಾವಿರ ಕೋಟಿ ಅಲ್ಲ ಬರೋಬ್ಬರಿ 25 ಸಾವಿರ ಕೋಟಿ ರೂ: ಎನ್‌ಸಿಬಿ
ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದಾಗ 18 ಸಿಬಿಐ ಅಧಿಕಾರಿಗಳ ತಂಡ ತಮ್ಮ ಮನೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ಸಮೀರ್ ವಾಂಖೇಡೆ ಇತ್ತೀಚೆಗೆ ಆರೋಪಿಸಿದ್ದರು. ಹಾಗೂ, ನಾನು ದೇಶಪ್ರೇಮಿ ಆಗಿರೋದಕ್ಕೆ ಬಹುಮಾನ ಪಡೆಯುತ್ತಿದ್ದೇನೆ, ನಿನ್ನೆ 18 ಸಿಬಿಐ ಅಧಿಕಾರಿಗಳು ನನ್ನ ನಿವಾಸದ ಮೇಲೆ ದಾಳಿ ಮಾಡಿ 12 ಗಂಟೆಗಳಿಗೂ ಹೆಚ್ಚು ಕಾಲ, ನನ್ನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗ ಶೋಧ ನಡೆಸಿದರು. ಅವರಿಗೆ 23,000 ರೂ. ಮತ್ತು ನಾಲ್ಕು ಆಸ್ತಿ ಪತ್ರಗಳು ಸಿಕ್ಕಿವೆ. ಈ ಆಸ್ತಿಯನ್ನು ನಾನು ಸೇವೆಗೆ ಸೇರಿಕೊಳ್ಳುವ ಮುನ್ನವೇ ಸಂಪಾದಿಸಿದ್ದಾಗಿದೆ ಎಂದೂ ಸಮೀರ್ ವಾಂಖೇಡೆ ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ತಮ್ಮ ಪತ್ನಿ ಕ್ರಾಂತಿ ರೆಡ್ಕರ್ ಅವರ ಫೋನ್ ಅನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಮೀರ್ ವಾಂಖೇಡೆ ಹೇಳಿದ್ದಾರೆ. ಸಮೀರ್ ಅವರ ಸಹೋದರಿ ಯಾಸ್ಮಿನ್ ವಾಂಖೇಡೆ ಅವರ ಮನೆಯಿಂದ 28,000 ರೂ. ಮತ್ತು ಅವರ ತಂದೆ ಜ್ಞಾನೇಶ್ವರ್ ವಾಂಖೇಡೆ ಅವರ ಮನೆಯಿಂದ 28,000 ರೂ.ಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ಹಾಗೂ, ಸಮೀರ್ ವಾಂಖೇಡೆ ಅವರ ಮಾವನ ಮನೆಯಿಂದ 1800 ರೂಪಾಯಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 'ದೇಶಪ್ರೇಮಿಯಾಗಿರೋದಕ್ಕೆ ಸಿಕ್ಕ ಶಿಕ್ಷೆ..' ಸಿಬಿಐ ದಾಳಿಯ ಕುರಿತು ಸಮೀರ್ ವಾಂಖೆಡೆ ಬೇಸರ!