
ಮುಂಬೈ (ಅ.11) ರಿಷಬ್ ಶೆಟ್ಟಿ ಕಾಂತಾರಾ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಸೂಪರ್ ಹಿಟ್ ಆಗಿದೆ. 600 ಕೋಟಿ ರೂಪಾಯಿಗೂ ಅಧಿಕ ಸಂಗ್ರಹ ಮಾಡಿ ಮುನ್ನುಗ್ಗುತ್ತಿದೆ. ಕರಾವಳಿಯ ಭೂತಾರಾಧನೆ, ನಂಬಿಕೆ, ಇತಿಹಾಸ, ಜನಪದ ಸೇರಿದಂತೆ ಕನ್ನಡ ನಾಡಿನ ಕತೆಯನ್ನು ಜಗತ್ತಿಗೆ ಸಾರಿ ಅದ್ಧೂರಿ ಯಶಸ್ಸು ಸಾಧಿಸಿದ್ದಾರೆ. ಅದ್ಭುತ ದೃಶ್ಯ ಕಾವ್ಯ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ. ಇದೀಗ ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಹೂಮಳೆ ಸುರಿಸಿ ರಿಷಬ್ ಶೆಟ್ಟಿಯನ್ನು ಸ್ವಾಗತಿಸಿದ್ದಾರೆ. ಅತ್ಯುತ್ತಮ ಸಿನಿಮಾ ನೀಡಿದ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಿದ್ದಾರೆ.
ಕಳೆದೆರಡು ದಿನದಿಂದ ಮುಂಬೈನಲ್ಲಿರುವ ರಿಷಬ್ ಶೆಟ್ಟಿ ಹಾಗೂ ಕಾಂತಾರಾ ಚಾಪ್ಟರ್ 1 ತಂಡಕ್ಕೆ ಅಭಿಮಾನಿಗಳು ಪ್ರೀತಿ ತೋರಿಸಿದ್ದಾರೆ. ಕಾಂತಾರಾ ಚಾಪ್ಟರ್ 1 ಸಿನಿಮಾ ಸತತ ಪ್ರದರ್ಶನ ಕಾಣುತ್ತಿರುವ ಮುಂಬೈನ ಗೈಟಿ ಗ್ಯಾಲಕ್ಸಿ ಥಿಯೇಟರ್‌ಗೆ ಆಗಮಿಸಿದ ರಿಷಬ್ ಶೆಟ್ಟಿ ಅಭಿಮಾನಿಗಳು ಹೂಮಳೆಯ ಸ್ವಾಗತ ನೀಡಿದ್ದಾರೆ. ಕಾರಿನ ಸನ್‌ರೂಫ್ ಮೂಲಕ ನಿಂತು ಅಭಿಮಾನಿಗಳತ್ತ ಕೈಗಮುಗಿದು ಧನ್ಯವಾದ ಹೇಳಿದ ರಿಷಬ್ ಶೆಟ್ಟಿಗೆ ಹೂವಿನ ಸ್ವಾಗತ ನೀಡಿದ್ದಾರೆ. ರಿಷಬ್ ಶೆಟ್ಟಿ ಹೂವಿನ ಮಳೆಯಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಾರೆ. ರಿಷಬ್ ಶೆಟ್ಟಿ ನಿಂತಿದ್ದ ಕಾರಿನ ಒಳಗೂ ಹೂವು ತುಂಬಿಕೊಂಡಿದೆ.
ರಿಷಬ್ ಶೆಟ್ಟಿ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ರಿಷಬ್ ಶೆಟ್ಟಿಯನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಇದರಿಂದ ರಿಷಬ್ ಶೆಟ್ಟಿ ವಾಹನ ಸರಾಗವಾಗಿ ಸಾಗಲು ಸಾಧ್ಯವಾಗಲಿಲ್ಲ. ಇತ್ತ ಅಭಿಮಾನಿಗಳನ್ನು ನಿಯತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಗ್ಯಾಲಕ್ಸಿ ಥಿಯೇಟರ್ ಮುಂಭಾಗದ ರಸ್ತೆಯಲ್ಲಿ ಸಾಗಿದ ಈ ಮೆರಣಿಗೆಯುದಕ್ಕೂ ಅಭಿಮಾನಿಗಳು ರಿಷಬ್ ಶೆಟ್ಟಿಗೆ ಹೂವಿನ ಸ್ವಾಗತ ನೀಡಿದ್ದಾರೆ. ಇದರ ನಡುವೆ ಕೆಲ ಅಭಿಮಾನಿಗಳು ರಿಷಬ್ ಶೆಟ್ಟಿ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಹಲವರು ರಿಷಬ್ ಶೆಟ್ಟಿ ಕೈಕುಲುಕಿ ಸಂಭ್ರಮಿಸಿದ್ದಾರೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ರತಿ ದಿನ ಅದ್ಧೂರಿ ಕಲೆಕ್ಷನ್ ಮಾಡುತ್ತಿದೆ. ದೇಶ ಹಾಗೂ ವಿದೇಶದಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಸರಿಸುಮಾರು 600 ಕೋಟಿ ರೂಪಾಯಿ ಸಂಗ್ರಹಿಸಿದೆ. ನಾಳೆ ಭಾನುವಾರವಾಗಿರುವ ಕಾರಣ, ಮತ್ತಷ್ಟು ಕಲೆಕ್ಷನ್ ದಾಖಲೆ ಮಾಡಲಿದೆ. ಇಷ್ಟೇ ಅಲ್ಲ ಹಲವು ದಾಖಲೆ ಮುರಿದಿರುವ ಕಾಂತಾರಾ ಚಾಪ್ಟರ್ 1 ಸಿನಿಮಾ ಭಾರತೀಯ ಸಿನಿಮಾದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ಕಳೆದ ಮೂರು ವರ್ಷಗಳಿಂದ ಚಿತ್ರೀಕರಣ ನಡೆಸಿ ಬಿಡುಗಡೆ ಮಾಡಿದೆ. ಕುಂದಾಪುರದ ಕೆರಾಡಿಯಲ್ಲೇ ಬಹುತೇಕ ಸಿನಿಮಾ ಶೂಟಿಂಗ್ ಮಾಡಿದೆ. ಕಾಂತಾರಾ ಚಾಪ್ಟರ್ 1 ಸಿನಿಮಾ 125 ಕೋಟಿ ರೂಪಾಯಿ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಫಿಲ್ಮಂ ನಿರ್ಮಾಣದ ಕಾಂತಾರಾ ಚಾಪ್ಟರ್ 1 ಸಿನಿಮಾ, 2022ರಲ್ಲಿ ಬಿಡುಗಡೆಯಾದ ಕಾಂತಾರಾ ಸಿನಿಮಾದ ಪ್ರೀಕ್ವೆಲ್ ಆಗಿದೆ. 2022ರಲ್ಲಿ ಬಿಡುಗಡೆಯಾದ ಕಾಂತಾರಾ ಸಿನಿಮಾ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.