ನಟಿ ಸಾಯಿ ಪಲ್ಲವಿ ಅಮರನಾಥ ಯಾತ್ರೆ ಮಾಡಿದ್ದು ಹಿಂದೆ ಸುದ್ದಿಯಾಗಿತ್ತು. ಈಗ ಮತ್ತೆ ಅವರು ಹಿಮಾಲಯದ ಬೆಟ್ಟಗಳಲ್ಲಿ ಸುತ್ತಾಡುವ ಫೋಟೋ ವೈರಲ್ ಆಗಿದೆ. ನಟನೆ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದರಾ ಈ ರೌಡಿ ಬೇಬಿ ಅಂತ ಶಾಕ್ ಆಗಿದ್ದಾರೆ ಫ್ಯಾನ್ಸ್.
ಪಾತ್ರ ಹೇಗೇ ಇರಲಿ, ಅದಕ್ಕೆ ಜೀವ ತುಂಬಿ ಲೀಲಾಜಾಲವಾಗಿ ನಟಿಸೋದ್ರಲ್ಲಿ ಎತ್ತಿದ ಕೈ ನ್ಯಾಚ್ಯುರಲ್ ಬ್ಯೂಟಿ ಸಾಯಿ ಪಲ್ಲವಿ ಅವರದ್ದು. ಇಂಥಾ ಪ್ರತಿಭಾವಂತ ನಟಿ ಗಾರ್ಗಿ ಸಿನಿಮಾಕ್ಕಾಗಿ ಕನ್ನಡವನ್ನೂ ಕಲಿತು ಅಚ್ಚ ತೀರ್ಥಹಳ್ಳಿ ಭಾಷೆಯಲ್ಲಿ ಮಾತಾಡಿದ್ದು ಕನ್ನಡಿಗರನ್ನು ಮಾತ್ರ ಅಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರನ್ನೇ ದಂಗಾಗಿಸಿತ್ತು. ಇನ್ನು ನಮ್ಮ ಕನ್ನಡದಲ್ಲಿ ಎಷ್ಟೋ ನಟಿಯರು ಅದೆಷ್ಟೋ ಕಾಲದಿಂದ ಇಂಡಸ್ಟ್ರಿಯಲ್ಲಿದ್ದೂ ಅವರ ಪಾತ್ರಕ್ಕೆ ಮತ್ಯಾರೋ ಡಬ್ಬಿಂಗ್ ಮಾಡ್ತಿದ್ರು. ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡೋದು ಇವರ ವಿಶೇಷತೆ. ಅಷ್ಟೇ ಅಲ್ಲ, ಈ ನಟಿ ಅನುಶ್ರೀ ಶೋನಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಟ್ಟ 'ಉಳಿದವರು ಕಂಡಂತೆ' ಸಿನಿಮಾದ 'ಬೋ.. ಮಕ್ಳಾ' ಡೈಲಾಗ್ ವೈರಲ್ ಆಗಿತ್ತು. ಇನ್ನೊಂದೆಡೆ ಮಂಸೋರೆ ತಾನು ರಾಣಿ ಅಬ್ಬಕ್ಕ ಬಗ್ಗೆ ಸಿನಿಮಾವೊಂದನ್ನು ಮಾಡುತ್ತಿದ್ದು ಅದಕ್ಕೆ ಸಾಯಿ ಪಲ್ಲವಿ ಅವರನ್ನು ಕರೆಸುವ ಯೋಚನೆ ಇದೆ ಅಂದಿದ್ದರು.
