ಡೀಪ್ ಫೇಕ್ ಪ್ರಕರಣಕ್ಕೆ ಹಲವು ಬಾರಿ ತುತ್ತಾಗಿದ್ದ ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಅವರನ್ನು ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ನಟಿ ಹೇಳಿದ್ದೇನು?
ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪ್ರಕರಣದಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಕುತೂಹಲದ ವಿಷಯ ಏನೆಂದರೆ, ರಶ್ಮಿಕಾ ಮಂದಣ್ಣ ಅವರನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಖುದ್ದು ನಟಿ ವಿಷಯ ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಅದು ಸೈಬರ್ ಕ್ರೈಂ. ಅದರ ನಂತರ ನಾನು ಸೈಬರ್ ಅಪರಾಧಗಳ ವಿರುದ್ಧ ಹೋರಾಡಬೇಕು ಎಂದು ಯೋಚಿಸಿದೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದುಕೊಂಡಿದ್ದೆ. ಆ ನಿಮಿತ್ತ ಕಾರ್ಯಯೋಜನೆ ರೂಪಿಸಿದ್ದೆ ಎಂದಿದ್ದಾರೆ.
ಇದೇ ವೇಳೆ ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಸೈಬರ್ ಕ್ರಿಮಿನಲ್‌ಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಎಚ್ಚರವಾಗಿರುವುದು ಮಾತ್ರವಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ಅಪರಾಧಗಳ ವಿರುದ್ಧ ಕೆಲಸ ಮಾಡಬೇಕು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿ ನಾನು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸೈಬರ್ ಅಪರಾಧಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಅದು ಹೇಳಿದೆ ಎಂದು ನಟಿ ಹೇಳಿದ್ದಾರೆ.
undefined
ಮತ್ತೊಮ್ಮೆ ರಶ್ಮಿಕಾ ಡೀಪ್ಫೇಕ್ ವಿಡಿಯೋ: ವಿರೋಧಿಸೋ ಬದ್ಲು ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಅಷ್ಟಕ್ಕೂ ಡೀಪ್ಫೇಕ್ ಎನ್ನುವುದು ಕೆಲ ತಿಂಗಳಿನಿಂದ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಕೆಲ ತಿಂಗಳ ಹಿಂದೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ದೇಶಾದ್ಯಂತ ಭಾರಿ ಹಲ್ಚಲ್ ಸೃಷ್ಟಿಸಿತ್ತು. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್ ಫೇಕ್. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನುಮಾಡಲಾಗಿತ್ತು. ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಟಿಯೊಬ್ಬಳು ಈ ರೀತಿ ಡ್ರೆಸ್ ಹಾಕಿದರೆ ಅದೇನು ದೊಡ್ಡ ವಿಷಯವೇ ಅಲ್ಲ. ಈ ರೀತಿ ದೇಹ ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆದರೆ ಸಾಮಾನ್ಯ ಮಹಿಳೆಯರ ವಿಷಯದಲ್ಲಿಯೂ ಹೀಗೆಯೇ ಆದರೆ ಮಾನ ಮರ್ಯಾದೆಗೆ ಅಂಜುವವರು ಯಾವ ಹಂತಕ್ಕಾದರೂ ಹೋಗಬಹುದು ಎಂಬ ಬಗ್ಗೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ರಶ್ಮಿಕಾ ಮಂದಣ್ಣ ಬಳಿಕ ಬಾಲಿವುಡ್ ನಟಿಯರಾದ ಕಾಜೋಲ್, ಆಲಿಯಾ ಸೇರಿದಂತೆ ಕೆಲವರ ಇದೇ ರೀತಿಯ ವಿಡಿಯೋಗಳು ವೈರಲ್ ಆದವು. ಇಂಥ ವಿಡಿಯೋ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ, ಮುಂದೆ ಈ ರೀತಿ ಮಾಡಲು ಜನರು ಹೆದರುತ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಆದರೆ ಇದೀಗ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ, ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ಫೇಕ್ ವಿಡಿಯೋ ವೈರಲ್ ಆಗಿತ್ತು. ಬೇರೆಯವರ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಿಸಿರುವ ಕಿಡಿಗೇಡಿಗಳು ಅಶ್ಲೀಲವಾಗಿ ಬಿಂಬಿಸುವ ಯತ್ನ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ನಟಿ ಇದರ ಬಗ್ಗೆ ಹೋರಾಟ ನಡೆಸುತ್ತಿದ್ದರು. ಇದರ ಫಲವಾಗಿ ಇದೀಗ ಅವರನ್ನೇ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.