RRR Movie: ರಾಜಮೌಳಿ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ!

By Kannadaprabha News  |  First Published Mar 16, 2022, 11:17 AM IST

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ‘ಜೆಂಡಾ’ ಹಾಡು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಹಾಡಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಧೀಮಂತ ವ್ಯಕ್ತಿಗಳ ಪ್ರಸ್ತಾಪವಿದೆ. 


ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ‘ಆರ್‌ಆರ್‌ಆರ್‌’ನ (RRR) ‘ಜೆಂಡಾ’ ಹಾಡು (Jenda Song) ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಹಾಡಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಧೀಮಂತ ವ್ಯಕ್ತಿಗಳ ಪ್ರಸ್ತಾಪವಿದೆ. ಇದರಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಕುರಿತ ಚಿತ್ರಣವೂ ಬರುತ್ತದೆ. ನಾಯಕಿ ಆಲಿಯಾ ಭಟ್‌ (Alia Bhatt) ಕೊಡಗಿನ ಸಾಂಪ್ರದಾಯಿಕ ಶೈಲಿಯ ಸೀರೆಯಲ್ಲಿ ವೀರ ವನಿತೆಯ ಲುಕ್‌ನಲ್ಲಿ ಕೈಯಲ್ಲಿ ಖಡ್ಗ ಹಿಡಿದು ಚೆನ್ನಮ್ಮನಿಗೆ ನಮನ ಸಲ್ಲಿಸುತ್ತಾರೆ. ಇದಲ್ಲದೇ ಛತ್ರಪತಿ ಶಿವಾಜಿ, ಸುಭಾಷ್‌ಚಂದ್ರ ಭೋಸ್‌, ಭಗತ್‌ ಸಿಂಗ್‌ ಮೊದಲಾದ ಹೋರಾಟಗಾರರಿಗೂ ಈ ಹಾಡಿನಲ್ಲಿ ಗೌರವ ನಮನ ಸಲ್ಲಿಸಲಾಗಿದೆ. ಮಾ.25ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜ್ಯೂ.ಎನ್​ಟಿಆರ್ (Jr.NTR) ಮತ್ತು ರಾಮ್​ ಚರಣ್ (Ram Charan)​, ಅಜಯ್‌ ದೇವಗನ್‌ (Ajay Devgan) ಮುಖ್ಯಪಾತ್ರದಲ್ಲಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಭರ್ಜರಿ ಸಿದ್ಧತೆ: ಬಿಡುಗಡೆಗೂ ಮೊದಲೇ ಭಾರೀ ಸದ್ದು ಮಾಡಿ​ರುವ, ಏಕಕಾಕದಲ್ಲಿ ಆರೇಳು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ತೆಲುಗಿನ ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರ ಈ ತಿಂಗಳ 25ರ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು, ಅದಕ್ಕೂ ಮೊದಲು ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ ಮಾ.19ರಂದು ಪ್ರೀ ರಿಲೀಸ್‌ ಕಾರ್ಯ​ಕ್ರಮ ಅದ್ಧೂರಿಯಾಗಿ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

