ಕೋವಿಡ್-19 ಸಾರ್ಕಾರದ ರಿಲೀಫ್ ಫಂಡ್‌ಗೆ ಹೆಚ್ಚು ದೇಣಿಗೆ ನೀಡಿದ್ದು ಯಾರು? ಸ್ಟಾರ್ ನಟರ ಫ್ಯಾನ್ಸ್ ನಡುವೆ ಶುರುವಾದ ವಾರ್‌ಗೆ ಒಂದು ಬಲಿ.
ವಿಶ್ವಕ್ಕೇ ವಕ್ಕರಿಸಿಕೊಂಡಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರತಿಯೊಬ್ಬ ಪ್ರಜೆಯೂ ಮನೆಯಲ್ಲಿಯೇ ಇದ್ದು ಲಾಕ್‌ಡೌನ್ ನಿಯಮವನ್ನು ಪಾಲಿಸಬೇಕಾಗಿದೆ. ಲಾಕ್‌ಡೌನ್‌ನಿಂದಾಗಿ ಅನೇಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇವರಿಗೆ ನೆರವಾಗಲು ಸರಕಾರ Covid19 Relief Fund ಸ್ಥಾಪಿಸಿದ್ದು, ಉಳ್ಳವರು, ಆಸಕ್ತರು ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ಈ ಫಂಡ್‌ಗೆ ಅನೇಕ ಸಿನಿಮಾ ತಾರೆಯರು ಹಾಗೂ ರಾಜಕಾರಣಿಗಳು ಈಗಾಗಲೇ ದೇಣಿಗೆ ನೀಡಿದ್ದಾರೆ.
ಪ್ರತಿ ರಾಜ್ಯವೂ ಸಂಗ್ರಹಿಸುತ್ತಿರುವ ರಿಲೀಫ್ ಫಂಡ್‌ಗೆ ಆಯಾ ಭಾಷೆಯ ಸಿನಿ ತಾರೆಯರು ದೇಣಿಗೆ ನೀಡುತ್ತಿದ್ದಾರೆ. ಈ ಬಗ್ಗೆಯೇ ಸಿನಿಮಾ ನಟರಿಬ್ಬರ ಅಭಿಮಾನಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆಯುವುದು ಸಾಮಾನ್ಯ. ಆದರೆ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ನಟರ ಅಭಿಮಾನಗಳು ಜಗಳವಾಡಿ, ಪ್ರಾಣ ಕಳೆದುಕೊಳ್ಳವ ಪರಿಸ್ಥತಿ ಎದುರಾಗಿದೆ.
undefined
ಪರಿಹಾರ ನಿಧಿಗೆ 50 ಲಕ್ಷ ನೀಡಿದ ರಜನಿಕಾಂತ್‌ರಿಂದ ಮತ್ತೊಂದು ಮಹತ್ವದ ಕೆಲಸ!
ಕೊರೋನಾ ವಿರುದ್ಧ ಹೋರಾಡಲು ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್ ಮತ್ತು ವಿಜಯ್ ದಳಪತಿ ದೇಣಿಗೆ ನೀಡಿದ್ದಾರೆ. ಆದರೀಗ ಇಂಥ ಒಳ್ಳೇ ಕೆಲಸವೇ ಅಭಿಮಾನಿ ಸಾವಿಗೆ ಕಾರಣವಾಗಿದೆ.
ಆಗಿದ್ದೇನು?
ಯಾವ ನಟ ಎಷ್ಟು ದೇಣಿಗೆ ನೀಡಿದ್ದಾನೆ ಎಂದು ವಿಜಯ್ ದಳಪತಿ ಹಾಗೂ ರಜನಿಕಾಂತ್ ಅಭಿಮಾನಿಗಳ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದೆ. ಕೈ ಕೈ ಮಿಸಲಾಯಿಸಿಕೊಳ್ಳುವ ಸ್ಥಿತಿ ತಲುಪಿದೆ. ಈ ಕಿತ್ತಾಟದಲ್ಲಿ ನಟ ವಿಜಯ್ ಅಭಿಮಾನಿ ಅಸುನೀಗಿದ್ದಾನೆ.
