
ರಶ್ಮಿಕಾ ತಂಗಿ 16 ವರ್ಷ ಚಿಕ್ಕವರು; ಆದ್ರೆ ಅಕ್ಕ 'ನ್ಯಾಷನಲ್ ಕ್ರಶ್' ಏನೂ ಕೊಡಲ್ವಂತೆ! ಯಾಕೆ ಹೀಗೆ..?
ಕನ್ನಡತಿ, ಸದ್ಯ ನ್ಯಾಷನಲ್ ಕ್ರಶ್ ಆಗಿರೋ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪರ್ಸನಲ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ರಶ್ಮಿಕಾಗೆ ಅವರಿಗಿಂತ 16 ವರ್ಷ ಚಿಕ್ಕವರಾದ ತಂಗಿ ಇದ್ದಾರೆ. ಆದರೆ, ನಟಿ ರಶ್ಮಿಕಾ ಸಾಮಾನ್ಯವಾಗಿ ಈ ಸಂಗತಿಯನ್ನು ಯಾರಿಗೂ, ಎಲ್ಲೂ ಹೇಳುವುದಿಲ್ಲವಂತೆ. ಕಾರಣ, ಆಕೆ ರಶ್ಮಿಕಾ ತಂಗಿ ಅಂತ ಜಗತ್ತಿಗೆ ಗೊತ್ತಾಗೋದು ಆಕೆಗೆ ಇಷ್ಟವಿಲ್ಲ. ಕಾರಣ, ರಶ್ಮಿಕಾ ತಂಗಿ ಅಂತ ಹೊರಜಗತ್ತಿಗೆ ಗೊತ್ತಾದ್ರೆ ಆಕೆಗೆ ಸಹಜವಾಗಿ ಬದುಕಲು, ಜೀವನ ಮಾಡಲು ಕಷ್ಟವಾಗುತ್ತದೆ. ಹೀಗೆ ಹೇಳಿದ್ದು ಸ್ವತಃ ರಶ್ಮಿಕಾ ಅವರೇ.
ಹೌದು, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನ್ನಾಡಿರುವ ನಟಿ ರಶ್ಮಿಕಾ ಅವರು ನನಗೆ 16 ವರ್ಷ ನನಗಿಂತ ಚಿಕ್ಕ ವಯಸ್ಸಿನ ತಂಗಿ ಇದ್ದಾರೆ. ಇದು ಶಾಕಿಂಗ್ ಎನ್ನಿಸಿದರೂ ಸತ್ಯ. ಈಗ ಅವಳು ಹೈಸ್ಕೂಲು ಓದುತ್ತಿದ್ದಾಳೆ. ಸದ್ಯ ನಮ್ಮ ಮನೆಯಲ್ಲಿ ಆಕೆ ಏನೇ ಕೇಳಿದರೂ ಕೊಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅದರಲ್ಲು ನನ್ನ ಮಟ್ಟಿಗೆ ಹೇಳುವುದಾದರೆ, ಆಕೆ ನನ್ನಿಂದ ಯಾವುದೇ ದುಬಾರಿ ಗಿಫ್ಟ್ ಬಯಸಿದರೂ ನಾನು ಕ್ಷಣಾರ್ಧದಲ್ಲಿ ತಂದು ಅಕೆಯ ಮುಂದೆ ಇಡಬಲ್ಲೆ. ಆದರೆ, ನಾನು ಆಕೆ ಏನು ಕೇಳಿದರೂ ತಕ್ಷಣಕ್ಕೆ ತಂದು ಕೊಡುವುದಿಲ್ಲ' ಎಂದಿದ್ದಾರೆ.
ಸ್ವಂತ ತಂಗಿಗೆ ನ್ಯಾಷನಲ್ ಕ್ರಶ್ (National Crush) ನಟಿ ರಶ್ಮಿಕಾ ಮಂದಣ್ಣ ಹೀಗೆ ಮಾಡುತ್ತಾರೆ ಎಂದರೆ ಯಾರೇ ಅದರೂ ನಂಬುವುದು ಕಷ್ಟ. ಅದರೂ ಈ ಸಂಗತಿ ಸತ್ಯ. ಕಾರಣ, ಇದನ್ನು ಸ್ವತಃ ನಟಿ ರಶ್ಮಿಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ತೀರಾ ಸಾಮಾನ್ಯ ಮಧ್ಯಮ ಕುಟುಂಬದಿಂದ ಬಂದವಳು. ನಮ್ಮದು ಮಧ್ಯಮ ವರ್ಗವಾದ್ದರಿಂದ ನಾನು ಏನೇ ಪಡೆಯಬೇಕೆಂದರೂ ಸಾಕಷ್ಟು ಕಷ್ಟ ಪಡುತ್ತಿದ್ದೆ, ಯೋಚನೆ ಮಾಡಬೇಕಿತ್ತು. ಆದ್ದರಿಂದಲೇ ನನಗೆ ಜೀವನ, ವಸ್ತುಗಳು ಹಾಗೂ ಅನ್ನದ ಬೆಲೆ ತಿಳಿದಿದೆ. ಅದು ನನ್ನ ತಂಗಿಯೂ ತಿಳಿಯಬೇಕು.
