
ನಟಿ ಕಂಗನಾ ರಣಾವತ್ ಅವರ ಗ್ರಹಗತಿ ಇನ್ನೂ ಸರಿಯಾದಂತೆ ಕಾಣುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಒಂದರ ಮೇಲೊಂದರಂತೆ ಇವರಿಗೆ ಶಾಕ್ ಎದುರಾಗುತ್ತಿದೆ. ಇವರು ಆಡುವ ಮಾತುಗಳು ವಿವಾದಕ್ಕೆ ಸಿಲುಕಿದರೆ, ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್ ಆಗುತ್ತಿವೆ. ಉತ್ತಮ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡಿದರೂ ಅದ್ಯಾಕೋ ಯಶಸ್ಸೇ ಕಾಣಿಸುತ್ತಿಲ್ಲ. ಇದೀಗ ಅವರ ಬಹು ನಿರೀಕ್ಷೆಯ ತೇಜಸ್ ಚಿತ್ರಕ್ಕೂ ಇದೇ ಗತಿಯಾಗಿದೆ! ಇದೇ 27ರಂದು ಚಿತ್ರ ಬಿಡುಗಡೆಯಾದರೂ ಭಾರಿ ಫ್ಲಾಪ್ ಎಂದು ಸಾಬೀತಾಗಿದೆ. ಒಂದರ ಮೇಲೊಂದರಂತೆ ಸೋಲು ಕಾಣುತ್ತಿರುವ ನಟಿಗೆ ಈ ಚಿತ್ರದ ಮೇಲೆ ಬಹಳ ಕನಸು ಇತ್ತು. ದೇಶಪ್ರೇಮವನ್ನುಬಿಂಬಿಸುವ ಈ ಚಿತ್ರ ಯಶಸ್ಸು ಕಾಣಲೆಂದು ನಟಿ ಹಲವಾರು ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದು, ಪೂಜೆ-ಪುನಸ್ಕಾರ ನೆರವೇರಿಸಿದ್ದರು. ಆದರೆ ನಟಿಯ ಟೈಂ ಸರಿಯಿದ್ದಂತಿಲ್ಲ. ಚಿತ್ರ ಯಶಸ್ಸು ಕಾಣಿಸುವ ಹಾಗೆ ತೋರುತ್ತಿಲ್ಲ.
ಪ್ರೇಕ್ಷಕರ ಕೊರತೆಯಿಂದಾಗಿ ಭಾರತದಾದ್ಯಂತ 95 ಪ್ರತಿಶತ ಪ್ರದರ್ಶನಗಳನ್ನು (ಬೆಳಿಗ್ಗೆ 10:30 ಗಂಟೆಗೆ) ರದ್ದುಗೊಳಿಸಲಾಗಿದೆ. ತೇಜಸ್ ಮೊದಲ ದಿನವೇ ಅತ್ಯಂತ ಕಳಪೆ ಮುಂಗಡ ಬುಕ್ಕಿಂಗ್ ಪಡೆದಿದೆ. ರಾಷ್ಟ್ರೀಯ ಮಲ್ಟಿಪ್ಲೆಕ್ಸ್‌ಗಳ ಸರಣಿಯಲ್ಲಿ (PVR, INOX ಮತ್ತು Cinepolis) ಈ ಚಿತ್ರದ 3 ಸಾವಿರ ಟಿಕೆಟ್‌ಗಳು ಸಹ ಮಾರಾಟವಾಗಿಲ್ಲ. ಕಳೆದ 8 ವರ್ಷಗಳಿಂದ ಸಾಲು ಸಾಲು ಸೋಲುತ್ತಿರುವ ಕಂಗನಾಗೆ ಬರಸಿಡಿಲು ಬಡಿದಂತಾಗಿದೆ. ದೇಶಪ್ರೇಮ ಸಾರುವ ತೇಜಸ್ ಕಡೆಗೂ ಜನ ಒಲವು ತೋರುತ್ತಿಲ್ಲ. ಚಿತ್ರ ಬಿಡುಗಡೆಯಾದ ದಿನ ಅಂದರೆ ಕಳೆದ ಶುಕ್ರವಾರ ಭಾರತದಾದ್ಯಂತ ಕೇವಲ 1.25 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನಕ್ಕೆ ಒಟ್ಟಾರೆ ಗಳಿಗೆ 2.5 ಕೋಟಿಯಾಗಿದೆ. ಕಂಗನಾ ಅವರನ್ನು ಕಂಡರೆ ಸದಾ ಟ್ರೋಲ್ ಮಾಡುತ್ತಿರುವವರಿಗೆ ನಟಿ ಮತ್ತೊಮ್ಮೆ ಆಹಾರ ಒದಗಿಸಿದಂತೆ ಆಗಿದೆ.
ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ- ಬ್ರೇಕಪ್ ಸ್ಟೋರಿಯನ್ನೂ ವಿವರಿಸಿದ ನಟಿ
ಇದೀಗ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್.ಖಾನ್ (KRK) ಕಂಗನಾ ಮತ್ತು ಅವರ ತೇಜಸ್ ಚಿತ್ರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಚಿತ್ರರಂಗದಲ್ಲಿ ಇದೇ ರೀತಿಯ ಸಮಯಕ್ಕೆ ಕಾದು ಕುಳಿತುಕೊಳ್ಳುವ ಕೆಆರ್ಕೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕಂಗನಾ ಮತ್ತು ಅವರ ತೇಜಸ್ ಚಿತ್ರದ ಕುರಿತು ಕುಹಕವಾಡಿದ್ದಾರೆ. ದೇಶ ಭಕ್ತೆ ಕಂಗನಾ ಅವರ ತೇಜಸ್ ಸಿನಿಮಾ ಬಿಡುಗಡೆಯಾಗಿದ್ದು, ದೇಶಾದ್ಯಂತ ಹಂಗಾಮಾ ಶುರುವಾಗಿದೆ. ತೇಜಸ್ ಸಿನಿಮಾ ಯಾವ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಥಿಯೇಟರ್ ಮುಂಭಾಗದಲ್ಲಿ ಏನಿಲ್ಲ ಅಂದರೂ ಟಿಕೆಟ್ ಸಲುವಾಗಿ 2 ಕಿಲೋ ಮೀಟರ್ ಸರತಿ ಸಾಲಿದೆ. ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ದೇಶದಲ್ಲಿ ದಂಗೆ ಏಳುವ ಸಾಧ್ಯತೆ ಇದೆ ಎಂದು ಕುಹಕವಾಡಿದ್ದಾರೆ ಕೆಆರ್ಕೆ.
ಕಂಗನಾ ದೀದೀ ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮುಂದಿನ ಸಲ ನಿಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಡಿ. ಈ ಬಾಲಿವುಡ್‌ನವರು ನಿಮ್ಮನ್ನು ಬಿಡುವುದಿಲ್ಲ ಎಂದು ನಟಿಗೆ ಅಪಹಾಸ್ಯ ಮಾಡಿದ್ದಾರೆ. ಗದರ್, ಪಠಾಣ್, ಜವಾನ್ ಸಿನಿಮಾದ ಎಲ್ಲ ರೆಕಾರ್ಡ್‌ಗಳನ್ನು ತೇಜಸ್ ಸಿನಿಮಾ ಮುರಿಯಬೇಕಿತ್ತು. ಆದ್ರೆ ತೇಜಸ್ ಸಿನಿಮಾ ಲೈಫ್‌ಟೈಮ್ ಗಳಿಕೆಯೇ 2 ಕೋಟಿಯಷ್ಟೇ ಎಂದು ತಮಾಷೆ ಮಾಡಿದ್ದಾರೆ.
ಬಾಲಿವುಡ್ ಖಾನ್ಗಳ ವಿರುದ್ಧ ಕಿಡಿ ಕಾರುತ್ತಲೇ ಬಿಗ್ಬಾಸ್ಗೆ ಕಂಗನಾ ಎಂಟ್ರಿ! ಹುಬ್ಬೇರಿಸಿದ ಫ್ಯಾನ್ಸ್
ಸರ್ವೇಶ್ ಮೇವಾರ್ ನಿರ್ದೇಶನದಲ್ಲಿ ತೇಜಸ್ ಸಿನಿಮಾ ಮೂಡಿಬಂದಿದೆ. ವೈಮಾನಿಕ ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಚಿತ್ರದಲ್ಲಿ ಭಾರತೀಯ ಏರ್‌ಫೋರ್ಸ್‌ನ ಪೈಲಟ್ ಆಗಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ರಹಸ್ಯ ಕಾರ್ಯಾಚರಣೆಯೊಂದರ ಸುತ್ತ ನಡೆಯುವ, ಗೂಢಚಾರದ ರೋಚಕ ಕಥೆ ಇದಾಗಿದ್ದರೂ ಜನರು ಯಾಕೋ ಇದನ್ನು ಮೆಚ್ಚಿಕೊಂಡಂತೆ ಕಾಣುತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.