ಅನ್ನಪೂರ್ಣಿ ಚಿತ್ರ ಫುಡ್ ಜಿಹಾದ್ ಆರೋಪ ಹೊತ್ತ ಬೆನ್ನಲ್ಲೇ ನಟಿ ನಯನತಾರಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ಕ್ಷಮಾಪಣಾ ಪತ್ರದಲ್ಲಿ ಅವರು ಹೇಳಿದ್ದೇನು?
ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ. ದೇಶಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡುವ ಉದ್ದೇಶ ನನಗೂ ಇರಲಿಲ್ಲ, ಅನ್ನಪೂರ್ಣಿ ಚಿತ್ರತಂಡಕ್ಕೂ ಇರಲಿಲ್ಲ. ಇದರಿಂದ ಹಲವರ ಭಾವನೆಗೆ ಧಕ್ಕೆ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಸಕಾರಾತ್ಮಕ ಸಂದೇಶ ಹಂಚಿಕೊಳ್ಳುವ ಪ್ರಯತ್ನದಲ್ಲಿ ಅಜಾಗರೂಕತೆಯಿಂದ ನೋವುಂಟು ಮಾಡಿರಬಹುದು. ಪಾಸಿಟಿವ್ ಸಂದೇಶ ತಲುಪಿಸುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಗೊತ್ತಿಲ್ಲದೆ ನಾವು ನಿಮ್ಮ ಭಾವನೆಗಳನ್ನು ನೋಯಿಸಿದ್ದೇವೆ. ಚಿತ್ರಮಂದಿರಗಳಲ್ಲಿ ಸೆನ್ಸಾರ್ಗೆ ಒಳಪಟ್ಟಿದ್ದ ಸಿನಿಮಾವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದನ್ನು ನಾನು ನಿರೀಕ್ಷಿಸಿರಲಿಲ್ಲ...
ಹೀಗೆಂದು ನಟಿ ನಯನತಾರಾ ಬಹಿರಂಗವಾಗಿ ಕ್ಷಮಾಪಣೆ ಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು, ಜೈ ಶ್ರೀ ರಾಮ್ ಎಂದು ಶುರು ಮಾಡುತ್ತಲೇ ಕ್ಷಮೆ ಕೋರಿದ್ದಾರೆ. ನಾನು ಭಾರವಾದ ಹೃದಯದಿಂದ ಮತ್ತು ಸತ್ಯದ ಆಧಾರದ ಮೇಲೆ ಈ ಬರಹ ಬರೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ‘ಅನ್ನಪೂರ್ಣಿ’ ಚಿತ್ರ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುತ್ತೇನೆ ಎನ್ನುವ ಮೂಲಕ ನಟಿ ಕ್ಷಮೆ ಕೋರಿದ್ದಾರೆ. ಸಿನಿಮಾ ಮಾಡುವುದು ಎಂದರೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರವಲ್ಲ ಸಮಾಜಕ್ಕೆ ಒಂದು ಸಂದೇಶ ತಿಳಿಸುವ ಉದ್ದೇಶವೂ ಇರುತ್ತದೆ. ‘ಅನ್ನಪೂರ್ಣಿ’ ಚಿತ್ರವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಲಾಗಿದೆ. ನಮ್ಮ ನಿಜ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸುವುದೇ ಈ ಸಿನಿಮಾ ಉದ್ದೇಶ ಎಂದು ಅವರು ಹೇಳಿದ್ದಾರೆ.
ಅನ್ನಪೂರ್ಣಿ ಫುಡ್ ಜಿಹಾದ್ ಆರೋಪ: ರಜನೀಕಾಂತ್ ಇದ್ರೆ ಹೀಗೇ ಆಗ್ತಿತ್ತಾ? ಚಿತ್ರದ ಪರ ಬ್ಯಾಟಿಂಗ್!