ನಮ್ಮ ಪ್ರಯತ್ನವಿಲ್ಲದೇ ಅನ್ನಪಾನಾದಿಗಳು ನಮ್ಮ ಮುಂದೆ ಬಂದುಬಿಟ್ಟರೆ ನಮಗೆ ಅದರ ಬೆಲೆಯೇ ಅರಿವಾಗುವುದಿಲ್ಲ. ಹೀಗಾಗಿ ನಾನು ಅವಳಿಗೆ ಸುಮ್ಮನೇ ಒಂದು ಬಿಡಿಗಾಸೂ ಕೂಡ ಕೊಡುವುದಿಲ್ಲ. ಅಗತ್ಯವಿದ್ದರೆ, ಅಗತ್ಯವಿದ್ದಷ್ಟು ಕೊಡುತ್ತೇನೆ. ನಮ್ಮ ಮನೆಯಲ್ಲಿ (ಅವಳ ಮನೆಯಲ್ಲಿ) ಅವಳಿಗೆ ಸಾಮಾನ್ಯ ಮಧ್ಯಮ ಕುಟುಂಬದ ಮಕ್ಕಳಿಗೆ ಏನು ಅಗತ್ಯವಿದೆಯೋ ಅದು ಸಿಗುತ್ತದೆ. ಅದಕ್ಕಿಂತ ಹೆಚ್ಚು ಈ ವಯಸ್ಸಿನಲ್ಲಿ ಸಿಗುವ ಅಗತ್ಯವಿಲ್ಲ. ಹೀಗಾಗಿಯೇ ನಾನು ಅವಳಿಗೆ ಅನಗತ್ಯವಾಗಿ ಬಿಡಿಗಾಸೂ ಕೊಡುವುದಿಲ್ಲ. ಈ ವಯಸ್ಸಿನಲ್ಲಿ ಅವಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ, ದುಬಾರಿ ವಸ್ತುಗಳನ್ನು ಕೊಡುವ ಅಗತ್ಯವಿಲ್ಲ ಎಂದೇ ನಾನು ಭಾವಿಸಿದ್ದೇನೆ, ಹಾಗೇ ನಡೆದುಕೊಳ್ಳುತ್ತಿದ್ದೇನೆ. ನಮ್ಮ ಮನೆಯಲ್ಲಿ ಕೂಡ ನನ್ನ ಈ ನಿಲುವಿನ ಬಗ್ಗೆ ವಿರೋಧವಿಲ್ಲ.
ನನ್ನ ಬೆಳಕಿನ ನೆರಳಲ್ಲಿ, ನನ್ನ ಸ್ಟಾರ್‌ಗಿರಿಯಲ್ಲಿ ಅವಳ ಜೀವನ ಅಸಹಜವಾಗಿ ನರಳಬೇಕಿಲ್ಲ. ಅವಳು ಸ್ವಾಭಾವಿಕವಾಗಿ ಅವಳಾಗಿಯೇ ಬೆಳೆಯಲಿ. ಬದುಕು ಅವಳಿಗೆ ಏನು ಕೊಡಬೇಕೋ ಅದನ್ನು ಕೊಡುತ್ತದೆ, ನಾನು ಅಕ್ಕನಾಗಿ ಅವಳಿಗೆ ಸುರಕ್ಷಿತ ಭಾವವನ್ನು ಖಂಡಿತ ಕೊಡುತ್ತೇನೆ. ಅವಳಿಗೆ ಅವಳಿಂದ ಪರಿಹರಿಸಲಾಗದ ಕಷ್ಟ ಏನೇ ಬಂದರೂ ನಾನು ಜತೆಯಲ್ಲಿ ನಿಂತು ಬಗೆಹರಿಸುತ್ತೇನೆ. ಅವಳಿಗೆ ಅನಿವಾರ್ಯ ಎನ್ನುವುದನ್ನು ಕ್ಷಣಾರ್ಧದಲ್ಲಿ ಕಣ್ಣಮುಂದೆ ಇಡುತ್ತೇನೆ. ಆದರೆ, ಅವಳ ಬೆಳವಣಿಗೆಯ ಈ ಸಮಯದಲ್ಲಿ ಅನಗತ್ಯ ಭಾರ ಕೊಟ್ಟು ಅವಳು ಕೊಳೆಯುವಂತೆ ಮಾಡುವುದು ನನಗೆ ಇಷ್ಟವಿಲ್ಲ. ಅವಳ ಯೋಗಕ್ಷೇಮ, ಭವಿಷ್ಯ ಅವಳ ಕೈನಲ್ಲೇ ಇರಲಿ. ಅದಕ್ಕೆ ಅಗತ್ಯವಿದ್ದರೆ ಸಪೋರ್ಟ್ ಮಾಡುವುದು ಕಂಡಿತ ನನ್ನ ಕರ್ತವ್ಯ. ಅದನ್ನು ನಾನೂ, ನಮ್ಮ ಮನೆಯ ಎಲ್ಲರೂ ಮಾಡುತ್ತೇವೆ..' ಎಂದಿದ್ದಾರೆ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.