ಟೀವಿ ಸೀರಿಯಲ್‌ನಿಂದ ಬಂದ ಸ್ಟಾರ್‌; 7ನೇ ರ‌್ಯಾಂಕ್ ಬಂದಿದ್ದರೂ ಎಂಜಿನಿಯರಿಂಗ್ ಬಿಟ್ಟಿದ್ದ!

Kannadaprabha News   | Asianet News
Published : Jun 15, 2020, 09:19 AM IST
ಟೀವಿ ಸೀರಿಯಲ್‌ನಿಂದ ಬಂದ ಸ್ಟಾರ್‌; 7ನೇ ರ‌್ಯಾಂಕ್ ಬಂದಿದ್ದರೂ ಎಂಜಿನಿಯರಿಂಗ್ ಬಿಟ್ಟಿದ್ದ!

ಸಾರಾಂಶ

ಬಿಹಾರದ ಪಟನಾ ಮೂಲದ ಸುಶಾಂತ್‌ ಸಿಂಗ್‌ ರಜಪೂತ್‌ 11 ವರ್ಷಗಳ ಹಿಂದೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡು ಮುಂಬೈಗೆ ಬಂದಿದ್ದ ಹುಡುಗ. ಎಂಜಿನಿಯರಿಂಗ್‌ ಓದನ್ನು ಅರ್ಧಕ್ಕೇ ಬಿಟ್ಟು ನಟನಾ ಲೋಕಕ್ಕೆ ಪ್ರವೇಶಿಸಿದ ಸುಶಾಂತ್‌ ಸಾಕಷ್ಟುಶ್ರಮಪಟ್ಟು ಬಹುಬೇಗ ಎತ್ತರಕ್ಕೂ ಏರಿದ್ದರು.

- ‘ಧೋನಿ’ ಸಿನಿಮಾದಿಂದ ದೇಶಾದ್ಯಂತ ಪ್ರಸಿದ್ಧ

- ಸುಶಾಂತ್‌ರ ಕಸಿನ್‌ ಹಾಗೂ ಅತ್ತಿಗೆ ಬಿಹಾರದಲ್ಲಿ ಶಾಸಕರು

- ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೇ 7ನೇ ರಾರ‍ಯಂಕ್‌

'ಸುಶಾಂತ್ ಸಾವು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ'

ಸುಶಾಂತ್‌ ದೆಹಲಿಯಲ್ಲಿ ಓದುತ್ತಿದ್ದಾಗಲೇ 2006ರಲ್ಲಿ ಐಶ್ವರ್ಯಾ ರೈ ಅಭಿನಯದ ‘ಧೂಮ್‌ 2’ ಸಿನಿಮಾದಲ್ಲಿ ಹಿನ್ನೆಲೆ ಡ್ಯಾನ್ಸರ್‌ ಆಗಿ ನಟಿಸಿದ್ದರು. ನಂತರ 2009ರಲ್ಲಿ ಏಕ್ತಾ ಕಪೂರ್‌ ನಿರ್ದೇಶನದ ‘ಪವಿತ್ರ ರಿಶ್ತಾ’ ಧಾರಾವಾಹಿ ಮೂಲಕ ಮುಂಬೈನಲ್ಲಿ ಟಿವಿ ಸೀರಿಯಲ್‌ ನಟನೆ ಆರಂಭಿಸಿದ ಸುಶಾಂತ್‌, ಎರಡು ವರ್ಷ ಪ್ರಸಾರವಾದ ಆ ಧಾರಾವಾಹಿಯಿಂದ ದೇಶಾದ್ಯಂತ ಮನೆಮಾತಾಗಿದ್ದರು. ಎರಡು ವರ್ಷದ ನಂತರ ‘ಕಾಯ್‌ ಪೋ ಚೆ’ ಸಿನಿಮಾದಲ್ಲಿ ಮುಂಚೂಣಿ ನಟನಾಗಿ ಅಭಿನಯಿಸಿದರು. ನಂತರ ಶುದ್ಧ ದೇಸಿ ರೊಮ್ಯಾನ್ಸ್‌ ರಬ್ತಾ, ಕೇದಾರನಾಥ್‌, ಸೊಂಚಿರಿಯಾ, ಮಹೇಂದ್ರ ಸಿಂಗ್‌ ಧೋನಿ, ಚಿಚೋರೆ ಮುಂತಾದ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಹೆಸರು ಗಳಿಸಿದ್ದರು. ಕ್ರಿಕೆಟ್‌ ಬಗ್ಗೆ ಬಾಲ್ಯದಿಂದಲೂ ಬಹಳ ಪ್ರೀತಿ ಹೊಂದಿದ್ದ ಸುಶಾಂತ್‌ಗೆ ಮಹೇಂದ್ರ ಸಿಂಗ್‌ ಧೋನಿಯ ಜೀವನ ಚರಿತ್ರೆ ಆಧರಿತ ಸಿನಿಮಾ ಅತಿಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತ್ತು.