ಈಗ ವಿಷ್ಯ ಅದಲ್ಲ. ಕಳೆದೊಂದು ತಿಂಗಳಿಂದ ಸಾಯಿ ಪಲ್ಲವಿ ರುದ್ರಾಕ್ಷಿ ಮಾಲೆ ಹಾಕ್ಕೊಂಡು ಹಿಮಾಲಯ ಬೆಟ್ಟ ಅಲೀತಿದ್ದಾರೆ. ತನ್ನ ಪೋಷಕರನ್ನು ಕರೆದುಕೊಂಡು ಅಮರನಾಥ ಯಾತ್ರೆ ಮಾಡಿದ್ದು ಒಂದು ಕಥೆ ಆದರೆ ಹಿಮಾಲಯದ ಬೆಟ್ಟ ಗುಡ್ಡಗಳಲ್ಲಿ ಕಳೆದು ಹೋಗಿದ್ದು ಮತ್ತೊಂದು ಕಥೆ. ಸಾಯಿ ಪಲ್ಲವಿ ಅಂಥಾ ಫೇಮಸ್ ನಟಿಯಾದರೂ ಸಾಮಾನ್ಯರಂತೆ ಸರಳ ಉಡುಪು ಧರಿಸಿ ಅಧ್ಯಾತ್ಮ ಪ್ರವಾಸ ಮಾಡಿದ್ದಾರೆ. ಸದ್ಯ ಅವರ ಬಗ್ಗೆ ಹಬ್ಬಿರೋ ರೂಮರ್ ಅಂದರೆ ಅವರು ಸದ್ಯದಲ್ಲೇ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರೆ ಅನ್ನೋದು. ಅದಕ್ಕೆ ಸಾಕ್ಷಿ ಅನ್ನುವಂತೆ ರೀಸೆಂಟಾಗಿ ಇವರು ಯಾವ ಸಿನಿಮಾಕ್ಕೂ ಸೈನ್ ಮಾಡಿದ್ದು ಗೊತ್ತಾಗಿಲ್ಲ. ಅವರ ಯಾವ ಹೊಸ ಸಿನಿಮಾವೂ ಅನೌನ್ಸ್ ಆಗಿಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಯಾಕೆ ಹೀಗಾಯ್ತು ಸಾಯಿ ಪಲ್ಲವಿ ಅವರಿಗೆ ಅವಕಾಶಗಳು ಬರುತ್ತಿಲ್ಲವಾ? ಅಥವಾ ಜನ ಅವರನ್ನು ಬ್ಯಾನ್ ಮಾಡಿದ್ದಾರೆ ಅಂತ ಚಿತ್ರರಂಗ ತಿಳ್ಕೊಂಡಿದೆಯಾ?
ಆಸ್ಪತ್ರೆ ಕಟ್ಟಿಸುತ್ತಿರುವ ಸಾಯಿ ಪಲ್ಲವಿ; ನಟನೆಗೆ ಗುಡ್ ಬೈ ಹೇಳುತ್ತಿರುವುದು ನಿಜವೇ?
ಬಹುಶಃ ವಿರಾಟ ಪರ್ವಂ ಸಿನಿಮಾ ರಿಲೀಸ್ ವೇಳೆ ಅವರು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಿರದಿದ್ದರೆ, ಇಷ್ಟೊತ್ತಿಗೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಿದ್ದರು ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ. ಬಹುಶಃ ಕಳೆದ ವರ್ಷ ಸಾಯಿಪಲ್ಲವಿ ಸಿನಿಮಾ ಜರ್ನಿಯಲ್ಲಿ ಅಗ್ನಿ ಪರೀಕ್ಷೆಯ ವರ್ಷ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ನಟಿ ತನ್ನ ಅಭಿಪ್ರಾಯವನ್ನು ನೇರವಾಗಿ ಹೇಳಿದ ಕಾರಣಕ್ಕೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ವಿವಾದಕ್ಕೆ ಈಡಾದರು. ಅಲ್ಲಿಯವರೆಗೆ ಇವರನ್ನು ದೇವತೆಯಂತೆ ಆರಾಧಿಸುತ್ತಿದ್ದ ಜನ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಕಲಾವಿದೆ ಅನ್ನೋದನ್ನೂ ಮರೆತು ಬಾಯಿಗೆ ಬಂದಂತೆ ಕಮೆಂಟ್ ಮಾಡಿದರು. ಟ್ರೋಲ್ ಮಾಡಿದರು. ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ್ದ ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಆಡಿದ್ದ ಒಂದು ಮಾತು ಅವರನ್ನು ಹಿಮ್ಮೆಟ್ಟಿಸಿತು. ಅವರ ವಿರಾಟಪರ್ವಂ ಸಿನಿಮಾಕ್ಕೆ ಬ್ಯಾನ್ ಕೂಗು ಕೇಳಿಬಂತು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು. ಈಕೆಯ ಸಿನಿಮಾಗಳನ್ನು ಜನ ನೋಡಲ್ಲ ಅಂತ ಗೊತ್ತಾಗಿದ್ದೇ ಈಕೆಗೆ ಬರುವ ಆಫರ್ ಕಡಿಮೆ ಆದವು.
