ಕುಡುಕ ಪ್ರಯಾಣಿಕನಿಂದ ಮಾಲಿವುಡ್ ನಟಿ ದಿವ್ಯ ಪ್ರಭಾ ಅನುಭವಿಸಿದ ಹಿಂಸೆಯನ್ನು ವಿವರಿಸಿದ್ದು, ವಿಮಾನ ಸಿಬ್ಬಂದಿ ನಡೆದುಕೊಂಡ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ನಟಿ ದಿವ್ಯಪ್ರಭಾ ಇತ್ತೀಚೆಗೆ ಮುಂಬೈನಿಂದ ಕೊಚ್ಚಿಗೆ ವಿಮಾನದಲ್ಲಿ ಹೋದ ಸಮಯದಲ್ಲಿ ತಮಗೆ ಕುಡುಕ ಪ್ರಯಾಣಿಕನಿಂದ ಆದ ಕಿರುಕುಳದ ಆಘಾತಕಾರಿ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿರುವ ನಟಿ, ಸಹ-ಪ್ರಯಾಣಿಕನಿಂದ ಕಿರುಕುಳಕ್ಕೊಳಗಾದದ್ದನ್ನು ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 9, ಸೋಮವಾರ ಈ ಘಟನೆ ನಡೆದಿದ್ದು, ನಟಿ ಇದೀಗ ಅದನ್ನು ವಿವರಿಸಿದ್ದಾರೆ ಹಾಗೂ ವಿಮಾನದ ಸಿಬ್ಬಂದಿ ಹೇಗೆ ಇದನ್ನು ಕೇರ್ಲೆಸ್ ಆಗಿ ತೆಗೆದುಕೊಂಡರು ಎನ್ನುವುದನ್ನೂ ನಟಿ ವಿಷಾದದಿಂದ ಹೇಳಿದ್ದಾರೆ. ಗಗನ ಸಖಿಗೆ ತಾವು ದೂರು ನೀಡಿದಾಗ ಅವರು ಹೇಗೆ ವರ್ತಿಸಿದರು ಎಂಬುದನ್ನು ನಟಿ ವಿವರಿಸಿದ್ದಾರೆ.
ದಿವ್ಯಪ್ರಭಾ ಅವರು ಮುಂಬೈನಿಂದ ಕೊಚ್ಚಿಗೆ ಏರ್ ಇಂಡಿಯಾ ಫ್ಲೈಟ್ AI 681 ನಲ್ಲಿ ಹೋದಾಗ ಈ ಘಟನೆ ನಡೆದಿದೆ. ರಾತ್ರಿಯ ವೇಳೆ ಪ್ರಯಾಣ ಮಾಡುವ ಸಮಯದಲ್ಲಿ ಕುಡಿದು ಬಂದ ಪ್ರಯಾಣಿಕನೊಬ್ಬ ಇವರ ಪಕ್ಕ ಕುಳಿತಿದಿದ್ದಾನೆ. ಆತ ತಮಗೆ ತೀವ್ರ ಕಿರುಕುಳ ನೀಡಿದ ಎಂದು ನಟಿ ಬಹಿರಂಗಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಅವರು ಅಧಿಕಾರಿಗಳಿಗೆ ಕೇಳಿಕೊಂಡಿರುವ ಜೊತೆಗೆ, ವಿಮಾನಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಒತ್ತಾಯಿಸಿದ್ದಾರೆ.
ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್ ಕಪೂರ್ ಈ ಪರಿ ರೊಮ್ಯಾನ್ಸ್! ಉಫ್ ಎಂದ ಫ್ಯಾನ್ಸ್...
