ಲೋಕಸಭೆ ಚುನಾವಣೆಗೆ ನಟಿ ಕಂಗನಾ ರಣಾವತ್ ಸ್ಪರ್ಧಿಸಲಿದ್ದಾರೆಯೆ? ದ್ವಾರಕಕ್ಕೆ ಭೇಟಿ ಕೊಟ್ಟ ನಟಿ ಹೇಳಿದ್ದೇನು?
ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್ ಮೇಲೆ ಶಾಕ್ ನೀಡುತ್ತಿವೆ. ಮೊನ್ನೆಯಷ್ಟೇ ಇವರ ತೇಜಸ್ ಚಿತ್ರ ಬಿಡುಗಡೆಯಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಹೇಳಿದ್ದಷ್ಟು ಗಳಿಕೆಯನ್ನು ಈ ಚಿತ್ರ ಮಾಡಲಿಲ್ಲ. ಇದನ್ನು ಹೊರತುಪಡಿಸಿದರೆ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ. ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವು ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರ ಕೂಡ ಮುಂದೂಡತ್ತಲೇ ಸಾಗಿದೆ.
ಇದರ ಮಧ್ಯೆಯೇ ನಟಿ ಕಂಗನಾ ಹಲವರು ಬಹು ನಿರೀಕ್ಷೆಯಿಂದ ಇದ್ದ ಉತ್ತರವೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಕಂಗನಾ, ನೇರಾನೇರ ಮಾತನಾಡುವಲ್ಲಿ ನಿಸ್ಸೀಮರು. ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿ, ಮನಸ್ಸಿಗೆ ತೋಚಿದ್ದನ್ನು ಹೇಳಿ ಕಾಂಟ್ರವರ್ಸಿಗೆ ಸಿಲುಕುವವರು. ಬಿಜೆಪಿ ನಾಯಕರ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ನಟಿಗೆ ರಾಜಕೀಯ ಪ್ರವೇಶದ ಕುರಿತು ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ನಟಿ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ.
ಬಾಲಿವುಡ್ ಖಾನ್ಗಳ ವಿರುದ್ಧ ಕಿಡಿ ಕಾರುತ್ತಲೇ ಬಿಗ್ಬಾಸ್ಗೆ ಕಂಗನಾ ಎಂಟ್ರಿ! ಹುಬ್ಬೇರಿಸಿದ ಫ್ಯಾನ್ಸ್
ಹೌದು. ಇದೇ ಮೊದಲ ಬಾರಿಗೆ ನಟಿ ರಾಜಕೀಯದ ಸುಳಿವು ನೀಡಿದ್ದಾರೆ. ತೇಜಸ್ ಚಿತ್ರದ ಬಿಡುಗಡೆಯ ನಂತರ ಗುಜರಾತ್‌ನ ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ ನಟಿ ಇದಾದ ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮುಂಬರವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಕೆಲವು ದಿನಗಳಿಂದ ನನಗೆ ತುಂಬಾ ಸಮಸ್ಯೆಯಾಗಿತ್ತು. ನನಗೆ ದ್ವಾರಕಾಧೀಶನನ್ನು ಭೇಟಿ ಮಾಡಬೇಕೆಂದು ಅನಿಸಿತು, ನಾನು ಈ ಶ್ರೀ ಕೃಷ್ಣನ ದಿವ್ಯ ನಗರವಾದ ದ್ವಾರಕಾಗೆ ಬಂದ ತಕ್ಷಣ, ಇಲ್ಲಿನ ಧೂಳನ್ನು ಸ್ಪರ್ಶಿಸುತ್ತಿದ್ದಂತೆಯೇ ನನ್ನ ಚಿಂತೆಗಳೆಲ್ಲವೂ ದೂರವಾಗಿದೆ. ನನ್ನ ಮನಸ್ಸು ಸ್ಥಿರವಾಯಿತು ಮತ್ತು ನಾನು ಅನಂತ ಆನಂದವನ್ನು ಅನುಭವಿಸಿದೆ. ಓ ದ್ವಾರಕಾ ಸ್ವಾಮಿಯೇ, ಹರೇ ಕೃಷ್ಣ ಎಂದು ನಟಿ ಬರೆದುಕೊಂಡಿದ್ದಾರೆ.
ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ, ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಕಂಗನಾ ಹೇಳಿದ್ದು, ಇದು ಸಕತ್ ಸುದ್ದಿಯಾಗಿದೆ.