ಒಬ್ಬರನ್ನೊಬ್ಬರು ಕೊಲ್ಲಬೇಡಿ ಎನ್ನುವುದು ಹೇಗೆ ಅಪರಾಧವಾಗುತ್ತೆ?, ಸಾಯಿ ಪಲ್ಲವಿ ಪ್ರಶ್ನೆ
ಸಾಯಿ ಪಲ್ಲವಿ ಹೇಳಿದ್ದೇನು?
'ಕಾಶ್ಮೀರ ಪಂಡಿತರ ಹತ್ಯೆ ಮತ್ತು ಹಸು ಕಳ್ಳ ಸಾಗಣೆ ಮಾಡಿದ ಎಂದು ಅನುಮಾನಿಸಿ, ಚಾಲಕನನ್ನು ಹತ್ಯೆ ಮಾಡುವುದು ಎರಡೂ ಒಂದೇ,' ಎಂದು ಹೇಳಿದ್ದರು. ಹಿಂಸೆ ಯಾವುದೇ ರೂದಲ್ಲಿದ್ದರೂ ಅದು ಮಹಾ ಪಾಪ ಎನ್ನೋ ಮೂಲಕ ದೊಡ್ಡ ಮಟ್ಟದ ವಿವಾದವನ್ನು ಸಾಯಿ ಪಲ್ಲವಿ ತಲೆ ಮೇಲೆ ಎಳೆದು ಕೊಂಡಿದ್ದರು. ಪರ ವಿರೋಧ ಚರ್ಚೆಯ ನಡುವೆಯೂ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅನೇಕರು ಸಾಯಿ ಪಲ್ಲವಿ ಪರ ಇದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್ ಟ್ಯಾಕ್ ಹಾಕಿ ಬೆಂಬಲಿಸಿದ್ದರು.
ಸದ್ಯಕ್ಕೀಗ ಸಾಯಿ ಪಲ್ಲವಿ ಹಿಮಾಲಯದಿಂದ ಮರಳಿದ್ದಾರೆ. ಅಧ್ಯಾತ್ಮ ಪ್ರವಾಸ ಅವರ ವೈರಾಗ್ಯದ ಸಂಕೇತ ಅಂತ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸಾಯಿ ಪಲ್ಲವಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ ಮಾತು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇಂಥಾ ಪ್ರತಿಭಾವಂತ ನಟಿಯನ್ನು (Talented Actress) ಕಳೆದುಕೊಂಡರೆ ಚಿತ್ರರಂಗಕ್ಕೆ ಬಹುದೊಡ್ಡ ಲಾಸ್ ಅಂತ ಬಲ್ಲವರು ಮಾತಾಡುತ್ತಿದ್ದಾರೆ. ಸದ್ಯಕ್ಕೆ ಸಾಯಿ ಪಲ್ಲವಿ ಈ ಬಗ್ಗೆ ಏನೂ ಹೇಳಿಲ್ಲ. ಹೇಳೋ ಪ್ರಮೇಯವೂ ಬಂದಿಲ್ಲ.