Latest Videos

RRR Trailer: ರಾಜಮೌಳಿ ದೃಶ್ಯ ವೈಭವದಲ್ಲಿ ಅಬ್ಬರಿಸಿದ ಜ್ಯೂ.ಎನ್​ಟಿಆರ್-ರಾಮ್​ ಚರಣ್

ಚಿಕ್ಕಬಳ್ಳಾಪುರದ ಅಗಲಗುರ್ಕಿ ಬೈಪಾಸ್‌ ಬಳಿ ಸುಮಾರು 70 ಎಕರೆ ಜಾಗದಲ್ಲಿ ಸಿನಿಮಾ ತಂಡದಿಂದ ಪ್ರೀರಿ​ಲೀಸ್‌ ಕಾರ್ಯ​ಕ್ರಮ ನಡೆಯಲಿದ್ದು, ಈಗಾಗಲೇ ಬೃಹತ್‌ ವೇದಿಕೆ ಸಿದ್ಧಗೊ​ಳ್ಳು​ತ್ತಿದೆ. ರಾತ್ರಿ 7ರಿಂದ 10 ಗಂಟೆ​ವ​ರೆಗೆ ನಡೆ​ಯ​ಲಿ​ರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಯಾಂಡ​ಲ್‌ವುಡ್‌ ನಟ​ರಾದ ಶಿವರಾಜ್‌ ಕುಮಾರ್‌, ಶ್ರೀಮರಳಿ ಸೇರಿ​ದಂತೆ ಸ್ಯಾಂಡ​ಲ್‌​ವು​ಡ್‌ನ ಹಲವರು, ಮೆಗಾಸ್ಟಾರ್‌ ಚಿರಂಜೀವಿ, ನಂದಮೂರಿ ಬಾಲಕೃಷ್ಣ ಸೇರಿದಂತೆ ತೆಲುಗು, ತಮಿಳಿನ ಕೆಲ ಸ್ಟಾರ್‌ ನಟರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯ​ಕ್ರ​ಮದಲ್ಲಿ ಕರ್ನಾ​ಟಕ, ಆಂಧ್ರ​ಪ್ರ​ದೇಶ, ತೆಲಂಗಾ​ಣ ಹಾಗೂ ತಮಿ​ಳು​ನಾ​ಡಿನ ಸುಮಾರು 2 ರಿಂದ 2.50 ಲಕ್ಷ ಮಂದಿ ಪಾಲ್ಗೊ​ಳ್ಳುವ ನಿರೀಕ್ಷೆ ಇದೆ. ಈಗಾ​ಗಲೇ ಕಾರ್ಯ​ಕ್ರ​ಮ​ಕ್ಕಾಗಿ ಅಗ​ತ್ಯ ಸಿದ್ಧತೆ ಮಾಡಿ​ಕೊ​ಳ್ಳ​ಲಾ​ಗು​ತ್ತಿದ್ದು, ನಂದಮೂರಿ ಹಾಗೂ ಮೆಗಾಸ್ಟಾರ್‌ ಅಭಿಮಾನಿಗಳು ಸಾಕಷ್ಟುಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ಸ್ಥಳ​ದ​ಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. ಮಾ.18ರಂದು ದುಬೈನಲ್ಲೂ ಇಂತಹದೇ ಬೃಹತ್‌ ಕಾರ್ಯಕ್ರಮ ನಡೆ​ಯ​ಲಿ​ದೆ. ಜೂನಿಯರ್‌ ಎನ್‌ಟಿಆರ್‌ ತಾರಕ್‌ ರಾಮ್‌ ಹಾಗೂ ರಾಮಚರಣ್‌ ಅಭಿನಯಿಸಿರುವ ಈ ಚಿತ್ರ ಇಷ್ಟೊತ್ತಿಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೋನಾ ಹಿನ್ನೆ​ಲೆ​ಯಲ್ಲಿ ಬಿಡು​ಗಡೆ ಮುಂದೂಡಲಾ​ಗಿ​ತ್ತು. ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ತೆರೆ ಕಾಣಲಿದೆ.



ಇದು ರಾಜಮೌಳಿ:
ನಿರ್ದೇಶಕ ರಾಜಮೌಳಿ ತಮ್ಮ ‘ಆರ್‌ಆರ್‌ಆರ್‌’ ಚಿತ್ರದ ಕಾರ್ಯಕ್ರಮದ ಸಲುವಾಗಿ ಈ ಮೊದಲು ಬೆಂಗಳೂರಿಗೆ ಎರಡು ಬಾರಿ ಬಂದು ಹೋಗಿದ್ದಾರೆ. ಈ ಹೊತ್ತಲ್ಲಿ ಅವರ ವರ್ತನೆ ಮೆಚ್ಚುವಂತಿತ್ತು. ಇಬ್ಬರು ಸೂಪರ್‌ಸ್ಟಾರ್‌ಗಳು, ಆಲಿಯಾ ಭಟ್‌ರಂತಹ ನಟಿಯನ್ನು ಕೂಡ ಅವರು ಮಾತೇ ಆಡದೆ ನಿಯಂತ್ರಿಸಬಲ್ಲರು. ನೂರಾರು ಮಂದಿ ತಂಡವನ್ನು ಮುತ್ತಿಗೆ ಹಾಕಿದಾಗ ಒಂದೇ ಒಂದು ಕೂಗಿಗೆ ಎಲ್ಲರನ್ನೂ ತಡೆದು ನಿಲ್ಲಿಸಿದರು. ಟೀಸರ್‌ ತಮಗೆ ಬೇಕಾದ ಹಾಗೆ ಪ್ರದರ್ಶನ ಆಗಲಿಲ್ಲ ಎಂದಾಗ ತಕ್ಷಣ ಎದ್ದು ನಿಂತು ಪ್ರದರ್ಶನ ನಿಲ್ಲಿಸಿ ಸರಿ ಮಾಡಿಸಿ ಮತ್ತೆ ಶುರು ಮಾಡಿದರು. ಎಲ್ಲರೂ ಹೇಳುವ ಹಾಗೆ ರಾಜಮೌಳಿಗೆ ಏನು ಬೇಕು ಅನ್ನುವುದು ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಆ ಕಾರಣದಿಂದಲೇ ಅವರು ಎಲ್ಲರಿಗೂ ಗೌರವಿಸುವ ನಿರ್ದೇಶಕರಾಗಿದ್ದಾರೆ.

RRR Movie: ಮಾರ್ಚ್ 14ರಂದು ರಾಜಮೌಳಿ ಚಿತ್ರದ 'ಎತ್ತುವ ಜಂಡಾ' ಸಾಂಗ್ ರಿಲೀಸ್

ಈ ಸಂದರ್ಭದಲ್ಲಿ ಅವರು ಹೇಳಿದ ಒಂದೆರಡು ಮಾತುಗಳು ಮನನ ಮಾಡುವಂತಿದೆ.

