
ಪ್ರತಿವರ್ಷದಂತೆ ಈ ವರ್ಷವೂ, ಐಶ್ವರ್ಯ ರೈ ಕಾನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ರಾಣಿಯಂತೆ ನಡೆದರು. ಅವರ ಆತ್ಮವಿಶ್ವಾಸ ಈ ಬಾರಿಯೂ ಎದ್ದು ಕಾಣುತ್ತಿತ್ತು. ಸಾಮಾಜಿಕ ಮಾಧ್ಯಮಗಳು ಅವರ ಬಗ್ಗೆ ಚರ್ಚೆಗಳಿಂದಲೇ ತುಂಬಿದ್ದವು, ಆದರೆ ಕೆಲವರು ಮಾತ್ರ ನಟಿಯ ಬಗ್ಗೆ, ನಟಿಯ ವಯಸ್ಸಿನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. 2026 ರ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯ ರೈ ಬಚ್ಚನ್ ಅವರ ಲುಕ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಚರ್ಚೆಯ ನಡುವೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ಐಶ್ವರ್ಯ ರೈ ಬಚ್ಚನ್ ಅವರನ್ನು ಬೆಂಬಲಿಸಿ, ಟ್ರೋಲ್ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ. ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನೀಲಿ ಬಣ್ಣದ ಗೌನ್‌ನಲ್ಲಿ ಐಶ್ವರ್ಯ ರೈ ಮಿಂಚುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಅವರ ಲುಕ್ ಮತ್ತು ವಯಸ್ಸಿನ ಬಗ್ಗೆ ಕಾಮೆಂಟ್ ಮಾಡುತ್ತಿರುವವರ ವಿರುದ್ಧ ಕಿಡಿ ಕಾರಿ, ಮಾಜಿ ವಿಶ್ವಸುಂದರಿಗೆ ಬೆಂಬಲ ಸೂಚಿಸಿದ್ದಾರೆ..
ಯಾವುದೇ ಮಹಿಳೆ ಇತರರನ್ನು ಮೆಚ್ಚಿಸಲು ಬದುಕುವುದಿಲ್ಲ ಎಂದಿರುವ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಫ್ಯಾಷನ್ ಮತ್ತು ಸ್ಟೈಲ್ ವ್ಯಕ್ತಿಯ ಸ್ವಂತ ಅಭಿವ್ಯಕ್ತಿಯಾಗಿದೆ. ಪ್ರತಿಯೊಬ್ಬರೂ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ನೋಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಯಾವುದೇ ಮಹಿಳೆ ಯಾರನ್ನೂ ಮೆಚ್ಚಿಸಲು ಬದುಕುವುದಿಲ್ಲ” ಎಂದು ಬರೆದಿದ್ದಾರೆ. ಜೊತೆಗೆ ಕಂಗನಾ ಐಶ್ವರ್ಯಾ ಅವರನ್ನು ಹೊಗಳುತ್ತಾ, "ಐಶ್ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತಾರೆ, ಮತ್ತು ಕೆಲವರು ಅವಳನ್ನು ಬೇರೆಯದೇ ಬೆಳಕಿನಲ್ಲಿ ನೋಡಲು ಬಯಸಿದರೆ, ಅವರು ಮೊದಲು ತಮ್ಮನ್ನು ತಾವು ನೋಡಿಕೊಳ್ಳಬೇಕು. ಐಶ್ವರ್ಯಾ ಯಾರನ್ನೂ ಮೆಚ್ಚಿಸಲು ರೆಡ್ ಕಾರ್ಪೆಟ್‌ಗೆ ಬರುವುದಿಲ್ಲ; ಬದಲಿಗೆ, ಅವರು ತನ್ನದೇ ಆದ ವಿಶಿಷ್ಟ ಕಾಂತಿ ಮತ್ತು ಆತ್ಮವಿಶ್ವಾಸದೊಂದಿಗೆ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾರೆ. ಜನರು ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡುವ ಅಭ್ಯಾಸ ಹೊಂದಿಲ್ಲದಿದ್ದರೆ, ಅವರು ಈಗಲೇ ಅದಕ್ಕೆ ಒಗ್ಗಿಕೊಳ್ಳಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ ಕಂಗನಾ.
2026 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ, ಐಶ್ವರ್ಯಾ ರೈ ಬಚ್ಚನ್ ಖ್ಯಾತ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಸ್ಟೈಲಿಶ್ ನೀಲಿ ಗೌನ್ ಧರಿಸಿದ್ದರು. ಈ ಡಿಸೈನರ್ ವೇರ್ ಬಾಹ್ಯಾಕಾಶದಿಂದ ಸ್ಫೂರ್ತಿ ಪಡೆದಿದೆ. ಈ ಉಡುಗೆ ಸೂಕ್ಷ್ಮವಾದ ಸ್ಫಟಿಕ ಕಸೂತಿಯನ್ನು ಒಳಗೊಂಡಿತ್ತು. ಇದನ್ನು ರಚಿಸಲು ಸುಮಾರು 1,500 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನು ಐಶ್ವರ್ಯಾ ಅವರ ಲುಕ್ ಬಹಿರಂಗವಾದ ತಕ್ಷಣ, ಅದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಯಿತು, ಅನೇಕರು ಆಕೆಯ ಸೌಂದರ್ಯವನ್ನು ಹೊಗಳಿದರೆ, ಇತರರು ಅವರ ಲುಕ್ ಮತ್ತು ವಯಸ್ಸನ್ನು ಟೀಕಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.