
ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಮಿಂಚಿದ್ದರು. ದೊಡ್ಡ ಮಟ್ಟದ ಪ್ರಚಾರಗಳಿಂದ ಭಾರಿ ಸದ್ದು ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ ಇಷ್ಟು ದೊಡ್ಡ ಮಟ್ಟದ ಹಣ ಹೂಡಲು ಪರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್‌ಗೆ ಹೇಗೆ ಸಾಧ್ಯವಾಯಿತು ಎನ್ನುವ ಅನುಮಾನದ ಮೇರೆಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ಇದೀಗ ಪುರಿ ಮತ್ತು ಚಾರ್ಮಿ ಇಬ್ಬರೂ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಲೈಗರ್ ಸಿನಿಮಾಗೆ ವಿದೇಶದಿಂದ ಹಣ ಹರಿದು ಬಂದಿರುವ ಅನುಮಾನ ವ್ಯಕ್ತವಾಗಿದ್ದು ಹಣ ವರ್ಗಾವಣೆ ನಿಯಮ ಉಲ್ಲಂಘನೆಯಾಗಿರುವ ಆರೋಪದ ಮೇರೆಗೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಗುರುವಾರ (ನವೆಂಬರ್ 17) ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇಬ್ಬರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿದ್ದರು. ಹಲವು ಗಂಟೆಗಳ ಕಾಲ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಲೈಗರ್ ಸಿನಿಮಾಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲಾಗಿತ್ತು. ಅದರಲ್ಲೂ ಸಿನಿಮಾದಲ್ಲಿ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಕೂಡ ನಟಿಸಿದ್ದರು. ಟೈಸನ್ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆದಿತ್ತು. ಇಡೀ ತಂಡ ಅಮೆರಿಕಾಗೆ ಹೋಗಿತ್ತು. ಟೈಸನ್ ಶೂಟಿಂಗ್‌ಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿತ್ತು ಸಿನಿಮಾತಂಡ. ಇಡಿ ವಿಚಾರಣೆ ಬಗ್ಗೆ ಪುರಿಜಗನ್ನಾಥ್ ಅಥವಾ ಚಾರ್ಮಿ ಕೌರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಲೈಗರ್' ಹೀನಾಯ ಸೋಲು; ನಿರ್ದೇಶಕ ಪುರಿ ಜಗನ್ನಾಥ್‌ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಟಿಸಿದ ಲೈಗರ್ ಸಿನಿಮಾದ ಸೋಲಿನ ಬಳಿಕ ವಿತರಕರು, ಪ್ರದರ್ಶಕರು ನಷ್ಟದ ಹಣ ಭರಿಸುವಂತೆ ಬೆದರಿಕೆ ಹಾಕುತ್ತಿದ್ದಾರೆ, ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಪುರಿ ಜಗನ್ನಾಥ್ ಆರೋಪ ಮಾಡಿದ್ದರು. ಆದರೆ ಯಾವ ವಿತರಕರು ಬೆದರಿಕೆ ಹಾಕಿಲ್ಲ, ನಷ್ಟ ಭರಿಸಿಕೊಡುವಂತೆ ಹಿಂದೆ ಬಿದ್ದಿಲ್ಲ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದ್ದು ಪುರಿ ಜಗನ್ನಾಥ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೈಗರ್ ಸಿನಿಮಾದ ಹಿಂದಿ ಚಿತ್ರವನ್ನು ಕರಣ್ ಜೋಹರ್ ಪ್ರಸ್ತುತಪಡಿಸಿದ್ದರು.
ಲೈಗರ್ ಹೀನಾಯ ಸೋಲು; ಮುಂಬೈ ಮನೆ ಖಾಲಿ ಮಾಡಿದ ನಿರ್ದೇಶಕ ಪುರಿ ಜಗನ್ನಾಥ್
ಲೈಗರ್ ಸಿನಿಮಾ ಅಗಸ್ಟ್ 25ರಂದು ತೆರೆ ಕಂಡಿತು. ಇದು ವಿಜಯ್ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ. ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿತ್ತು. ವಿಜಯ್ ದೇವರಕೊಂಡ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಆದರೆ ಆ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಲೈಗರ್ ವಿಫಲವಾಯಿತು. ಸಿನಿಮಾ ಸೋಲಿನ ಬೇಸರದಲ್ಲಿದ್ದ ಪುರಿಗೆ ಈಗ ಇಡಿ ಶಾಕ್ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.