ಸುಶಾಂತ್‌ರ ಸಹೋದರ ಸಂಬಂಧಿ ನೀರಜ್‌ ಕುಮಾರ್‌ ಬಬ್ಲು ಬಿಹಾರದಲ್ಲಿ ಬಿಜೆಪಿ ಶಾಸಕ. ಸುಶಾಂತ್‌ರ ಅತ್ತಿಗೆ ಬಿಹಾರದ ವಿಧಾನಪರಿಷತ್‌ ಸದಸ್ಯೆ. ಸುಶಾಂತ್‌ಗೆ ಒಬ್ಬ ಅಣ್ಣ ಹಾಗೂ ಇಬ್ಬರು ಅಕ್ಕಂದಿರಿದ್ದಾರೆ. 16 ವರ್ಷದವನಿದ್ದಾಗಲೇ ಸುಶಾಂತ್‌ ತಾಯಿಯನ್ನು ಕಳೆದುಕೊಂಡಿದ್ದರು. ಅದು ಇವರನ್ನು ತೀವ್ರವಾಗಿ ಕಾಡಿತ್ತು. ಭೌತಶಾಸ್ತ್ರದ ಒಲಿಂಪಿಯಾಡ್‌ನಲ್ಲಿ ಗೆದ್ದಿದ್ದ ಸುಶಾಂತ್‌ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೇ 7ನೇ ರಾರ‍ಯಂಕ್‌ ಪಡೆದಿದ್ದರು.

ವಾರದ ಹಿಂದಷ್ಟೇ ಇನ್‌ಸ್ಟಾದಲ್ಲಿ ಕಾಣಿಸಿಕೊಂಡಿದ್ದರು

ಏಕ್ತಾ ಕಪೂರ್‌ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ ಒಂದಕ್ಕೆ ಸ್ಪಂದಿಸಿದ್ದೇ ಕೊನೆ, ಆಮೇಲೆ ಸುಶಾಂತ್‌ ಸೋಷಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆ ಪೋಸ್ಟ್‌ನಲ್ಲಿ ಏಕ್ತಾ ಕಪೂರ್‌ ಅವರು, ‘ಇನ್ನೊಂದು ಸೀರಿಯಲ್‌ನಲ್ಲಿ ಎರಡನೇ ಹೀರೋ ಆಗಿದ್ದ ಹುಡುಗನನ್ನು ನಮ್ಮ ಸೀರಿಯಲ್‌ನ ಹೀರೋ ಮಾಡ್ತೀವಿ ಅಂದಾಗ ಚಾನೆಲ್‌ನವರು ಒಪ್ಪಿರಲಿಲ್ಲ. ಆದರೆ ಆತನ ನಗೆಯೇ ಲಕ್ಷಾಂತರ ಜನರ ಹೃದಯ ಗೆಲ್ಲುತ್ತೆ ಅಂತ ನಾವು ಚಾನೆಲ್‌ನವರ ಮನ ಒಲಿಸಿದೆವು. ಸುಶಾಂತ್‌ ಸಿಂಗ್‌ ರಜಪೂತ್‌ ಎಂಬ ಹೀರೋ ಹೀಗೆ ಸೃಷ್ಟಿಯಾದ. 35ನೇ ಸ್ಥಾನದಲ್ಲಿದ್ದ ನಮ್ಮ ಧಾರಾವಾಹಿ ಮೊದಲ ಸ್ಥಾನದಲ್ಲಿ ಮಿಂಚತೊಡಗಿತು’ ಎಂದಿದ್ದರು. ಇದಕ್ಕೆ ಸುಶಾಂತ್‌, ‘ಇದಕ್ಕಾಗಿ ನಾನು ನಿಮ್ಮನ್ನು ಕೊನೆಯವರೆಗೂ ನೆನೆಯುತ್ತೇನೆ’ ಎಂದು ರಿಪ್ಲೈ ಮಾಡಿದ್ದರು. ಇದಕ್ಕೆ ‘ಲವ್‌ ಯೂ ಸುಶಾಂತ್‌’ ಎಂದು ಏಕ್ತಾ ಪ್ರತಿಕ್ರಿಯಿಸಿದ್ದರು. ಇದೀಗ ವಾರದೊಳಗೇ ಎಲ್ಲವೂ ಬದಲಾಗಿದ್ದು, ‘ಇದು ಅನ್ಯಾಯ ಸುಶೀ.. ನಾಟ್‌ ಫೇರ್‌ ಮೈ ಬೇಬಿ’ ಅಂತ ಏಕ್ತಾ ಕಂಬನಿ ಮಿಡಿದಿದ್ದಾರೆ.

