ಒಬ್ಬರ ಹಿಂದೆ ಮತ್ತೊಬ್ಬ ನಟರು ಇದೀಗ ಅರೆಸ್ಟ್ ಆಗುತ್ತಿದ್ದಾರೆ. ಕಿರುಕುಳ ಆರೋಪ, ಮೀಟೂ ಪ್ರಕರಣದಲ್ಲಿ ಸಿಲುಕಿರುವ ಮಲೆಯಾಳಂ ಸಿನಿಮಾ ಇಂಡಸ್ಟ್ರಿ ಪ್ರಮುಖ ನಟರು, ನಿರ್ದೇಶಕರು ಅರೆಸ್ಟ್ ಆಗುತ್ತಿದ್ದಾರೆ. ಇದೀಗ ಎಡವೇಳ ಬಾಬು ಅರೆಸ್ಟ್ ಆಗಿದ್ದಾರೆ.
ತಿರುವನಂತಪುರಂ(ಸೆ.25) ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಿರುಕುಳ, ಮೀಟೂ ಪ್ರಕರಣ ಕುರಿತು ಇದೀಗ ದೇಶಾದ್ಯಂತ ಹೋರಾಟಗಳು, ಆಂದೋಲನ ಆರಂಭಗೊಂಡಿದೆ. ಕೇರಳದಲ್ಲಿ ಜಸ್ಟೀಸ್ ಹೇಮಾ ಕಮಿಟಿ ನೀಡಿದ ವರದಿ ಬಳಿಕ ಮಲೆಯಾಳಂ ಸಿನಿ ಕ್ಷೇತ್ರದಲ್ಲಿ ಬಿರುಗಾಳಿ ಎದ್ದಿದೆ. ನಟಿಯರು, ಮಹಿಳೆಯರು ಪ್ರಮುಖರ ವಿರುದ್ಧ ಕಿರುಕುಳ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಲು ರಚಿಸಿರುವ ಎಸ್ಐಟಿ ತಂಡ ಒಬ್ಬರ ಹಿಂದೆ ಒಬ್ಬರನ್ನು ಅರೆಸ್ಟ್ ಮಾಡುತ್ತಿದೆ. ನಿನ್ನೆ ಕೇರಳದ ಖ್ಯಾತ ನಟ, ಶಾಸಕ ಮುಕೇಶ್ ಬಂಧನ ಮಾಡಿದ ಪೊಲೀಸರು ಇದೀಗ ನಟ ಹಾಗೂ ಅಮ್ಮಾ ಸಂಘಟನೆ ಮಾಜಿ ಕಾರ್ಯದರ್ಶಿ ಎಡವೇಳ ಬಾಬುವನ್ನು ಅರೆಸ್ಟ್ ಮಾಡಲಾಗಿದೆ.
ಹೇಮಾ ಕಮಿಟಿ ವರದಿ ಬಳಿಕ ನಟಿಯೊಬ್ಬರು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಬಲಾತ್ಕಾರ ಪ್ರಕರಣ ದಾಖಲಿಸಿದ್ದರು. ಮಲೆಯಾಳಂ ಕಲಾವಿಧರ ಸಂಘಟನೆ ಅಮ್ಮಾ ಕಾರ್ಯದರ್ಶಿಯಾಗಿದ್ದ ಬಾಬು ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಅಮ್ಮಾ ಸಂಘಟನೆಯ ಸದಸ್ಯತ್ವ ಪಡೆಯುವ ಸಲುವಾಗಿ ನಟನ ಮನೆಗೆ ತೆರಳಿದಾಗ ಕಿರುಕುಳ ನೀಡಿದ್ದಾರೆ ಎಂದು ನಟಿ ದೂರು ನೀಡಿದ್ದರು. ಇದಕ್ಕೆ ಕೆಲ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು.
ಬಲಾತ್ಕಾರ ಪ್ರಕರಣದಲ್ಲಿ ಖ್ಯಾತ ನಟ, ಶಾಸಕ ಮುಕೇಶ್ ಅರೆಸ್ಟ್, ಸತತ 3 ಗಂಟೆ ಪೊಲೀಸರ ಡ್ರಿಲ್!
ಈ ದೂರು ಹಾಗೂ ಸಾಕ್ಷ್ಯಗಳ ಆಧಾರದಲ್ಲಿ ಇದೀಗ ಎಸ್‌ಐಟಿ ತಂಡ ಎಡವೇಳ ಬಾಬು ಅರೆಸ್ಟ್ ಮಾಡಿದೆ. ಆದರೆ ದೂರು ದಾಖಲಾದ ಬೆನ್ನಲ್ಲೇ ಎಡವೇಳ ಬಾಬು ಎರ್ನಾಕುಲಂ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಹೀಗಾಗಿ ಪೊಲೀಸರು ಬಾಬು ಅರೆಸ್ಟ್ ಮಾಡಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸೆ.24ರಂದು ಮಲೆಯಾಳಂ ಖ್ಯಾತ ನಟ ಹಾಗೂ ಹಾಲಿ ಶಾಸಕ ಮುಕೇಶ್ ಬಂಧನವಾಗಿತ್ತು. ಮುಕೇಶ್ ಕೂಡ ನಿರೀಕ್ಷಣಾ ಜಾಮೀನು ಪಡೆದ ಕಾರಣ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು. ಮುಕೇಶ್ ವಿರುದ್ದವೂ ಬಲತ್ಕಾರ ಪ್ರಕರಣ ದಾಖಲಾಗಿದೆ. ಇತ್ತ ಮತ್ತೊರ್ವ ಖ್ಯಾತ ನಟ ಸಿದ್ದಿಕ್ಕಿ ವಿರುದ್ಧವೂ ಮೀಟೂ ಪ್ರಕರಣ ದಾಖಲಾಗಿದೆ. ಸಿದ್ದಿಕ್ಕಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಿದ್ದಿಕ್ಕಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ನಟ ಸಿದ್ದಿಕ್ಕಿ ನಾಪತ್ತೆಯಾಗಿದ್ದಾರೆ.
ಸಿದ್ದಿಕ್ಕಿ ಪತ್ತೆ ಹಚ್ಚಿ ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ. ಹುಡುಕಾಟ ತೀವ್ರಗೊಳಿಸಿರುವ ಪೊಲೀಸರು ಬಂಧನಕ್ಕೆ ತಯಾರಿ ಮಾಡಿದ್ದಾರೆ ಕೇರಳದ ಕೆಲ ಪ್ರಮುಖ ನಟರ ಮೇಲೆ , ನಿರ್ದೇಶಕರ ಮೇಲೆ ದೂರು ದಾಖಾಗಿದೆ. ಈ ಪೈಕಿ ನಟ ಜಯಸೂರ್ಯ, ಮಣಿಯನ್‌ಪಿಳ್ಳ ರಾಜು, ನಿರ್ದೇಶಕ ರಂಜಿತ್ ಸೇರಿದಂತೆ ಹಲವರಿದ್ದಾರೆ. ಇವರಿಗೂ ಇದೀಗ ಆತಂಕ ಹೆಚ್ಚಾಗಿದೆ. ಹೇಮಾ ಕಮಿಟಿ ವರದಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಅಮ್ಮಾ ಸಂಘಟನೆಯ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ, ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಸೌಮ್ಯ!