
ಆಂಧ್ರಪ್ರದೇಶದಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಕನ್ನಡ ಚಿತ್ರವು ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಆಂಧ್ರಪ್ರದೇಶ ಸರ್ಕಾರವು ಟಿಕೆಟ್ ಬೆಲೆಯನ್ನು ಹೆಚ್ಚಿಸಲು ಅನುಮತಿ ನೀಡಿದೆ. ಇದರಿಂದಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 75 ರೂ. + ಜಿಎಸ್ಟಿ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂ. + ಜಿಎಸ್ಟಿ ದರ ಏರಿಕೆಯಾಗಿದೆ.
ಇಂದು ಪ್ರೀಮಿಯರ್ ಶೋಗಳಿಗೆ ಸರ್ಕಾರ ಅನುಮತಿ:
ಅಕ್ಟೋಬರ್ 1ರ ರಾತ್ರಿ 10 ಗಂಟೆಯಿಂದ ಪ್ರೀಮಿಯರ್ ಶೋಗಳಿಗೂ ಸರ್ಕಾರ ಅನುಮತಿ ನೀಡಿದ್ದು, ಈ ದರ ಏರಿಕೆ ಅಕ್ಟೋಬರ್ 2ರಿಂದ 11ರವರೆಗೆ ಜಾರಿಯಲ್ಲಿರಲಿದೆ.ಆದರೆ, ಈ ನಿರ್ಧಾರಕ್ಕೆ ಟಾಲಿವುಡ್‌ನ ಕೆಲವು ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ಅಡೆತಡೆಗಳು ಎದುರಾಗುತ್ತಿರುವಾಗ, ಕನ್ನಡ ಚಿತ್ರದ ಟಿಕೆಟ್ ದರ ಹೆಚ್ಚಿಸುವುದು ಅನಗತ್ಯ ಎಂದು ವಾದಿಸಿರುವ ಅವರು, ‘ಕಾಂತಾರ’ ಬಹಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಿದ್ದಾರೆ. ಇದಕ್ಕೆ ಕಾರಣವಾಗಿ, ಹೈದರಾಬಾದ್‌ನ ತೆಲುಗು ಪ್ರಿ-ರಿಲೀಜ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದನ್ನು ತೆಲುಗು ಪ್ರೇಕ್ಷಕರು ಕೆಂಗಣ್ಣಿಗೆ ಗುರಿಯಾಗಿದೆ.
ಕಾಂತಾರ ಬೆಂಬಲಕ್ಕೆ ನಿಂತ ಡಿಸಿಎಂ ಪವನ್ ಕಲ್ಯಾಣ್;
ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್, ಕನ್ನಡ ಚಿತ್ರರಂಗದ ದಿಗ್ಗಜರಾದ ರಾಜ್‌ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿಯವರನ್ನು ತೆಲುಗು ಪ್ರೇಕ್ಷಕರು ಸದಾ ಬೆಂಬಲಿಸಿದ್ದಾರೆ ಎಂದಿದ್ದಾರೆ. ಆದರೆ, ಎರಡೂ ರಾಜ್ಯಗಳ ಚಿತ್ರರಂಗಗಳು ವ್ಯಾಪಾರದ ಸಮಸ್ಯೆಗಳನ್ನು ಒಟ್ಟಿಗೆ ಚರ್ಚಿಸಿ ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ತೆಲುಗು ಚಿತ್ರಗಳಾದ ‘OG’, ‘ಹರಿಹರ ವೀರಮಲ್ಲು’, ‘ಗೇಮ್ ಚೇಂಜರ್’ ಮತ್ತು ‘RRR’ಗೆ ಎದುರಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರರಂಗದ ಪ್ರಚಾರವನ್ನು ರಾಷ್ಟ್ರೀಯ ಭಾವನೆಯೊಂದಿಗೆ ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ. ಗೀತಾ ಆರ್ಟ್ಸ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಕರ್ನಾಟಕದಲ್ಲಿ ತೆಲುಗು ಚಿತ್ರರಂಗಕ್ಕೆ ಬೆಂಬಲ ನೀಡುವಂತೆ ಕನ್ನಡ ಚಿತ್ರೋದ್ಯಮಕ್ಕೆ ಮನವಿ ಮಾಡಿದೆ. ಆದರೆ, ತೆಲಂಗಾಣ ಸರ್ಕಾರವು ‘ಕಾಂತಾರ’ ಡಬ್ಬಿಂಗ್ ಚಿತ್ರವೆಂದು ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಿಲ್ಲ. ಕಲೆ ಜನರನ್ನು ಒಗ್ಗೂಡಿಸಬೇಕೇ ಹೊರತು ಬೇರ್ಪಡಿಸಬಾರದು ಎಂಬ ಆಂಧ್ರಪ್ರದೇಶ ಸರ್ಕಾರದ ಹೇಳಿಕೆಯ ಹೊರತಾಗಿಯೂ, ಟಿಕೆಟ್ ದರ ಏರಿಕೆಯಿಂದ ಉಂಟಾದ ವಿವಾದವು ‘ಕಾಂತಾರ’ ಬಿಡುಗಡೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬುದು ಕಾದುನೋಡಬೇಕಾದ ವಿಷಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.