1. ಕತೆಯ ಹಂತದಲ್ಲಿ ಕತೆ ನನಗೆ ವಾವ್‌ ಅನ್ನಿಸದೇ ಇದ್ದರೆ ನಾನು ಆ ಸಿನಿಮಾ ಮಾಡುವುದಿಲ್ಲ. ಲಾರ್ಜರ್‌ ದ್ಯಾನ್‌ ಲೈಫ್‌ ಸಿನಿಮಾ ಮಾಡುವವನು ನಾನು. ವಾವ್‌ ಫ್ಯಾಕ್ಟರ್‌ ಹೆಚ್ಚಿದ್ದಷ್ಟೂನಾನು ಸಿನಿಮಾ ಮಾಡಲು ಮುಂದಾಗುತ್ತೇನೆ. ಇಲ್ಲದಿದ್ದರೆ ನನ್ನ ಸಮಯ ಕೊಡುವುದಕ್ಕೆ ನಾನು ಮುಂದಾಗುವುದಿಲ್ಲ.

2. ಭಾವನೆಗಳು ಮುಖ್ಯ. ಭಾವನೆಗಳಿಲ್ಲದೆ ನಾನು ಸಿನಿಮಾ ಮಾಡುವುದಿಲ್ಲ. ಹಾಡಲ್ಲಿಯೂ ಫೈಟ್‌ನಲ್ಲಿಯೂ ಎಲ್ಲದರ ಹಿಂದೆಯೂ ಇಮೋಷನ್‌ ಇರಬೇಕು. ಇಮೋಷನ್‌ಗಳಿಲ್ಲದ ನನ್ನ ಸಿನಿಮಾ ಇಲ್ಲ.

3. ಕತೆಗೆ ಒಂದು ಗ್ರಾಮರ್‌ ಇರುತ್ತದೆ. ಅದೇ ಥರ ನವರಸಗಳಿಗೂ ಗ್ರಾಮರ್‌ ಇರುತ್ತದೆ. ಒಂದು ರಸ ಬಂದ ಮೇಲೆ ಇನ್ನೊಂದು ರಸ ಬರಬೇಕು. ಅದಕ್ಕೊಂದು ಕ್ರಮಬದ್ಧತೆ ಇರುತ್ತದೆ. ಬೇರೆ ಬೇರೆ ರಸ ಸೇರಿಸಬಾರದು. ಚಂದದ ನಾಯಕಿ ಇದ್ದಾಳೆ ಅನ್ನುವ ಕಾರಣಕ್ಕೆ ಅನವಶ್ಯಕವಾಗಿ ನಾನು ಪ್ರೇಮ ದೃಶ್ಯಗಳನ್ನು ಸೇರಿಸುವುದಿಲ್ಲ. ಕತೆ ಬಯಸಿದರೆ ಮಾತ್ರ ಪ್ರೇಮ ದೃಶ್ಯ ಇರುತ್ತದೆ. ಕತೆ ನನಗೆ ಎಲ್ಲಕ್ಕಿಂತ ಮುಖ್ಯ.

4. ಸ್ಟಾರ್‌ಗಳು, ದೊಡ್ಡ ನಿರ್ಮಾಣ ಸಂಸ್ಥೆ ಇತ್ಯಾದಿ ಇತ್ಯಾದಿ ಎಲ್ಲವೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವವರೆಗೆ ಮಾತ್ರ. ಸಿನಿಮಾ ಶುರುವಾದ 10 ನಿಮಿಷದ ನಂತರ ಪಾತ್ರಗಳು ಮಾತ್ರ ಮನಸ್ಸಲ್ಲಿ ಉಳಿಯುತ್ತವೆ. ಆ ಕಾರಣಕ್ಕೆ ನಾನು ನಂಬಬೇಕಾದದ್ದು ಕತೆಯನ್ನು ಮಾತ್ರ ಎಂಬುದು ತಿಳಿದಿದೆ.

5. ಪ್ರತಿಯೊಂದು ಸಿನಿಮಾವನ್ನೂ ನಾನು ನನ್ನ ಮೊದಲ ಸಿನಿಮಾ ಎಂದು ಭಾವಿಸಿಕೊಂಡೇ ಮಾಡುತ್ತೇನೆ. ನಾನು ಯೋಚಿಸಿದ ದೃಶ್ಯಗಳನ್ನು ಸಮರ್ಥವಾಗಿ ದಾಟಿಸಲು ಸೂಕ್ತವಾದ ಕಲಾವಿದರು ಬೇಕು. ಸಮರ್ಥ ಕಲಾವಿದರ ಆಯ್ಕೆಯಿಂದಲೇ ನನಗೆ ಗೆಲುವು ಸಿಕ್ಕಿದೆ ಎಂದು ಭಾವಿಸುತ್ತೇನೆ.
 

click me!