 

ಸಿನಿಮಾ ಜಗತ್ತಿನಲ್ಲಿ ಮರಣ ಮೃದಂಗ

ಸದ್ಯ ಕೊರೋನಾ ಸಂಕಷ್ಟವೋ, 2020ನೇ ವರ್ಷ ಸಿನಿಮಾ ಮಂದಿಯ ಪಾಲಿಗೆ ಗಂಡಾಂತರವೋ ತಿಳಿಯದು. ಒಬ್ಬರ ನಂತರ ಒಬ್ಬರು ಸಿನಿಮಾ ಮಂದಿ ತಮ್ಮ ಕೊನೆಯ ಪಯಣ ಮುಗಿಸುತ್ತಿದ್ದಾರೆ. ಮೊನ್ನೆಯಷ್ಟೆಕನ್ನಡದ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ನಿಧನರಾದರು. ಇದಕ್ಕೂ ಮೊದಲು ಬುಲೆಟ್‌ ಪ್ರಕಾಶ್‌, ಮೈಕಲ್‌ ಮಧು ಇನ್ನಿಲ್ಲವಾದರು. ಖ್ಯಾತ ನಿರ್ದೇಶಕ ಬಸು ಚಟರ್ಜಿ, ನಟರಾದ ರಿಶಿ ಕಪೂರ್‌, ಇರ್ಫಾನ್‌ ಖಾನ್‌, ಸಂಗೀತ ನಿರ್ದೇಶಕ ವಾಜಿದ್‌ ಖಾನ್‌ ಹೀಗೆ ಸಾಲು ಸಾಲು ಕಲಾವಿದರನ್ನು 2020 ಬಲಿ ತೆಗೆದುಕೊಳ್ಳುತ್ತಿದೆಯಲ್ಲ ಎಂದುಕೊಳ್ಳುವಾಗಲೇ ಬಾಲಿವುಡ್‌ನಿಂದ ಮತ್ತೊಂದು ದುರ್ಮರಣದ ವಾರ್ತೆ. ಎಂಎಸ್‌ ಧೋನಿ ಅನ್‌ಟೋಲ್ಡ್‌ ಸ್ಟೋರಿಯ ಹೀರೋ ಸುಶಾಂತ್‌ ಸಿಂಗ್‌ ರಜಪೂತ್‌ ಮುಂಬೈ ಬಾಂದ್ರಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭರವಸೆಯ ನಟನನ್ನು ಕಳೆದುಕೊಂಡ ದುಃಖ ಬಾಲಿವುಡ್‌ನಲ್ಲಿ ಮಡುಗಟ್ಟಿದೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!

ನೀವು ತುಂಬಾ ನೆನಪಾಗುತ್ತೀರಿ ಸರ್‌!

ಇರ್ಫಾನ್‌ ಖಾನ್‌ ನಿಧನರಾದಾಗ ‘ನೀವು ಬಹಳ ನೆನಪಾಗ್ತೀರಿ ಸರ್‌’ ಅಂತ ಸುಶಾಂತ್‌ ಬರೆದುಕೊಂಡಿದ್ದರು. ಈಗ ತಾವೇ ನೆನಪಾಗಿ ಉಳಿದಿದ್ದಾರೆ. ಜೂ 3ಕ್ಕೆ ಅಮ್ಮನ ಭಾವಚಿತ್ರ ಹಾಕಿ ‘ಬದುಕು ಕ್ಷಣಿಕ’ ಅಂತ ಬರೆದುಕೊಂಡಿದ್ದರು. ಲಾಕ್‌ಡೌನ್‌ ಇಲ್ಲದಿದ್ದರೆ ‘ದಿಲ್‌ ಬೇಚಾರ’ ಸಿನಿಮಾ ರಿಲೀಸ್‌ ಆಗುತ್ತಿತ್ತು. ನೆಟ್‌ಫ್ಲಿಕ್ಸ್‌ ಒರಿಜಿನಲ್ಸ್‌ನಲ್ಲಿ ಅಭಿನಯಿಸಲು ಮಾತುಕತೆ ನಡೆದಿತ್ತು. ‘ಡ್ರೈವ್‌’ ಇವರ ಕೊನೆಯ ಸಿನಿಮಾವಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?