ಪಕ್ಕದಲ್ಲಿ ಕುಳಿತ ಪ್ರಯಾಣಿಕ ತೀವ್ರ ಸ್ವರೂಪದಲ್ಲಿ ನನಗೆ ತೊಂದರೆ ಕೊಡಲು ಶುರು ಮಾಡಿದ್ದ. ಆ ಸಮಯದಲ್ಲಿ ನಾನು ಗಗನ ಸಖಿಯನ್ನು ಕರೆದು ಈ ವಿಷಯ ತಿಳಿಸಿದೆ. ಆದರೆ ಅಚ್ಚರಿ ಎಂದರೆ, ಅವರು ಆ ಪ್ರಯಾಣಿಕನ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು, ನನ್ನ ಸೀಟನ್ನು ಬದಲಾಯಿಸಿದರು. ಇದು ನನಗೆ ಶಾಕ್ ಕೊಟ್ಟ ವಿಚಾರ ಎಂದಿದ್ದಾರೆ ನಟಿ. ಟೇಕಾಫ್‌ಗೆ ಸ್ವಲ್ಪ ಮೊದಲು ನನ್ನ ಸೀಟನ್ನು ಮತ್ತೊಂದು ಸೀಟಿಗೆ ಬದಲಾಯಿಸಲಾಯಿತು. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಸಮಸ್ಯೆಯನ್ನು ವಿಮಾನ ನಿಲ್ದಾಣ ಮತ್ತು ಏರ್‌ಲೈನ್ ಅಧಿಕಾರಿಗಳಿಗೆ ವರದಿ ಮಾಡಲಾಯಿತು. ದೂರು ಕೊಡಲು ಅಲ್ಲಿಗೆ ಹೋದಾಗ, ವಿಮಾನ ನಿಲ್ದಾಣದ ಪೊಲೀಸ್ ಸಹಾಯ ಪೋಸ್ಟ್‌ಗೆ ಹೋಗುವಂತೆ ಸೂಚಿಸಲಾಯಿತು. ಇದನ್ನು ಸುಮ್ಮನೇ ಬಿಡದ ನಾನು, ಕೇರಳ ಪೊಲೀಸರಿಗೆ ದೂರು ನೀಡಿದ್ದೇನೆ, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ ಎಂದಿದ್ದಾರೆ ನಟಿ.
ಪ್ರಯಾಣಿಕರಿಗೆ ಹೀಗೆಲ್ಲಾ ಸಮಸ್ಯೆ ಆಗುತ್ತಿದ್ದರೂ ಆ ಪ್ರಯಾಣಿಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಬದಲಿಗೆ ದೂರು ಕೊಡಲು ಅಲ್ಲಿ, ಇಲ್ಲಿ ನಾನೇ ಅಲೆದಾಡುವ ಸ್ಥಿತಿ ಬಂತು. ಆರೋಪಿಯನ್ನು ಡಿಬೋರ್ಡಿಂಗ್ ಮಾಡಿ ಕಿರುಕುಳದ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ವಿಮಾನ ನಿಲ್ದಾಣದ ಅಧಿಕಾರಿಗಳ ಕರ್ತವ್ಯವಾಗಿತ್ತು. ಅದನ್ನು ಬಿಟ್ಟು ನನ್ನ ಸೀಟು ಬದಲಾಯಿಸಿ ಆ ವ್ಯಕ್ತಿಯ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದೇ ಇರುವುದು ಶೋಚನೀಯ ಎಂದಿದ್ದಾರೆ ನಟಿ.
ವಿಮಾನಯಾನ ಸಿಬ್ಬಂದಿಯ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಲಾದರೂ ಆ ವ್ಯಕ್ತಿ ಯಾರೆಂದು ಗುರುತಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ. ಹೀಗೆ ಕುಡಿದು ಬರುವವರನ್ನು ಯಾರ ತಪಾಸಣೆಯೂ ಇಲ್ಲದೇ ವಿಮಾನದ ಒಳಕ್ಕೆ ಬಿಡುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ಪ್ಯಾಲೆಸ್ತೀನ್ ಉಗ್ರರ ಗುಂಡಿಗೆ ನಾಗಿನ್ ಸೀರಿಯಲ್ ಖ್ಯಾತಿಯ ನಟಿ ಮಧುರಾ ಸಂಬಂಧಿಕರ ಇಡೀ ಕುಟುಂಬ ಬಲಿ!