ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಬೆನ್ನಲ್ಲೇ ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಕೋರಿಕೊಂಡದ್ದು ಏನು?
ಅವನೊಬ್ಬ ದೇವತೆ, ಇನ್ನೂ ಮದ್ವೆ ಆಗಿಲ್ಲ, ಎಷ್ಟೆಲ್ಲಾ ಮಂದಿಗೆ ಸಹಾಯ ಮಾಡಿದ್ದಾನೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಇರುವಾಗಲೂ ಸಹಾಯ ಮಾಡಿದ್ದಾನೆ. ಆಪರೇಷನ್ಗೆ ದುಡ್ಡು ಕೊಟ್ಟಿದ್ದಾನೆ. ಅವನಂಥ ವ್ಯಕ್ತಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಪ್ಲೀಸ್ ಅವನಿಗೆ ಹೀಗೆಲ್ಲಾ ತೊಂದರೆ ಕೊಡಬೇಡಿ, ಅವನೊಬ್ಬ ದೇವತಾ ಮನುಷ್ಯ. ಅವನೊಬ್ಬ ದಂತಕಥೆ. ಅವನನ್ನು ಕೊಲ್ಲುವುದರಿಂದ ನಿಮಗೆ ಏನು ಸಿಗುತ್ತದೆ? ಅವನು ಒಳ್ಳೆಯ ಮಗ ಮತ್ತು ಸಹೋದರ. ಎಷ್ಟೋ ನಟಿಯರಿಗೂ ಸಹಾಯ ಮಾಡಿದ್ದಾನೆ. ಪ್ಲೀಸ್ ಅವನ ಮೇಲೆ ದ್ವೇಷ ಕಾರಬೇಡಿ. ಕೈಮುಗಿದು ಬೇಡಿಕೊಳ್ತೇನೆ...
- ಹೀಗೆಂದು ರಾಖಿ ಸಾವಂತ್ ಸೋಷಿಯಲ್ ಮೀಡಿಯಾದ ಲೈವ್ನಲ್ಲಿ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಅವರು ಕಣ್ಣೀರು ಹಾಕಿದ್ದು ಬಾಲಿವುಡ್ ನಟ ಸಲ್ಮಾನ್ ಖಾನ್ ಕುರಿತು. ಮೊನ್ನೆ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಆದ ಬೆನ್ನಲ್ಲೇ ರಾಖಿ ಸಾವಂತ್ ಈ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಾಖಿ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ, ಆರ್ಥಿಕ ನೆರವು ನೀಡಿದ್ದರು ಸಲ್ಮಾನ್. ಈ ಹಿಂದೆಯೂ ರಾಖಿ ಅದನ್ನು ಸ್ಮರಿಸಿದ್ದರು. ಇದೀಗ ನೇರ ಪ್ರಸಾರದಲ್ಲಿ ಬಂದು ಅದನ್ನೇ ಪುನಃ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ, ನಟಿ ರಾಖಿ ಸಾವಂತ್ಗೂ ಲಾರೆನ್ಸ್ ಬಿಷ್ಣೋಯಿ ಬೆದರಿಕೆ ಹಾಕಿದ್ದ. ರಾಖಿಯ ತಾಯಿ ಅನಾರೋಗ್ಯಪೀಡಿತರಾಗಿದ್ದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರಿಗೆ ನೆರವಾಗಿದ್ದರು. ಇದೇ ಕಾರಣಕ್ಕೆ ರಾಖಿ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಮಾತನಾಡಿದ್ದರು. ಇದೇ ಕಾರಣಕ್ಕೆ, ಲಾರೆನ್ಸ್ ಬಿಷ್ಣೋಯಿ, ರಾಖಿ ನಿಮ್ಮ ಜೊತೆ ನಮಗೆ ಮುನಿಸು ಇಲ್ಲ, ಯಾವ ಜಗಳನೂ ಇಲ್ಲ ಆದರೆ ಸಲ್ಮಾನ್ ಖಾನ್ ವಿಚಾರದಲ್ಲಿ ಸೇರಿಕೊಳ್ಳಬೇಡಿ. ಇಲ್ಲದಿದ್ದರೆ ನಿಮಗೆ ತುಂಬಾ ಕಷ್ಟವಾಗುತ್ತದೆ. ನೀವು ಎಷ್ಟೇ ಸೆಕ್ಯೂರಿಟಿ ಕೊಟ್ಟರೂ ಸಲ್ಮಾನ್ ಖಾನ್‌ನನ್ನು ನಾನು ಕೊಲೆ ಮಾಡುತ್ತೇನೆ. ಇದು ನಮ್ಮ ಕೊನೆಯ ವಾರ್ನಿಂಗ್ ಎಂದಿದ್ದ ಲಾರೆನ್ಸ್.
ಇನ್ನು ಲಾರೆನ್ಸ್ ಬಿಷ್ಣೋಯಿ ವಿಷಯಕ್ಕೆ ಬರುವುದಾದರೆ, ಈತ ಜೈಲಿನಲ್ಲಿದ್ದಾನೆ. ಈತನಿಗೆ ಸಲ್ಮಾನ್ ಖಾನ್ ವಿರುದ್ಧ ಕೋಪಕ್ಕೆ ಕಾರಣ, ಕೃಷ್ಣಮೃಗ ಬೇಟೆ ಎನ್ನಲಾಗಿದೆ. ಅಷ್ಟಕ್ಕೂ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ.
ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ.
ಗುಂಡಿನ ದಾಳಿ ಬಳಿಕ ಮೌನಕ್ಕೆ ಜಾರಿದ ಸಲ್ಮಾನ್ ಖಾನ್: ಸಹೋದರ ಅರ್ಬಾಜ್ ಖಾನ್ ಪ್ರತಿಕ್ರಿಯೆ ಹೀಗಿದೆ...