ಅಂದಹಾಗೆ, ನಯನತಾರಾ ಅಭಿನಯದ ಅನ್ನಪೂರ್ಣಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರಲ್ಲಿ ಫುಡ್ ಜಿಹಾದ್ ಇದೆ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಹೆಣ್ಣಿಗೆ ಅಡುಗೆ ಮನೆ ಎನ್ನುವುದೇ ಸರ್ವಸ್ವ ಅಲ್ಲ ಎನ್ನುವ ಆಶಯ ಈ ಚಿತ್ರದಲ್ಲಿ ಇದೆ ಎನ್ನುತ್ತಲೇ ಶ್ರೀರಾಮಚಂದ್ರ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ಆರೋಪ ಈ ಚಿತ್ರ ಹೊತ್ತಿದೆ. ಸಿನಿಮಾದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಈ ಚಿತ್ರದ ಸಹ ನಿರ್ಮಾಪಕರಾಗಿರುವ ಜೀ ಎಂಟರ್ಟೇನ್ಮೆಂಟ್ ಕ್ಷಮೆ ಕೋರಿತ್ತು. ಈ ಕುರಿತು ವಿಶ್ವ ಹಿಂದೂ ಪರಿಷತ್ಗೆ ಕ್ಷಮಾಪಣಾ ಪತ್ರವನ್ನು ಸಲ್ಲಿಸಲಾಗಿತ್ತು. ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ನಂತರ ಚಿತ್ರವನ್ನು ನೆಟ್ಫ್ಲಿಕ್ಸ್ನಿಂದಲೂ ತೆಗೆದುಹಾಕಲಾಗಿದೆ. ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದೂ ತಂಡ ಹೇಳಿದ ಬೆನ್ನಲ್ಲೇ ಚಿತ್ರದ ಸ್ಟ್ರೀಮಿಂಗ್ ಕೂಡ ರದ್ದಾಗಿತ್ತು.
ಇದು ಒಂದೆಡೆಯಾದರೆ, ನೆಟ್ಫ್ಲಿಕ್ಸ್ನಿಂದ ಚಿತ್ರವನ್ನು ತೆಗೆದುಹಾಕಿರುವ ಬಗ್ಗೆ ವಿವಿಧ ನಿರ್ದೇಶಕ, ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಕುರಿತು ನಿರ್ದೇಶಕ ಅಮೀರ್ ಅವರು, ಒಂದು ವೇಳೆ ಈ ಚಿತ್ರದಲ್ಲಿ ರಜಿನೀಕಾಂತ್ ಅವರು ನಟಿಸಿದ್ದರೆ, ಹೀಗೆಯೇ ನೆಟ್ಫ್ಲಿಕ್ಸ್ನಿಂದ ತೆಗೆದು ಹಾಕಲಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ. OTT ನಲ್ಲಿ ಸೃಜನಶೀಲತೆ ಸ್ವಾತಂತ್ರ್ಯವು ಒಳ್ಳೆಯದೇ. ಆದರೆ (ನೆಟ್ಫ್ಲಿಕ್ಸ್ನಲ್ಲಿ ತೆಗೆದು ಹಾಕುವಷ್ಟು) ಅತಿಯಾದ ಸ್ವಾತಂತ್ರ್ಯ ಇರುವುದು ಒಳ್ಳೆಯದಲ್ಲ ಎಂದು ನಟ ಮತ್ತು ನಿರ್ಮಾಪಕ ಆರ್.ಪ್ರತಿಬನ್ ಅವರು ಹೇಳಿದ್ದಾರೆ. ಇನ್ನೋರ್ವ ನಿರ್ದೇಶಕ ಮನ್ಸೀ ರೇ ಅವರೂ ಈ ಚಿತ್ರವನ್ನು ವಾಪಸ್ ಪಡೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಒಮ್ಮೆ ಚಿತ್ರವನ್ನು ಬಿಡುಗಡೆ ಮಾಡಿದರೆ ಅದನ್ನು ವಾಪಸ್ ಪಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿ ಕಾರಿದ್ದಾರೆ. ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್ಷಿಪ್ಗೆ ಯಾವುದೇ ಜಾಗ ಇಲ್ಲ ಎಂದು ಇನ್ನೋರ್ವ ನಿರ್ಮಾಪಕ ಹಾಗೂ ಗೀತರಚನೆಕಾರ ಅಮುಧಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಫ್ಐಆರ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್ ಕೂಡ ರದ್ದು