ರಜನೀಕಾಂತ್ ಅಭಿಮಾನಿ ದಿನೇಶ್ ಬಾಬು ಮತ್ತು ವಿಜಯ್ ದಳಪತಿ ಫ್ಯಾನ್ ಯುವರಾಜ್ ನೆರೆಹೊರೆಯವರಾಗಿದ್ದು, 'ನಿಮ್ಮ ಹೀರೋ ಕಡಿಮೆ ದೇಣಿಗೆ ನೀಡಿದ್ದಾರೆ,' ಎಂದು ವಿಜಯ್ ಅಭಿಮಾನಿ ಯುವರಾಜ್ ನೀಡಿದ ಹೇಳಿಕೆ ವಾದಕ್ಕೆ ಎಡೆ ಮಾಡಿಕೊಟ್ಟಿದೆ. ಲಾಕ್‌ಡೌನ್ ಇದ್ದರೂ ಎಲ್ಲಿಂದಲೋ ತಂದು, ಇಬ್ಬರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ದಿನೇಶ್ ಬಾಬು, ಯುವರಾಜ್‌ನನ್ನು ಬಲವಾಗಿ ತಳ್ಳಿದ ಕಾರಣಕ್ಕೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. 22 ವರ್ಷದ ಯುವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಲಾಕ್‌ಡೌನ್ ಉಲ್ಲಂಘನೆ ಹಾಗೂ ಕೊಲೆ ಆರೋಪದ ಮೇಲೆ ಪೊಲೀಸರು ದಿನೇಶ್ ಬಾಬುನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಸಾವಿನ ವಿಚಾರ ತಿಳಿಯುತ್ತಿದ್ದಂತೆ, ಕಾಲಿವುಡ್ ಚಿತ್ರರಂಗ ಬೆಚ್ಚಿ ಬಿದ್ದಿದೆ.
ವಿಜಯ್ ದಳಪತಿ 1.3 ಕೋಟಿಯನ್ನು PM-cares ಹಾಗೂ ಸಿಎಂ ರಿಲೀಫ್ ಫಂಡ್‌ಗೆ ನೀಡಿದ್ದಾರೆ. ಇನ್ನೊಂದೆಡೆ ರಜನಿಕಾಂತ್ 50 ಲಕ್ಷ ರೂ. ಸಿಎಂ ಫಂಡ್‌ಗೆ ದೇಣಿಗೆ ನೀಡಿದ್ದು, ನಿರ್ಗತಿಕರಿಗೆ ಹಾಗೂ ಅಗತ್ಯ ಇರುವವರಿಗೆ ಫುಡ್ ಕಿಟ್ ವಿತರಿಸಿದ್ದಾರೆ.
ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ ವಾರ್ ನಡೆಯೋದು ಕಾಮನ್. ಇರೋ ನಾಲ್ಕು ಸ್ಟಾರ್ ನಟರ ರಡುವೆ, ಅವರ ಅಭಿಮಾನಿಗಳು, ಇವರ ಮೇಲೆ, ಇವರ ಅಭಿಮಾನಿಗಳು ಅವರ ಮೇಲೆ ಗೂಬೆ ಕೂರಿಸುತ್ತಿರುತ್ತಾರೆ.
ಬಾಲಿವುಡ್ ಸಹ ಈ ವಾರ್‌ಗೆ ಹೊರತಾಗಿಲ್ಲ. ಅಕ್ಷಯ್ ಕುಮಾರ್ ಪಿಎಂ ಕೇರ್ಸ್ ಫಂಡ್‌ಗೆ 25 ಕೋಟಿ ರೂ. ದೇಣಿಗೆ ನೀಡಿ, ಈ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರಕ್ಕೆ ನೆರವಾದರು. ನಂತರ 3 ಕೋಟಿ ರೂ.ಗಳನ್ನು ಮುಂಬೈ ಮುನಿಸಿಪಾಲಿಟಿಗೂ ಕೊಟ್ಟರು. ಈ ಕಾರಣಕ್ಕೆ ಹಿರಿಯ ನಟ ಶತ್ರುಘ್ನ ಸಿನ್ಹಾ, 'ಬಲಗೈಯಲ್ಲಿ ದಾನ ಮಾಡಿದ್ದು, ಎಡಗೈಗೆ ಗೊತ್ತಾಗಬಾರದು. ಆದರೆ, ನಮ್ಮಲ್ಲಿ ಕೆಲವರು ತಾವು 25 ಕೋಟಿ ರೂ. ದಾನ ಮಾಡಿದ್ದನ್ನೇ ದೊಡ್ಡ ಸುದ್ದಿ ಮಾಡಲು ಯತ್ನಿಸುತ್ತಾರೆ...' ಎಂದು ಕುಹಕವಾಡಿದ್ದರು. ನಂತರ ಅಕ್ಷಯ್ ಅಭಿಮಾನಿಗಳ ಆಕ್ರೋಶಕ್ಕೆ ಭಯಗೊಂಡು, 'ನಾನು ಅಕ್ಷಯ್ ಕುಮಾರ್ ಅವರನ್ನು ಉದ್ದೇಶಿಸಿದ ಇಂಥ ಮಾತು ಆಡಿರಲಿಲ್ಲ,' ಎಂದು ಸಮಜಾಯಿಷಿ ಕೊಟ್ಟಿದ್ದನ್ನೂ ಇಲ್ಲಿ ಸ್ಮರಿಸಬಹುದು.